ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪ್ರಪಂಚದಲ್ಲಿ ಭಾರತೀಯವಾದ ಹಿಂದೂ ಸಂಸ್ಕೃತಿ ವಿಶಿಷ್ಟವಾದುದು ಎಂಬುದು ಈಗಾಗಲೇ ರುಜುವಾತಾಗಿದೆ. ಅದರಲ್ಲಿನ ಶಕ್ತಿಯನ್ನು ಜಗತ್ತು ಒಪ್ಪಿಕೊಂಡಿದೆ. ಇಂತಹ ಭಾರತೀಯ ಸಂಸ್ಕೃತಿಗೆ ಧಕ್ಕೆ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಆರ್. ಮಧುಸೂಧನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಜಾಗತೀಕರಣದ ಪ್ರಭಾವ ಕೇವಲ ಆರ್ಥಿಕ ವ್ಯವಸ್ಥೆಯ ಮೇಲಷ್ಟೇ ಅಲ್ಲ, ಸಾಂಸ್ಕೃತಿಕ, ಧಾರ್ಮಿಕ ವಲಯವನ್ನು ಕೂಡ ಪ್ರಭಾವಿಸುವಂತೆ ಬೆಳೆಯುತ್ತಿದೆ. ಈ ಅಲೆಯನ್ನು ತಡೆಯಲು ನಾವು ಅನೂಚಾನವಾಗಿ ನಡೆದುಬಂದಿರುವ ಧಾರ್ಮಿಕ ಸಭ್ಯತೆ, ಸಂಸ್ಕೃತಿಗಳನ್ನು ಇನ್ನಷ್ಟು ರೂಢಿಸಿಕೊಳ್ಳಬೇಕು ಎಂದರು.

ದೇವಾಲಯಗಳು ನಮ್ಮ ಅಮೂಲ್ಯ ಆಸ್ತಿ, ಇವತ್ತಿಗೂ ದೇಗುಲಗಳಲ್ಲಿ ಕೆಲ ಕಾಲ ಕುಳಿತರೂ ಮನಸ್ಸಿಗೆ ನೆಮ್ಮದಿಯನ್ನು ತಂದುಕೊಡುತ್ತದೆ. ಈ ಹಿನ್ನೆಲೆಯಲ್ಲಿಯೇ ರಾಜ್ಯ ಸರ್ಕಾರ ಕೂಡ ಯಾವತ್ತೂ ದೇವಾಲಯಗಳ ವಿಚಾರದಲ್ಲಿ ಅನುದಾನಗಳ ನೀಡಿಕೆಯಲ್ಲಿ ಕೈಹಿಡಿದಿಲ್ಲ. ಪರಂಪರೆಗೆ ಧಕ್ಕೆ ಇಲ್ಲದಂತೆ, ಪಾರದರ್ಶಕವಾದ ಅಭಿವೃದ್ಧಿಗೆ ನಾವು ಒತ್ತುನೀಡಬೇಕಾಗಿದೆ ಎಂದರು.
ಸರ್ಕಾರದ ವಿವಿಧ ಮಂಡಳಿಗಳಿಗೆ ನೇಮಕಗೊಂಡ ಜಿಲ್ಲೆಯ ಬ್ರಾಹ್ಮಣ ಸಾಧಕರನ್ನು ಅಭಿನಂದಿಸಿ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವಲಯ ಉಪಾಧ್ಯಕ್ಷರಾದ ಎಚ್.ಎನ್. ಛಾಯಾಪತಿ, ಸರ್ಕಾರದ ಮಟ್ಟದ ಅವಕಾಶಗಳು ಸುಲಭವಾಗಿ ಬರುವಂತಹದ್ದಲ್ಲ. ಅದಕ್ಕೆ ಪ್ರತಿಭೆ, ಅದೃಷ್ಟಗಳ ಬೆಂಬಲವಿರುವುದರಿಂದ ಸಾಧ್ಯವಾಗಿದೆ. ಅಂತಹ ಅಧಿಕಾರವನ್ನು ಜಾಣ್ಮೆಯಿಂದ ಬಳಸಿಕೊಳ್ಳಲು ಪ್ರಯತ್ನಿಸಬೇಕು. ವಿಸಿಟಿಂಗ್ ಕಾರ್ಡ್‌ನಲ್ಲಿ ಹುದ್ದೆಯನ್ನು ಪ್ರದರ್ಶಿಸುವುದಕ್ಕಿಂತ ನಾಳೆ ಇಂತಹ ಹುದ್ದೆಯಲ್ಲಿ ಇಂತವರು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರು ಎಂದು ಇತರರು ನೆನಪಿಸಿಕೊಳ್ಳುವಂತೆ ಕೆಲಸ ಮಾಡುವಂತಾಗಲಿ ಎಂದು ಆಶಿಸಿದರು.

ಇಡೀ ಜಗತ್ತು ಹಣದ ಹಿಂದೆ ಹೋಗುತ್ತಿದೆ. ಯಾವುದೇ ಹೊಸ ಹುದ್ದೆ, ಅವಕಾಶಗಳು ತೆರೆದುಕೊಂಡ ಕ್ಷಣವೇ ಅದರಲ್ಲೇನು ಲಾಭವಿದೆ, ಹಣವಿದೆ ಎಂದು ವಿಚಾರಿಸುವ ಪ್ರವೃತ್ತಿ ಬೆಳೆದಿದೆ. ಗಳಿಕೆಯ ಅವಕಾಶವೇ ಬಂದರೆ ಹಣದ ಬದಲು ಹೆಚ್ಚು ಸಿರಿವಂತಿಕೆಯ ಅನುಭವ ಕೊಡುವ ನೆಮ್ಮದಿಯನ್ನು ಆರಿಸಿಕೊಳ್ಳಿ. ನಮ್ಮ ನಂತರ ನಾವೆಷ್ಟೇ ಸಿರಿವಂತರಾದರೂ ಇತಿಹಾಸ ನಮ್ಮನ್ನು ಸ್ಮರಿಸುವುದಿಲ್ಲ. ಒಳ್ಳೆಯ ಕೆಲಸ ಮಾಡಿದರೆ ಮಾತ್ರ ನಾವು ಚರಿತ್ರಾರ್ಹರಾಗುತ್ತೇವೆ ಎಂದರು.
ಈ ಸಂದರ್ಭದಲ್ಲಿ ರಾಜ್ಯದ ಕೆಎಸ್‌ಎಸ್‌ಐಡಿಸಿ ಉಪಾಧ್ಯಕ್ಷರಾದ ಎಸ್.ದತ್ತಾತ್ರಿ, ಉಪ ಮಹಾಪೌರರಾದ ಸುರೇಖಾ ಮುರುಳೀಧರ್, ಮೆಡಿಕಲ್ ಸೂಪರಿಟೆಂಡೆಂಟ್ ಕೊರೋನಾ ವಾರಿಯರ್ಸ್ ಡಾ. ಎಸ್. ಶ್ರೀಧರ್, ಪಿಎಚ್‌ಡಿ ಅವಾರ್ಡ್ ಪಡೆದ ಡಾ. ಎನ್.ಆರ್. ಮಂಜುಳಾ, ಮೆಸ್ಕಾಂ ನಿರ್ದೇಶಕರಾದ ಎಸ್.ಎಸ್. ನಂಜುಂಡಸ್ವಾಮಿ, ಮಹಿಳಾ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಪ್ರೇಮಾ ಆನಂದ್ ಹಾಗೂ ಸೂಡಾ ನಿರ್ದೇಶಕರಾದ ಉಮಾ ಮೂರ್ತಿ, ಕಿಯೋನಿಕ್ಸ್ ನಿರ್ದೇಶಕ ಪ್ರಶಾಂತ್ ಅವರನ್ನು ಅಭಿನಂದಿಸಲಾಯಿತು.
ಹಿರಿಯರಾದ ಗುಂಡಾಚಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬ್ರಾಹ್ಮಣ ಮಹಾಸಭಾದ ಪ್ರಧಾನ ವಕ್ತಾರ ಮ.ಸ. ನಂಜುಂಡಸ್ವಾಮಿ, ಬಿ.ಆರ್.ಪಿ. ರಾಜಶೇಖರ್ ವೇದಿಕೆಯಲ್ಲಿದ್ದರು. ಸುಮಿತ್ರಮ್ಮ ಹಾಗೂ ವನಜಾ ರವಿಕುಮಾರ್ ಪ್ರಾರ್ಥಿಸಿದರು. ಪ್ರಕಾಶ್ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಇನಾಂದಾರ್ ಮಾತನಾಡಿದರು. ಲಕ್ಷ್ಮೀಕಾಂತ್ ಭಟ್ ವಂದಿಸಿ, ಆರ್. ಅಚ್ಯುತರಾವ್ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















