ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಆಧ್ಯಾತ್ಮಿಕತೆಯಿಂದ ಅಮೂಲಾಗ್ರ ಬದಲಾವಣೆ ತರಬಹುದು ಎಂಬುದನ್ನು ಪ್ರಪಂಚಕ್ಕೆ ತೋರಿಸಿಕೊಟ್ಟ ಮಹಾನ್ ಸಂತ ಶ್ರೀ ಸ್ವಾಮಿ ವಿವೇಕಾನಂದರು ಎಂದು ಆರ್’ಎಸ್’ಎಸ್ ಪ್ರಾಂತ್ಯ ಸಹ ಸಂಪರ್ಕ ಪ್ರಮುಖ್ ಯಾದವ ಕೃಷ್ಣ ಅಭಿಪ್ರಾಯಪಟ್ಟರು.
ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಶ್ರೀ ಸ್ವಾಮಿ ವಿವೇಕಾನಂದರ 158ನೆಯ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಡಿ ದೇಶದ ಇತಿಹಾಸ ನೋಡಿದಾಗ ವಿವೇಕಾನಂದರ ವಿಭಿನ್ನವಾಗಿ ನಿಲ್ಲುವ ನಾಯಕ. ಇಡಿಯ ಸಮಾಜವನ್ನು ಒಟ್ಟಾಗಿ ಕೊಂಡೊಯ್ದ ನಾಯಕರಾಗಿದ್ದ ಅವರು, ದೇಶದಲ್ಲಿ ಆಧ್ಯಾತ್ಮಿಕವಾಗಿ ಎಲ್ಲರನ್ನೂ ಒಂದಾಗಿಸಲು ಯತ್ನಿಸಿದ ದಾರ್ಶನಿಕ ಎಂದು ಅಭಿಪ್ರಾಯಪಟ್ಟರು.

ನಮ್ಮ ದೇಶದಲ್ಲಿ ಇತಿಹಾಸ ನಿರ್ಮಿಸಿದ ಮಹಾನ್ ಪುರುಷರ ಅಂಕೆ ಲೆಕ್ಕ ಹಾಕಿದರೆ ಇಡಿಯ ವಿಶ್ವದಲ್ಲಿರುವ ಮಹಾನ್ ವ್ಯಕ್ತಿಗಳ ಸಂಖ್ಯೆಗಿಂತಲೂ ಹೆಚ್ಚಾಗಿದೆ. ಇದು ನಮ್ಮ ದೇಶದ ಮಣ್ಣಿನ ಗುಣದ ಪ್ರಭಾವ. ಇಂತಹ ಇತಿಹಾಸ ನಿರ್ಮಿಸಿದ ದೇಶದ ಮಹಾನ್ ಪುರುಷರಲ್ಲಿ ವಿವೇಕಾನಂದರೂ ಸಹ ಒಬ್ಬರು ಎನ್ನುವುದು ನಮ್ಮ ಹೆಮ್ಮೆ ಎಂದರು.
ಇತಿಹಾಸ ಅಧ್ಯಯನ ಮಾಡುವಾಗ ವಿವೇಕಾನಂದ ಕುರಿತು ಓದಲೇಬೇಕು. ಅಧ್ಯಾತ್ಮಿಕತೆಯಿಂದ ಪ್ರಪಂಚದಲ್ಲಿ ಬದಲಾವಣೆ ತರಬಹುದು ಎಂಬ ಶ್ರೇಷ್ಠ ವಿಚಾರಧಾರೆಯನ್ನು ತೋರಿಸಿಕೊಟ್ಟ ಮಹಾನ್ ಸಂತ ವಿವೇಕಾನಂದರು. ಅವರ ಜೀವನ ಎನ್ನುವುದು ಅದೊಂದು ದೊಡ್ಡ ಸಾಗರ ಎಂದು ಅಭಿಪ್ರಾಯಪಟ್ಟರು.
ಇಂದು ಜಗತ್ತಿನ ಎಲ್ಲ ರಾಷ್ಟ್ರಗಳು ಭಯದಿಂದ ನರಳುತ್ತಿದ್ದು, ಅದರಿಂದ ಹೊರ ಬರಲು ಹೆಣಗುತ್ತಿವೆ. ಆದರೆ, ನಮ್ಮ ದೇಶದ ಮಾತ್ರ ಪರಂಪರೆ ಹಾಕಿ ಕೊಟ್ಟ ವಿಚಾರಧಾರೆಗಳಿಂದ ಮಾತ್ರ ಎಲ್ಲವನ್ನೂ ಗೆಲ್ಲಲು ಸಾಧ್ಯ ಎಂದರು.
ಧರ್ಮ ಎನ್ನುವುದು ಅಧ್ಯಾತ್ಮಿಕತೆ ಒಂದು ಭಾಗ. ಧರ್ಮದ ಆಚರಣೆಗಳು ಅಧ್ಯಾತ್ಮಿಕತೆಯಲ್ಲಿ ಶೇ.2ರಷ್ಟಿರುತ್ತದೆ. ಆದರೆ, ಅಧ್ಯಾತ್ಮಿಕತೆಯಲ್ಲಿ ಧಾರ್ಮಿಕ ಚಿಂತನೆ ಹಾಗೂ ಆಚರಣೆ ಶೇ.98ರಷ್ಟಿರುತ್ತದೆ. ಇದನ್ನು ಭಾರತ ಎಂದು ಸಂಪೂರ್ಣವಾಗಿ ತೆಗೆದುಕೊಳ್ಳುತ್ತದೋ ಆಗ ವಿಶ್ವ ಭಾರತದತ್ತ ನೋಡುತ್ತದೆ ಎಂದು ವಿವೇಕಾನಂದರು ಹೇಳಿದ್ದನ್ನು ಅವರು ಉಲ್ಲೇಖಿಸಿದರು.
158 ವರ್ಷದ ನಂತರವೂ ಸಹ ವಿವೇಕಾನಂದರು ತಮ್ಮ ವಿಚಾರಧಾರೆಗಳ ಮೂಲಕ ಜೀವಂತವಿದ್ದಾರೆ ಎಂದರೆ ಅವರ ಚೇತನ ಎಂತಹುದ್ದು ಎಂಬುದು ತಿಳಿಯುತ್ತದೆ. ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎಂಬುದನ್ನು ವಿವೇಕಾನಂದರು ಜಗತ್ತಿಗೆ ಸಾರಿದರು ಎಂದರು.
ಫಿಜಿಷಿಯನ್ ಡಾ.ಶ್ರೀಕಾಂತ್ ಹೆಗಡೆ ಅವರು ಮಾತನಾಡಿ, ಕೊರೋನಾ ವೈರಸ್ ಕಂಡು ಹಿಡಿಯಲು ಮೊದಲ ಬಾರಿಗೆ ಆರ್’ಟಿಪಿಸಿಆರ್ ಪದ್ದತಿ ಕಂಡು ಹಿಡಿದು ಡಬ್ಲ್ಯೂಎಚ್’ಒ ವಿಶ್ವಕ್ಕೆ ಕೊಟ್ಟಿದ್ದು 12 2020ರಲ್ಲಿ. ಅದೇ ರೀತಿ ಮೊದಲ ವ್ಯಾಕ್ಸಿನ್ ಇಂದು ಅಂದರೆ 12 2021ರಂದು ಪುಣೆಯಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದರು.

ಎಲ್ಲ ದೇಶಗಳಂತೆ ನಮ್ಮ ದೇಶವೂ ಸಹ ವ್ಯಾಕ್ಸಿನೇಷನ್ ಕಂಡುಹಿಡಿದಿದೆ. ಮನುಕುಲವನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬರೂ ವ್ಯಾಕ್ಸಿನೇಷನ್ ಮಾಡಿಕೊಳ್ಳುವುದು ಅನಿವಾರ್ಯ ಎಂದ ಅವರು, ಇದನ್ನು ಯಾಕೆ ತೆಗೆದುಕೊಳ್ಳಬೇಕು, ಅದರ ಪರಿಣಾಮಗಳೇನು ಎಂಬುದನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಸಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಎಸ್. ಶ್ರೀಧರ್, ಎಸ್’ಯುಐಎಂಎಸ್ ಪ್ರಾಂಶುಪಾಲ ಡಾ.ಎಸ್.ಎಂ. ಕಟ್ಟಿ, ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ.ಆರ್.ಪಿ. ಪೈ, ಉಪಪ್ರಾಂಶುಪಾಲ ಡಾ.ಸಿದ್ದಲಿಂಗಪ್ಪ, ವೈದ್ಯಕೀಯ ನಿರ್ದೇಶಕರಾ ಡಾ.ಎಸ್. ನಾಗೇಂದ್ರ, ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಲತಾ ನಾಗೇಂದ್ರ ಹಾಗೂ ಡಾ.ವಿನಯಾ ಶ್ರೀನಿವಾಸ್, ಉಪಪ್ರಾಂಶುಪಾಲ ಡಾ.ಕೆ.ಎಂ. ಮಿಥುನ್, ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಬಿ.ಎಸ್. ಸುರೇಶ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post