ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಇಂದು ಸಂಜೆ ಸುಮಾರು 2 ಗಂಟೆಗಳ ಕಾಲ ಸುರಿದ ಭಾರೀ ಮಳೆಗೆ ನಗರ ಅಕ್ಷರಶಃ ಬೆಚ್ಚಿಬಿದ್ದಿದೆ.
ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಹಳೇನಗರದಲ್ಲಿ ಹಲವು ಅಂಗಡಿ ಹಾಗೂ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ. ಎನ್’ಎಸ್’ಟಿ ರಸ್ತೆಯಲ್ಲಿ ಸುಮಾರು ಒಂದು ಅಡಿಗೂ ಹೆಚ್ಚು, ಬಸವೇಶ್ವರ ಸರ್ಕಲ್ ಬಳಿಯ ರಸ್ತೆಯಲ್ಲಿ ಸುಮಾರು 2 ಅಡಿಗೂ ಅಧಿಕ ಎತ್ತರ ನೀರು ಹರಿದು, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ.
ಎನ್’ಎಸ್’ಟಿ ರಸ್ತೆಯ ಪೊಲೀಸ್ ಠಾಣೆ ಪಕ್ಕದಲ್ಲಿ ನಾಲ್ಕೈದು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಯಿತು. ಉಪನ್ಯಾಸಕ ಚಂದ್ರಶೇಖರ್ ಎನ್ನುವವರ ಮನೆಗೆ ನೀರು ನುಗ್ಗಿದ್ದು, ಸುಮಾರು 1 ಅಡಿಗಳಷ್ಟು ನಿಂತಿತ್ತು. ಇದೇ ರಸ್ತೆಯ ವಾದಿರಾಜ್ ಜ್ಯುವೆಲರ್ಸ್ ಮಾಲೀಕರ ನಿವಾಸ, ಪರಮೇಶ್ವರ್ ಎನ್ನುವವರ ನಿವಾಸಕ್ಕೂ ಸಹ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ.
ನೀರು ಎತ್ತುವ ವಾಹನಗಳೊಂದಿಗೆ ಆಗಮಿಸಿದ ನಗರಸಭೆ ಸಿಬ್ಬಂದಿಗಳು 11.30ರವರೆಗೂ ನೀರು ಹೊರ ಹೊರಹಾಕುವ ಕಾರ್ಯಾಚರಣೆ ನಡೆಸಿದರು. ಮನೆಯ ಸದಸ್ಯರು ನಗರಸಭೆ ಸಿಬ್ಬಂದಿಗಳೊಂದಿಗೆ ನೀರು ಹೊರ ಹಾಕುವ ಕಾರ್ಯ ನಡೆಸಿದ್ದು, ಮನೆ ಸ್ವಚ್ಛಗೊಳಿಸಿಕೊಳ್ಳಲು ಪರದಾಡುವಂತಾಯಿತು.
ನೀರು ನುಗ್ಗಲು ಕಾರಣವೇನು?
ಇಲ್ಲಿನ ನಿವಾಸಿಗಳ ಪ್ರಕಾರ, ಚರಂಡಿಯ ನೀರು ಹಿಮ್ಮುಖವಾಗಿ ಹರಿದಿದ್ದೇ ಮನೆಯೊಳಕ್ಕೆ ನೀರು ನುಗ್ಗಲು ಕಾರಣ. ಮಳೆಗಾಲದ ಆರಂಭದಲ್ಲಿಯೂ ಸಹ ಒಮ್ಮೆ ಇದೇ ರೀತಿಯಾಗಿತ್ತು. ಇಂದು ಎರಡನೆಯ ಬಾರಿ. ಒಳಚರಂಡಿ ವ್ಯವಸ್ಥೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿರುವುದೇ ಇದಕ್ಕೆಲ್ಲವೂ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post