ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹುಂಚ ಗ್ರಾಮದಲ್ಲಿ ನಡೆಯುತ್ತಿರುವ ನವೋದಯ ಮತ್ತು ಮೊರಾರ್ಜಿ ಶಿಬಿರದ 45 ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸದ ಅಂಗವಾಗಿ ಗಾಜನೂರು ನವೋದಯ ಶಾಲೆಗೆ ಭೇಟಿ ನೀಡಿದರು.
ಹೊಂಬುಜ ಕ್ಷೇತ್ರದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಈ ಶಿಬಿರ ಹಾಗೂ ಪ್ರವಾಸವನ್ನು ಆಯೋಜಿಸಲಾಗಿತ್ತು.
ಹೇಗಿತ್ತು ಕಲಿಕಾ ಪ್ರವಾಸ?
ಶಿಬಿರದ ಮಕ್ಕಳು ನವೋದಯ ಶಾಲೆಯ ಸುಸಜ್ಜಿತ ಕಲಿಕಾ ಕೊಠಡಿಗಳು, ಗ್ರಂಥಾಲಯ, ಅಟಲ್ ತಿಂಕರಿಂಗ್ ಲ್ಯಾಬ್, ಕವಿ ವನ, ಕ್ರೀಡಾಂಗಣ, ಊಟದ ಹಾಲ್ ಸೇರಿದಂತೆ ನವೋದಯ ಶಾಲೆಯ ಕ್ಯಾಂಪಸ್ ನೋಡಿ ಆನಂದಿಸಿದರು.
ಈ ಸಂದರ್ಭದಲ್ಲಿ ನವೋದಯ ಶಾಲೆಯ ಪ್ರಸ್ತುತ 7ನೆಯ ತರಗತಿಯಲ್ಲಿ ಓದುತ್ತಿರುವ ಮಕ್ಕಳು, ಹುಂಚ ಶಿಬಿರದ ಮಕ್ಕಳ ಜೊತೆ ತಮ್ಮ ನವೋದಯ ಪರೀಕ್ಷೆಯ ಅನುಭವ, ಪ್ರವೇಶ ಪರೀಕ್ಷೆಯ ತಯಾರಿ, ಸಮಯ ನಿರ್ವಹಣೆ ಮತ್ತು ನವೋದಯ ಶಾಲೆಯ ದಿನಚರಿ ಹಂಚಿಕೊಂಡರು.
ಜವಾಹರ ನವೋದಯ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ವಲ್ಲಯಾಮೈ ಅವರು ಮಕ್ಕಳನ್ನು ಕುರಿತು ಮಾತನಾಡಿ, ಜವಾಹರ ನವೋದಯ ವಿದ್ಯಾಲಯ, ಭಾರತದ ಕೇಂದ್ರ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಉಚಿತ ವಸತಿ ಶಾಲೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಆರ್ಥಿಕ ಅಥವಾ ಸಾಮಾಜಿಕ ಪರಿಸ್ಥಿತಿ ಲೆಕ್ಕಿಸದೆ, ಅವರಿಗೆ ಉತ್ತಮವಾದ ಆಧುನಿಕ ವಿದ್ಯಾಭ್ಯಾಸದ ಅವಕಾಶ ಕಲ್ಪಿಸಿಕೊಡುವುದು ಇದರ ಉದ್ದೇಶವಾಗಿದೆ ಎಂದರು.
ನವೋದಯ ಪ್ರವೇಶ ಪರೀಕ್ಷೆಗೆ ಅಣಿಯಾಗಿರುವ ಶಿಬಿರದ ಎಲ್ಲಾ ಮಕ್ಕಳಿಗೆ, ಶಿಕ್ಷಣದ ಮಹತ್ವ ತಿಳಿಸಿ, ನವೋದಯ ಪ್ರವೇಶ ಪರೀಕ್ಷೆಯನ್ನು ಶಾಂತಚಿತ್ತರಾಗಿ ಏಕಾಗ್ರತೆಯಿಂದ ಬರೆದು, ನವೋದಯ ಶಾಲೆಗೆ ಉತ್ತಿರ್ಣರಾಗಿ ಎಂದು ಶುಭ ಹಾರೈಸಿದರು.
ಶಿಬಿರದ ರೂವಾರಿ ಮತ್ತು ನವೋದಯ ಶಾಲೆಯ 8ನೆಯ ಬ್ಯಾಚ್ ವಿದ್ಯಾರ್ಥಿಯಾದ ಪ್ರಕಾಶ್ ಜೋಯ್ಸ್ – ಸೀನಿಯರ್ ಮ್ಯಾನೇಜರ್ ಕಾಗ್ನಿಜಂಟ್ ಮಾತನಾಡಿ, ಹುಂಚ ವ್ಯಾಪ್ತಿಯ (ಪರೀಕ್ಷೆಗೆ ದಾಖಲಿಸಿದ) ವಿದ್ಯಾರ್ಥಿಗಳಿಗೆ ಉಚಿತವಾಗಿ ನವೋದಯ ಮತ್ತು ಮೊರಾರ್ಜಿ ಶಾಲೆಯ ಪರಿಚಯ, ಆಯ್ಕೆ ಪ್ರಕ್ರಿಯೆ ಮಾಹಿತಿ, ಕೋಚಿಂಗ್, ಮಾದರಿ ಪರೀಕ್ಷೆ, ಕಲಿಕಾ ಸಾಮಗ್ರಿಗಳು, ಸಮಯ ನಿರ್ವಹಣೆ ಮತ್ತು ಇತರೆ ಉಪಯುಕ್ತ ಮಾಹಿತಿಗಳನ್ನು ಉಚಿತವಾಗಿ ಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಿಬಿರದ ಶಿಕ್ಷಕರ ವೃಂದದ ಶಿವಕುಮಾರ್, ಅಕ್ಷತ, ಸವಿತಾ ಹಾಗೂ ಸಂಚಾಲಕರಾದ ಅಭಿಷೇಕ್, ಸಂಜಯ್, ನವೋದಯ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಶಿಬಿರದ ಮಾರ್ಗದರ್ಶಕರಾದ ನವೀನ್ ಕುಮಾರ್ ಎಂ ಪಿ – ಪ್ರಾಂಶುಪಾಲರು, ಮ್ಯಾಕ್ಸ್ ಆಸ್ಪತ್ರೆ ವೈದ್ಯ ಕೆ.ಪಿ. ಸುನಿಲ್ ಕುಮಾರ್, ಮುಖ್ಯ ಪಶು ವೈದ್ಯಾಧಿಕಾರಿ ಕೆ.ಎಂ. ಸುನಿಲ್ ಕುಮಾರ್ ಇದ್ದರು.
ಎಷ್ಟು ಮಕ್ಕಳು ತಯಾರಿ ನಡೆಸಿದ್ದಾರೆ?
ಹುಂಚ ಗ್ರಾಮ ಪಂಚಾಯತ್ ಹಾಗೂ ಸುತ್ತಮುತ್ತಲಿನ ವ್ಯಾಪ್ತಿಯ ಮಕ್ಕಳಿಗೆ ಅನುಕೂಲ ಆಗುವಂತೆ ಹುಂಚದಲ್ಲಿಯೇ, ನುರಿತ ಶಿಕ್ಷಕರಿಂದ ಉಚಿತ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.
ಪ್ರಥಮ ವರ್ಷದ ಶಿಭಿರದಲ್ಲಿ 27 ಮಕ್ಕಳು, 12 ವಿವಿಧ ಶಾಲೆಗಳಿಂದ ಭಾಗವಹಿಸಿ, 8 ಮಕ್ಕಳು ಮೊರಾರ್ಜಿ ಶಾಲೆಗೆ ತೇರ್ಗಡೆ ಆಗಿರುತ್ತಾರೆ. ಪ್ರಸಕ್ತ ಸಾಲಿನಲ್ಲಿ 17 ಶಾಲೆಗಳಿಂದ ಒಟ್ಟು 49 ಮಕ್ಕಳಿದ್ದು ಎಲ್ಲಾ ಮಕ್ಕಳು ನವೋದಯ ಪ್ರವೇಶ ಪರೀಕ್ಷೆಗೆ ಉತ್ತಮವಾಗಿ ತಯಾರಿ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post