ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉತ್ತಮ ಸಂಗೀತದಿಂದ ಮನುಷ್ಯನಿಗೆ ಒಳ್ಳೆಯ ಸಂಸ್ಕಾರ ದೊರೆಯುತ್ತದೆ. ಸಂಗೀತದಿಂದ ಖಿನ್ನತೆ ದೂರವಾಗುವ ಜತೆಯಲ್ಲಿ ಮನೋಶಕ್ತಿ ಸದೃಢವಾಗುತ್ತದೆ ಎಂದು ನಗರದ ಖ್ಯಾತ ಪ್ರಸೂತಿ ತಜ್ಞೆ ಡಾ. ಅಮಿತಾ ಹೆಗ್ಡೆ ಹೇಳಿದರು.
ನಗರದ ಮಥುರಾ ಪಾರಾಡೈಸ್ ಸಭಾಂಗಣದಲ್ಲಿ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ವತಿಯಿಂದ ಕನ್ನಡ ಕಾವಣ ಗೀತ ಗಾಯನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಹೆಸರಾಂತ ಗಾಯಕರಿಂದ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಬಾಲ್ಯದಿಂದಲೇ ಸಂಗೀತ ಅಭ್ಯಾಸ ಮಾಡಿಸಬೇಕು. ಮಕ್ಕಳಲ್ಲಿ ಏಕಾಗ್ರತೆ ಶಕ್ತಿಯು ವೃದ್ಧಿಸುತ್ತದೆ. ಸದಾ ಒಳ್ಳೆಯ ಚಿಂತನೆಗಳು ಮನಸ್ಸಿನಲ್ಲಿ ಮೂಡುತ್ತವೆ. ಉತ್ತಮ ವ್ಯಕ್ತಿತ್ವ ಹೊಂದುವ ಮೂಲಕ ಸದೃಢ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ತಿಳಿಸಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಗೌರವಾಧ್ಯಕ್ಷ ಎನ್. ಗೋಪಿನಾಥ್ ಮಾತನಾಡಿ, ಸುಗಮ ಸಂಗೀತದ ಬಗ್ಗೆ ಯುವಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದ್ದು, ಇಂತಹ ಗೀತಗಾಯನ ಸ್ಪರ್ಧೆ, ಸಮೂಹ ಗಾಯನ ಹಾಗೂ ಧ್ವನಿ ಸಂಸ್ಕರಣೆ ಕಾರ್ಯಕ್ರಮಗಳು ತುಂಬಾ ಅರ್ಥಪೂರ್ಣವಾಗಿ ಆಸಕ್ತಿ ಬೆಳೆಯುವಂತೆ ಮಾಡುತ್ತಿವೆ. ಸಂಗೀತ ಪರಂಪರೆಯ ಉಳಿಸಿ ಬೆಳೆಸುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ. ವಿಜಯ್ ಕುಮಾರ್ ಮಾತನಾಡಿ, ಪಾಶ್ಚಿಮಾತ್ಯ ಸಂಗೀತದ ಅಬ್ಬರದಲ್ಲಿ ದೇಶಿಯ ಸಂಗೀತ ಪರಂಪರೆಗೆ ಧಕ್ಕೆಯಾಗುತ್ತಿದೆ. ಕನ್ನಡ ಗೀತೆಗಳನ್ನು ಹಾಡುವುದರ ಮೂಲಕ ಅಭ್ಯಾಸ ಮಾಡಬೇಕು. ಸಂಗೀತ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಅಧ್ಯಕ್ಷೆ ಶಾಂತಾ ಶೆಟ್ಟಿ ಮಾತನಾಡಿ, ನಮ್ಮ ಸಂಸ್ಥೆಯ ರಜತ ಮಹೋತ್ಸವ ಪ್ರಯುಕ್ತ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಯುವ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ ನೀಡಲು ವಿಶೇಷ ಸ್ಪರ್ಧೆಗಳನ್ನು ನಿರಂತರವಾಗಿ ನಡೆಸುತ್ತಿದ್ದೇವೆ. ಹೊಸ ಗಾಯಕರಿಗೆ ಒಳ್ಳೆಯ ವೇದಿಕೆಗಳನ್ನು ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.
ತೀರ್ಪುಗಾರರಾಗಿ ವಿದುಷಿ ಉಮಾ ದೀಲಿಪ್, ಸುಶೀಲಾ ಷಣ್ಮುಗಂ, ಶಾಂತಾ ಶೆಟ್ಟಿ, ಉಷಾ ಅಡಿಗ, ರಾಧಾ ಪಾಟೀಲ್, ನಿವೇದಿತಾ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post