ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಅಭಿವೃದ್ಧಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಿವಮೊಗ್ಗ ಶಾಸಕ ಕೆ.ಎಸ್. ಈಶ್ವರಪ್ಪ ಅವರು ಕೂಡಲೇ ರಾಜೀನಾಮೆ ನೀಡಿ ತಮ್ಮ ವೈಫಲ್ಯವನ್ನು ಒಪ್ಪಿಕೊಳ್ಳಬೇಕು ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಒತ್ತಾಯಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿರುವ ಅವರು, ಶಿವಮೊಗ್ಗ ನಗರದಲ್ಲಿ ಶಾಂತಿ ವಾತಾವರಣ ಮೂಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಉಗುರಿನಲ್ಲಿ ನಿವಾರಣೆಯಾಗಬಹುದಾಗಿದ್ದ ವಿಷಯಕ್ಕೆ ಕೊಡಲಿ ತೆಗೆದುಕೊಂಡಂತಾಗಿದೆ. ಸಚಿವರು ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಪೊಲೀಸ್ ಇಲಾಖೆಯ ಕಾನ್ಸ್‌ಟೇಬಲ್ ಸಿಬ್ಬಂದಿಯೇ ಮಾತನಾಡುವ ಪರಿಸ್ಥಿತಿ ಬಂದಿದೆ ಎಂದಿದ್ದಾರೆ.
ನಿರ್ಭಯ ಕೇಸ್ ಮಾದರಿಯಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಘಟನೆಯು ಇಡೀ ಮಲೆನಾಡನ್ನು ಬೆಚ್ಚಿಬೀಳಿಸಿದೆ. ಇದು ದುರ್ಘಟನೆ ಮಾತ್ರ ಅಲ್ಲ. ಆಡಳಿತ ವೈಫಲ್ಯವೂ ಹೌದು. ಇನ್ನು ಅಭಿವೃದ್ಧಿ ವಿಷಯದಲ್ಲಿಯೂ ಸಹ ಶಾಸಕ ಕೆ.ಎಸ್. ಈಶ್ವರಪ್ಪ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಸ್ಮಾರ್ಟ್ ಸಿಟಿ ಈಗ ಅಗ್ಲಿ ಸಿಟಿ ಆಗಿದೆ. ಕಾಮಗಾರಿಗಳು ಕಳಪೆ ಆಗಿವೆ ಎಂದು ನಾಗರೀಕರು ಪದೇಪದೇ ದೂರುತ್ತಿರುವುದೇ ಇದಕ್ಕೆ ಸಾಕ್ಷಿ ಎಂದಿದ್ದಾರೆ.
ಇಂತಹ ಸಮಸ್ಯೆಗಳನ್ನು ಬಗೆಹರಿಸುವುದರ ಬದಲು ಧರ್ಮ, ಜಾತಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾ ಜನರ ನಿಜವಾದ ಸಮಸ್ಯೆ ಮರೆಯುತ್ತಿದ್ದಾರೆ. ಪ್ರತಿದಿನ ದುಡಿದು ತಿನ್ನುವವರು ಬದುಕುವುದೇ ಕಷ್ಟ ಆಗುತ್ತಿದೆ. ವ್ಯಾಪಾರಸ್ಥರಿಗೆ ಕಷ್ಟ ಹೇಳತೀರದು. ಆದ್ದರಿಂದ ಈಶ್ವರಪ್ಪನವರು ತಮ್ಮ ವೈಫಲ್ಯವನ್ನು ಒಪ್ಪಿಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post