ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ತಿಗೆ ಮತ್ತಷ್ಟು ಕಸುವು ನೀಡಲು ಮತ್ತೊಮ್ಮೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತಾವು ಸ್ಪರ್ಧಿಸಿದ್ದು, ಪುನರ್ ಆಯ್ಕೆ ಬಯಸಿದ್ದೇನೆ. ನನ್ನನ್ನು ಗೆಲ್ಲಿಸಬೇಕು ಎಂದು ಮಾಜಿ ಕಸಾಪ ಅಧ್ಯಕ್ಷ ಹಾಗೂ ಅಭ್ಯರ್ಥಿ ಡಿ. ಮಂಜುನಾಥ್ ಮನವಿ ಮಾಡಿದರು.
ಈ ಕುರಿತಂತೆ ಮಾತನಾಡಿದ ಅವರು, ನಾನು ಕಳೆದ 29 ವರ್ಷಗಳಿಂದ ಕಸಾಪ ಸದಸ್ಯನಾಗಿ, ಕಾರ್ಯದರ್ಶಿಯಾಗಿ, ಅಧ್ಯಕ್ಷನಾಗಿ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ್ದೇನೆ. ಪರಿಷತ್ತಿಗೆ ಭದ್ರ ನೆಲೆಗಟ್ಟನ್ನು ಹಾಕಿದ್ದೇನೆ. ನಾನು ಅಧ್ಯಕ್ಷ ಅವಧಿಯಲ್ಲಿ ಇರುವಾಗ ಸಾಹಿತ್ಯ ಗ್ರಾಮದ ಕನಸು ಕಂಡು ಅದನ್ನು ನನಸಾಗಿ ಮಾಡಿದ್ದೇನೆ. 50 ಲಕ್ಷಕ್ಕೂ ಹೆಚ್ಚು ಅನುದಾನ ನನ್ನ ಅವಧಿಯಲ್ಲೇ ಬಂದಿದೆ. 2011-12 ರಲ್ಲಿ ಈ ಅನುದಾನ 1 ಕೋಟಿ ತಲುಪಿತು. ಹೀಗೆ ಕ್ರೀಯಾಶೀಲತೆಯಿಂದ ಕೆಲಸ ಮಾಡಿದ್ದೇನೆ. ತಾಲೂಕು ಭವನಗಳು, ಎಲ್ಲಾ ಹೋಬಳಿಗಳಲ್ಲಿ ಕಸಾಪ ಕಚೇರಿ, ಸಾಹಿತ್ಯ ಹುಣ್ಣೆಮೆ ಕಾರ್ಯಕ್ರಮಗಳು, ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಇವೆಲ್ಲವನ್ನು ಮಾಡಿದ ತೃಪ್ತಿ ನನಗಿದೆ ಎಂದರು.
ನಾನು ಆಯ್ಕೆಯಾದರೆ ಸಾಹಿತ್ಯ ಗ್ರಾಮವನ್ನು ಮೂಲ ನೀಲ ನಕ್ಷೆಯಂತೆ ಪೂರ್ಣಗೊಳಿಸುತ್ತೇನೆ. ತಾಲೂಕು ಕೇಂದ್ರಗಳಲ್ಲಿ ಅರ್ಧಕ್ಕೆ ನಿಂತುಹೋಗಿರುವ ಕಸಾಪ ಕಟ್ಟಡಗಳನ್ನು ಪೂರ್ಣಗೊಳಿಸುತ್ತೇನೆ. ಹೊಸ ತಲೆಮಾರಿನ ಯುವಕರಿಗೆ ಸಾಹಿತ್ಯದ ಅಭಿರುಚಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇನೆ. ಜಾತ್ಯತೀತವಾಗಿ ಕೆಲಸ ಮಾಡುತ್ತೇನೆ. ಪುಸ್ತಕ ಪ್ರಕಟಣೆ ಮಾರಾಟ ಮಾಡುವ ಹೊಸ ಚಿಂತನೆ ನನ್ನದು. ಕನ್ನಡದ ಮನಸ್ಸುಗಳನ್ನು ಪಕ್ಷ ಭೇದವಿಲ್ಲದೆ ಸರ್ವರನ್ನು ಒಗ್ಗೂಡಿಸಿ ಕನ್ನಡದ ಕೆಲಸಗಳನ್ನು ಮಾಡುತ್ತೇನೆ. ಮತ್ತಷ್ಟು ಕೆಲಸ ಮಾಡಲು ನನಗೆ ಅವಕಾಶ ಮಾಡಿಕೊಡಬೇಕೆಂದು ಅವರು ಮನವಿ ಮಾಡಿದರು.
ಕಳೆದ 5 ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಅಧೋಗತಿಗೆ ತಳ್ಳಲಾಗಿದೆ. ಕ್ರೀಯಾಶೀಲತೆಗೆ ತುಕ್ಕು ಹಿಡಿದಿದೆ. ದ್ವೇಷ, ಅಸೂಹೆ, ಚಾಡಿ, ಸ್ವಜನಪಕ್ಷಪಾತಗಳು ವಿಜೃಂಭಿಸಿವೆ. ಕಸಾಪವೇ ಸೊರಗಿಹೋಗಿದೆ ಎಂದು ಆರೋಪಿಸಿದ ಅವರು ಕಸಾಪಕ್ಕೆ ಮರು ಜೀವ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮೇ 9 ರಂದು ನಡೆಯುವ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ತಮ್ಮನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಶಿವಮೂರ್ತಿ, ಟಿ. ಕೃಷ್ಣಪ್ಪ, ಮಂಜುನಾಥ್ ಕಾಮತ್, ಗುಡ್ಡಪ್ಪ ಜೋಗಿ, ಪರಮೇಶ್ವರ್, ರಾಜೇಂದ್ರ, ಹಿರೇನಲ್ಲೂರು ಉಮೇಶ್, ಸಿದ್ದೋಜಿರಾವ್, ಸುಶೀಲಾ ಷಣ್ಮುಗಂ, ಭಾರತಿ ರಾಮಕೃಷ್ಣ, ಲಕ್ಷ್ಮೀ ಮಹೇಶ್ ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post