ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಹಿರಿಮೆ ಹೊಂದಿದ ಶಿವಮೊಗ್ಗದಲ್ಲಿ ಶಾಂತಿಯನ್ನು ಕದಡಬಾರದು, ಒಂದು ವೇಳೆ ಅಂತಹ ಪ್ರಸಂಗಗಳು ನಡೆದರೆ ಸತ್ಯಾಗ್ರಹ ಮಾಡಬೇಕಾದೀತು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಸಿದರು.
ನಗರದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ಗುರುಗಳು ನೇತೃತ್ವದಲ್ಲಿ ಸಮಾನ ಮನಸ್ಕರು, ವಿವಿಧ ಸಂಘ, ಸಂಸ್ಥೆಗಳು, ಸಂಘಟನೆಗಳು, ರೈತ ಮುಖಂಡರು, ಪ್ರಗತಿಪರ ಚಿಂತಕರು, ವರ್ತಕರು, ವ್ಯಾಪಾರಿಗಳು ಹಾಗೂ ಸಾರ್ವಜನಿಕರೇ ಸ್ವಯಂ ಪ್ರೇರಿತರಾಗಿ ಹಮ್ಮಿಕೊಂಡಿದ್ದ `ನಮ್ಮ ನಡಿಗೆ ಶಾಂತಿಯ ಕಡೆಗೆ’ ಬೃಹತ್ ಶಾಂತಿ ನಡಿಗೆ ಸಿಮ್ಸ್ ಮೆಡಿಕಲ್ ಕಾಲೇಜಿನಿಂದ ಆರಂಭಗೊಂಡು ಸೈನ್ಸ್ ಮೈದಾನದಲ್ಲಿ ಸಮಾವೇಶಗೊಂಡ ಸಂದರ್ಭ ಅವರು ಈ ಎಚ್ಚರಿಕೆ ಸಂದೇಶ ರವಾನಿಸಿದರು.

ಇದು ಅಪರೂಪ ಹಾಗೂ ಅಭೂತಪೂರ್ವ ನಡಿಗೆ. ಇದರ ಉದ್ದೇಶ ಸಮಯೋಚಿತ ಅರ್ಥಪೂರ್ಣ. ಶಾಂತಿಯ ಕರೆ ಮೊದಲೇನಲ್ಲ, ಸ್ವಾತಂತ್ರ ಪೂರ್ವದಿಂದಲೂ ನಡೆಯುತ್ತಲೇ ಬಂದಿದೆ. ಎಲ್ಲರೂ ಬಯಸುವುದು ಶಾಂತಿಯನ್ನು, ಎಲ್ಲ ಧರ್ಮದ ಸಾರವೂ ಶಾಂತಿಯೇ. ಶಾಂತಿಗಾಗಿ ಮಾನವೀಯ ಗುಣಗಳು ಬೇಕಾಗಿದೆ. ಆದರೆ, ನಿಮ್ಮನ್ನು ಕೈ, ಕಾಲು, ಕಣ್ಣು ಮಾಡಿಕೊಂಡು ತಿನ್ನುವವರಿಗೆ ಅವಕಾಶ ಮಾಡಿಕೊಡಬೇಡಿ, ನೀವು ತಿನ್ನಿ, ಇತರರಿಗೆ ಹಂಚಿ ತಿನ್ನಿ. ಹಬ್ಬ, ಹರಿದಿನಗಳು ಬಂದಾಗ ಎಲ್ಲರೂ ಸಾಮರಸ್ಯದಿಂದ ಬಾಳುವಂತಾಗಬೇಕು, ತ್ಯಾಗ, ಬಲಿದಾನಗಳಿಂದ ದೊರೆತ ಸ್ವಾತಂತ್ರವನ್ನು ದುರ್ಬಳಕೆ ಮಾಡಿಕೊಂಡರೆ ಸಹಿಸುವುದಿಲ್ಲ. ಈ ನಡಿಗೆ ರಾಜ್ಯ, ದೇಶಕ್ಕೆ ಮಾದರಿ ಆಗಲಿ. ಇದು ದೇಶದಾದ್ಯಂತ ನಡೆಯುವಂತಾಗಲಿ ಎಂದು ಕರೆ ಕೊಟ್ಟರು.
ನಿರ್ದೆಶಕರಾದ ಡಾ.ಕ್ಲಿಫರ್ಡ್ ರೋಷನ್ ಪಿಂಟೊ ಮಾತನಾಡಿ, ಶಿವಮೊಗ್ಗ ಶಾಂತಿಯ ತವರೂರು. ಎಲ್ಲರೂ ಸಾಮರಸ್ಯ, ಸೌಹಾರ್ದದಿಂದ ಬಾಳಬೇಕು. ಇವನಾರವ ಎನ್ನುವ ಬದಲು ಇವ ನಮ್ಮವ ಎಂದು ಕಾಣಬೇಕು. ರಾಷ್ಟ್ರಕವಿ ಅವರ ವಿಶ್ವ ಮಾನವ ಸಂದೇಶ ನಾವೆಲ್ಲರೂ ಸಾಕಾರಗೊಳಿಸಬೇಕು ಎಂದರು.
ಮುಸ್ಲಿಂ ಧರ್ಮಗುರು ಮೌಲಾನ ಶಾವುಲ್ ಹಮೀದ್ ಮಾತನಾಡಿ, ವಿವಿಧ ಧರ್ಮ ಗುರುಗಳಿಲ್ಲದ ವಿಷ ಬಿಜ ನಮಗ್ಯಾಕೆ ಬೇಕು. ಜಿಲ್ಲೆಯು ಶಾಂತಿ ಬೀಡು. ಅಶಾಂತಿ ಬಿತ್ತುವವರಿಗೆ ಇದು ಎಚ್ಚರಿಕೆ. ಜಿಲ್ಲೆಯಲ್ಲಿ ಕೈಗಾರಿಕಾ ಉದ್ಯಮಿಗಳು ಬರುವಂತಾಗಬೇಕು. ಯುವಕರಿಗೆ ಉದ್ಯೋಗ ದೊರೆಯುವಂತಾಗಬೇಕು, ಇದು ಸರ್ವಜನಾಂಗದ ಶಾಂತಿಯ ತೋಟವಾಗಿದ್ದು, ವಿವಿಧತೆಯಲ್ಲಿ ಏಕತೆ ಹೊಂದಿದೆ. ಈ ವೇದಿಕೆ ಸೌಹಾರ್ದತೆ ಕೇಂದ್ರವಾಗಿ ಕಂಗೊಳಿಸುತ್ತಿದೆ. ಇಲ್ಲಿ ಬೇಕಾಗಿರುವುದು ಶಾಂತಿ ಮಾತ್ರ. ಎಲ್ಲರೂ ಒಂದಾಗಿ ಸಹೋದರರಂತೆ ಬಾಳೋಣ ನಿರಂತರ ಶಾಂತಿಗಾಗಿ ಎಲ್ಲರೂ ಕಟಿ ಬದ್ಧರಾಗೋಣ ಎಂದರು.
ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ, ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಜಡೇಮಠದ ಶ್ರೀಮಹಾಂತ ಸ್ವಾಮೀಜಿ, ಮುಸ್ಲಿಂ ಧರ್ಮಗುರುಗಳಾದ ಮುಫ್ತಿ ಅಖಿಲ್ ರಜಾ, ಮೌಲಾನ ಶಾವುಲ್ ಹಮಿದ್, ರಾಜ್ಯ ರೈತ ಸಂಘದ ಅಧ್ಯಕ್ಷರಾದ ಎಚ್.ಆರ್. ಬಸವರಾಜಪ್ಪ, ಸರ್ಜಿ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ, ಓಪನ್ ಮೈಂಡ್ಸ್ ವರ್ಲ್ಡ್ ಶಾಲೆಯ ವ್ಯವಸ್ಥಾಪಕರಾದ ಕೆ. ಕಿರಣ್ ಕುಮಾರ್, ವಕೀಲರಾದ ಕೆ.ಪಿ. ಶ್ರೀಪಾಲ್, ಡಿಎಸ್’ಎಸ್ ರಾಜ್ಯ ಸಂಚಾಲಕ ಗುರುಮೂರ್ತಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಗೋಪಿನಾಥ್ ಇತರರು ಇದ್ದರು.

ನಮ್ಮ ನಡಿಗೆ ಶಾಂತಿಯ ಕಡೆಗೆ ಬೃಹತ್ ಶಾಂತಿ ಮೆರವಣಿಗೆಗೆ ಸುಮಾರು 27 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಶಾಂತಿ ರ‍್ಯಾಲಿಗೆ ಬೆಂಬಲ ವ್ಯಕ್ತಪಡಿಸಿದ್ದವು. ಕನಿಷ್ಠ 5 ಸಾವಿರ ಮಕ್ಕಳು ಭಾಗವಹಿಸುವವರಿದ್ದರು. ಆದರೆ, ಶಾಂತಿ ಮೆರವಣಿಗೆಯ ಹಿಂದಿನ ದಿನ ರಾತ್ರಿ ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಪ್ರಾಂಶುಪಾಲರಿಗೆ, ಮುಖ್ಯ ಶಿಕ್ಷಕರಿಗೆ ಶಾಲಾ ಮಕ್ಕಳನ್ನು ಶಾಂತಿ ಮೆರವಣಿಗೆಗೆ ಕರೆದೊಯ್ಯದಂತೆ ಎಚ್ಚರಿಕೆ ನೀಡಿದ್ದರಿಂದ ಶಿಕ್ಷಣ ಸಂಸ್ಥೆಗಳನ್ನು ಜಾಥಾದಿಂಧ ಕೈ ಬಿಡಲಾಯಿತು. ಆದರೆ, ಶಾಂತಿ ರ‍್ಯಾಲಿಯಲ್ಲಿ ಮಕ್ಕಳು ಪಾಲ್ಗೊಳ್ಳದದ್ದಿರೂ, ಶಿಕ್ಷಣ ಸಂಸ್ಥೆಗಳು ಡ್ರೋಣ್ ಮೂಲಕ ಕ್ಯಾಂಪಸ್ ಆವರಣದಲ್ಲೇ 10 ಸಾವಿರ ಮಕ್ಕಳೊಂದಿಗೆ ಶಾಂತಿ ನಡಿಗೆ ನಡೆಸಿ ಕಾರ್ಯಕ್ರಮಕ್ಕೆ ಸಂಪೂರ್ಣ ಅಭೂತಪೂರ್ವ ಬೆಂಬಲ ನೀಡಿದರು.
ಧರ್ಮ ಗುರುಗಳ ಸಮಾಗಮ
ಅದೊಂದು ಅಪರೂಪ ಹಾಗೂ ಅಭೂತಪೂರ್ವ ವೇದಿಕೆಯಾಗಿತ್ತು. ಹೌದು, ಸಾಮಾನ್ಯವಾಗಿ ರ‍್ಯಾಲಿ, ಸಮಾರಂಭ, ಸಮಾವೇಶಗಳೆಂದರೆ ಸಂಘಟಕರು, ಆಯೋಜಕರು ಮುಂದೆ ನಿಂತು ಫೋಸು ಕೊಡುವ ಭರಾಟೆಯಲ್ಲಿರುತ್ತಾರೆ. ಆದರೆ, ಇಲ್ಲಿ ಸಂಘಟಕರು ಕಾರ್ಯಕ್ರಮದ ಅಚ್ಚುಕಟ್ಟತನಕ್ಕೆ ಶ್ರಮಿಸುವ ಮೂಲಕ ವೇದಿಕೆಯಿಂದ ದೂರ ಉಳಿದರು. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗುರುಗಳ ಸಮಾಗಮದಲ್ಲಿ ಸ್ವಾಗತ, ನಿರೂಪಣೆ ಹಾಗೂ ವಂದನಾರ್ಪಣೆಯ ತನಕ ಬೇರೆ ಯಾರೊಬ್ಬರೂ ಧ್ವನಿವರ್ಧಕವನ್ನು ಕೈಗೆತ್ತಿಕೊಳ್ಳಲಿಲ್ಲ. ಇದು ಸಂಘಟನೆ ಹಾಗೂ ಸಂಘಟಕರ ಶಿಸ್ತಿಗೆ ಸಾಕ್ಷಿಯಾಗಿತ್ತು. ಸಂಪೂರ್ಣವಾಗಿ ಧರ್ಮಗುರುಗಳು ಸಮಾರಂಭವನ್ನು ನಿರ್ವಹಿಸುವ ಮೂಲಕ ಸ್ಪಷ್ಟವಾಗಿ ನಾವೆಲ್ಲಾ ಒಂದೇ ಎಂಬ ಶಾಂತಿ ಸಂದೇಶವನ್ನು ರವಾನಿಸಿದರು.
ರಸ್ತೆಯದ್ದುಕ್ಕೂ ತ್ಯಾಜ್ಯ ವಿಲೆ
ಶಾಂತಿ ನಡಿಗೆಯಲ್ಲಿ ಸಾಗುವ ಸಾವಿರಾರು ಮಂದಿಗೆ ಕುಡಿಯುವ ನೀರು ಹಾಗೂ ಬಿಸ್ಕತ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ನೀರು ಕುಡಿದ ಖಾಲಿ ಬಾಟಲಿ ಹಾಗೂ ಬಿಸ್ಕತ್ ಖಾಲಿ ಪೌಚುಗಳನ್ನು ನೂರಾರು ಸ್ವಯಂ ಸೇವಕರು ಸಂಗ್ರಹಿಸುವ ಮೂಲಕ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡಿದ್ದು, ಕಾರ್ಯಕ್ರಮ ಸಂಘಟಕರ ಪರಿಸರ ಕಾಳಜಿಗೆ ಸಾಕ್ಷಿಯಾಗಿತ್ತು.

ಶಾಂತಿ ನಡಿಗೆಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡದ್ದಿರೆ, ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿತ್ತು. ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಅವರು ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿ ಪ್ರಸಾದ್ ಸಂಪುರ್ಣ ಸಹಕಾರ ನೀಡುವ ಮೂಲಕ ಶಾಂತಿ ನಡಿಗೆಯ ಯಶಸ್ಸಿಗೆ ಸಹಕರಿಸಿದರು.
ಕಳೆಗಟ್ಟಿದ ಶಾಂತಿ ಮೆರವಣಿಗೆ
ಬೆಳಗ್ಗೆ 10.30ಗೆ ಸಿಮ್ಸ್ ಮೆಡಿಕಲ್ ಕಾಲೇಜು ಮುಂಭಾಗ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಾಫ ಹುಸೇನ್, ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಚಾಲನೆ ನೀಡಿದರು. ಅಲ್ಲಿಂದ ಆರಂಭಗೊಂಡ ನಮ್ಮ ನಡಿಗೆ ಶಾಂತಿ ನಡಿಗೆ ಮುಖ್ಯ ಬಸ್ ನಿಲ್ದಾಣ ಮೂಲಕ ಬಿಎಚ್ ರಸ್ತೆ ಮಾರ್ಗವಾಗಿ, ಅಮೀರ್ ಅಹಮದ್ ವೃತ್ತ, ಶಿವಪ್ಪನಾಯಕ ಸರ್ಕಲ್ ಮೂಲಕ ನಮ್ಮ ನಡಿಗೆ ಶಾಂತಿಯ ಕಡೆಗೆ ಘೋಷಣೆಗಳೊಂದಿಗೆ 6 ಸಾವಿರಕ್ಕೂ ಹೆಚ್ಚು ಜನರೊಂದಿಗೆ ಸೈನ್ಸ್ ಮೈದಾನದಲ್ಲಿ ಸಮಾವೇಶಗೊಂಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post