ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿಕಾರಿಪುರ: ಸಾಗರ ತಾಲೂಕಿನ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿ ಜಿಲ್ಲೆ ಹಾಗೂ ರಾಜ್ಯದಲ್ಲಿಯೇ ಸುಪ್ರಸಿದ್ಧವಾಗಿದ್ದು, ಈ ದೇವಿಯು ಅಪಾರ ಪ್ರಮಾಣದ ಭಕ್ತ ವೃಂದದ ಆರಾಧ್ಯ ದೈವವಾಗಿದೆ ಎಂದು ತಾಲೂಕು ಆರ್ಯ ಈಡಿಗ ಸಮಾಜದ ತಾಲೂಕು ಕಾರ್ಯದರ್ಶಿ ಮಂಜಪ್ಪ ಮುಡುಬ ಸಿದ್ದಾಪುರ ತಿಳಿಸಿದರು.
ಇಂದು ಪಟ್ಟಣದ ಸುದ್ದಿ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಸಾಗರ ತಾಲೂಕಿನ ಬ್ಯಾಕೋಡ್ ಕಳಸವಳ್ಳಿ ಭಾಗದಲ್ಲಿರುವ ಶ್ರೀಸಿಗಂಧೂರು ಚೌಡೇಶ್ವರಿ ದೇವಿಯ ಸನ್ನಿಧಾನವು ರಾಜ್ಯದಲ್ಲಿಯೇ ಸುಪ್ರಸಿದ್ಧ ದೈವವಾಗಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿಯೂ ಕೂಡ ಅಪಾರ ಪ್ರಮಾಣದ ಭಕ್ತ ವೃಂದವನ್ನು ಹೊಂದಿರುವ ಐತಿಹಾಸಿಕ ಕ್ಷೇತ್ರವಾಗಿದೆ ಅಲ್ಲದೇ, ಶ್ರೀಸಿಗಂಧೂರು ಚೌಡೇಶ್ವರಿ ದೇವಿಯು ಈಡಿಗ ಸಮಾಜದ ಕುಲ ದೈವವಾಗಿದೆ ಎಂದರು.

ಇತ್ತೀಚೆಗಷ್ಟೇ ದೇವಸ್ಥಾನದ ಧರ್ಮದರ್ಶಿ ಸಮಿತಿ ಹಾಗೂ ಅರ್ಚಕರ ಮಧ್ಯೆ ವೈಮನಸ್ಸು ಉಂಟಾಗಿ ಗಲಭೆಯಲ್ಲದೇ, ಸಂಘರ್ಷಕ್ಕೂ ಕೂಡ ಕಾರಣವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ಹಾಗೂ ಸಂಸದರು ಮಧ್ಯ ಪ್ರವೇಶಿಸಿ, ಭಕ್ತರು ಮತ್ತು ಸಮಾಜ ಬಾಂಧವರ ಭಾವನೆಗಳಿಗೆ ಧಕ್ಕೆಯಾಗದಂತೆ ಸರ್ವರಿಗೂ ಒಪ್ಪಿಗೆಯಾಗುವಂತೆ ನಿರ್ಣಯವನ್ನು ಕೈಗೊಳ್ಳಬಹುದು ಎಂಬ ಪೂರ್ಣ ವಿಶ್ವಾಸ, ನಂಬಿಕೆ ನಮ್ಮಲ್ಲಿ ಇದೆ ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘುಪತಿ ಮಾತನಾಡಿ, ರಾಮಪ್ಪ ಸುಮಾರು 50 ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯ ದೇವಸ್ಥಾನವನ್ನು ಧರ್ಮದರ್ಶಿಯಾಗಿರುವ ರಾಮಪ್ಪರವರು ನಿಭಾಯಿಸುವುದಲ್ಲದೇ, ಇಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಅಲ್ಲಿನ ಅರ್ಚಕರ ಭಿನ್ನಾಭಿಪ್ರಾಯದಿಂದ ಸಂಘರ್ಷಕ್ಕೆ ಕಾರಣವಾಗಿದೆ ಎಂದರು.
ದೇವಸ್ಥಾನದಲ್ಲಿ ನಡೆದ ಗಲಭೆಯಿಂದ ಇತ್ತೀಚೆಗಷ್ಟೇ ಮೇಲುಸ್ತುವಾರಿ ಸಮಿತಿಯನ್ನು ರಚಿಸಿ, ಮುಜರಾಯಿ ಇಲಾಖೆಗೆ ಒಳಪಡಿಸುವ ಪ್ರಯತ್ನ ನಡೆಯುತ್ತಿದೆ. ಧರ್ಮದರ್ಶಿಯಾಗಿರುವ ರಾಮಪ್ಪರವರು ಹಲವಾರು ವರ್ಷಗಳಿಂದ ಈ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ನಮ್ಮ ಸಮಾಜದ ಕುಲ ದೈವವಾಗಿರುವ ಶ್ರೀಸಿಗಂಧೂರು ಚೌಡೇಶ್ವರಿ ದೇವಿಯ ದೇವಸ್ಥಾನವನ್ನು ಯಾವುದೇ ಕಾರಣಕ್ಕೂ ಮುಜುರಾಯಿ ಇಲಾಖೆಗೆ ಒಳಪಡಿಸಬಾರದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಕೀಲರು ಹಾಗೂ ಸಮಾಜದ ಮುಖಂಡರಾದ ವೇದಮೂರ್ತಿ, ಕರಿಬಸಪ್ಪ, ಉಮೇಶ್ ಕೋಡಿಹಳ್ಳಿ, ಹರೀಶ್, ಪ್ರಕಾಶ್, ವೆಂಕಟೇಶ್ ಸೇರಿದಂತೆ ಅನೇಕರು ಹಾಜರಿದ್ದರು.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















