ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇವರ ಸೇವೆಯಿಂದ ಆನಂದ ಉಂಟಾಗುತ್ತದೆ. ದೇವರ ಆರಾಧನೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಪ್ರಾರ್ಥನೆ ಮಾಡುವಾಗ ನನ್ನ ಜೊತೆ ಇತರರಿಗೂ ಒಳ್ಳೆಯದು ಮಾಡು ಎಂದು ಬೇಡಿಕೊಂಡರೆ ನಿಶ್ಚಿತವಾಗಿ ದೇವರ ಅನುಗ್ರಹ ಪ್ರಾಪ್ತವಾಗುತ್ತದೆ ಎಂದು ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶರಾದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ಅವರು ಇಂದು ನಗರದ ಜಿಎಸ್’ಕೆಎಂ ರಸ್ತೆಯ ಗೌಡ ಸಾರಸ್ವತ ಸಮಾಜದ ಶ್ರೀ ಲಕ್ಷ್ಮಿ ವೆಂಕಟರಮಣ ದೇವಮಂದಿರದಲ್ಲಿ ಇಂದಿನಿಂದ ಮೊಕ್ಕಾಂ ಹೂಡಿದ್ದು, ದೇವ ಮಂದಿರದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು.
ಮನುಷ್ಯನಾಗಿ ಹುಟ್ಟಿದ ಮೇಲೆ ಪಾಪ, ಪುಣ್ಯ ಎರಡೂ ಇರುತ್ತೆ. ಅವರವರ ಕರ್ಮಾನುಸಾರ ಅವರಿಗೆ ಅದು ಲಭ್ಯವಾಗುತ್ತದೆ. ಸ್ವಾರ್ಥ, ಅಹಂಕಾರ ಬಿಟ್ಟಾಗ ದೇವರ ಅನುಗ್ರಹ ಪ್ರಾಪ್ತವಾಗುತ್ತದೆ. ಪ್ರಾರ್ಥನೆ ಮಾಡುವಾಗ ಶುದ್ಧ ಮನಸ್ಸಿನಿಂದ ಮಾಡಬೇಕು ಎಂದರು.
ನಮ್ಮ ಸಂಸ್ಕಾರ, ಸಂಸ್ಕೃತಿ ಮರೆಯದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಸೇವೆಯಿಂದ ಸಿಗುವ ಆನಂದ ಯಾವುದರಲ್ಲಿಯೂ ಲಭ್ಯವಿಲ್ಲ. ಸೇವೆ ಮಾಡಿದಾಗ ಮಾತ್ರ ದೇವರ ಕೃಪಾದೃಷ್ಟಿ ನಮ್ಮ ಮೇಲೆ ಬೀಳುತ್ತದೆ. ನಮ್ಮ ಪಾಪ ಕರ್ಮಗಳು ನಾಶವಾಗುತ್ತವೆ ಎಂದರು.
ಇದಕ್ಕೂ ಮುನ್ನ ನಗರದ ಹರಕೆರೆ ಶಿವಾಲಯದ ಬಳಿಯಿಂದ ಸಮಾಜ ಬಾಂಧವರು ಅದ್ಧೂರಿಯಾಗಿ ಗುರುಗಳನ್ನು ಬರಮಾಡಿಕೊಂಡರು. ಸುಮಂಗಲಿಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಭಾಸ್ಕರ್ ಕಾಮತ್, ಕಾರ್ಯದರ್ಶಿ ಸದಾನಂದ ನಾಯಕ್, ಪ್ರಮುಖರಾದ ದೇವದಾಸ್ ನಾಯಕ್, ಗೋಪಾಲಕೃಷ್ಣ ಪಂಡಿತ್, ಸುಧೀರ್ ನಾಯಕ್, ಪ್ರಕಾಶ್ ನಾಯಕ್, ರಮೇಶ್ ಶೆಣೈ, ಮನೋಹರ್ ಕಾಮತ್ ಹಾಗೂ ಸಮಾಜ ಬಾಂಧವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post