ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ರಾಜ್ಯದಾದ್ಯಂತ ಆಯ್ಕೆಯಾಗಿರುವ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಐದು ದಿನಗಳ ಕಾಲ ವಿಶೇಷ ತರಬೇತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದು ಫೆ.16ರಿಂದ ಆರಂಭವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ರಾಜ್ಯದಾದ್ಯಂತ ಎಲ್ಲ ಗ್ರಾಪಂ ಸದಸ್ಯರಿಗೆ ನೀಡಲಾಗುವ ಈ ತರಬೇತಿ ವರ್ಚುವಲ್ ಮೂಲಕ ನಡೆಯಲಿದೆ. ಸುಮಾರು 900 ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದು, ಇದಕ್ಕಾಗಿ 300 ಕೋಟಿ ರೂ.ಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ನಡೆಯಲಿದೆ ಎಂದರು.
ಸದಸ್ಯರು ತಮ್ಮ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಯಾವ ರೀತಿಯಲ್ಲಿ ಆಡಳಿತ ನಡೆಸಬೇಕು ಎಂಬುದರ ತಿಳುವಳಿಕೆ ನೀಡಲಾಗುತ್ತದೆ. ಇದಾದ ನಂತರ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳಿಗೆ ತರಬೇತಿ ನೀಡಲಾಗುತ್ತದೆ ಎಂದರು.
ಇನ್ನು, ಮುಂಬರುವ ಎಪ್ರಿಲ್ ತಿಂಗಳ ವೇಳೆಗೆ ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಗೆ ರಾಜ್ಯ ಸರ್ಕಾರ ಸಿದ್ದವಿದೆ ಎಂದರು.
ಸಂವಿಧಾನದ ಅನ್ವಯ ಮೂರು ಹಂತದ ಪಂಚಾಯ್ತಿ ಪದ್ದತಿ ಸದ್ಯ ಇದೆ. ಆದರೆ, ತಾಲೂಕು ಪಂಚಾಯ್ತಿಯ ಅಗತ್ಯ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ವಿಚಾರವನ್ನು ಮುಂದಿನ ಅಧಿವೇಶನದಲ್ಲಿ ಚರ್ಚಿಸಲಾಗುವುದು. ಆನಂತರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರದ ವರದಿ ಸಲ್ಲಿಸಲಾಗುವುದು ಎಂದರು.
ಈ ತರಬೇತಿ ಅವಧಿಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರದ ಯೋಜನೆಗಳ ವ್ಯವಸ್ಥಿತ ಅನುಷ್ಠಾನ, ಆಡಳಿತ ವ್ಯವಸ್ಥೆ, ಕೈಗೊಳ್ಳಬಹುದಾದ ಕಾಮಗಾರಿಗಳು, ಅನುದಾನದ ಹಂಚಿಕೆ ಮುಂತಾದವುಗಳ ಪರಿಚಯ ನೀಡಲಾಗುವುದಲ್ಲದೆ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರಿಗೆ ಪ್ರತ್ಯೇಕವಾಗಿ ತರಬೇತಿ ನೀಡಲಾಗುವುದು. ಪಂಚಾಯಿತಿ ಸದಸ್ಯರಿಗೆ ಊಟ. ವಸತಿ, ಪ್ರಯಾಣ ವೆಚ್ಚ ಮುಂತಾದವುಗಳನ್ನು ಸರ್ಕಾರದಿಂದ ಭರಿಸಲಾಗುವುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post