ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಯುವಜನರಿಗೆ ಸಮರ್ಪಕ ರೀತಿಯಲ್ಲಿ ಆಧ್ಯಾತ್ಮಿಕ ಜ್ಞಾನ ನೀಡುವ ಕಾರ್ಯವಾಗಬೇಕಿದೆ ಎಂದು ವಾಸವಿ ಗುರುಪೀಠಾಧಿಪತಿ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ವಾಸವಿ ವಿದ್ಯಾಲಯದ ಆವರಣದಲ್ಲಿ ಜಿಲ್ಲೆಯ ಎಲ್ಲಾ ಆರ್ಯವೈಶ್ಯ ಸಂಘಗಳ ವತಿಯಿಂದ ಆಯೋಜಿಸಿದ್ದ ಸದ್ಗುರು ರಥಯಾತ್ರೆ ಹಾಗೂ ಧರ್ಮ ಜಾಗೃತಿ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜದ ಹಿರಿಯರು ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನರಾದರೂ ಯುವಜನರಿಗೆ ಸರಿಯಾಗಿ ಧರ್ಮದ ಬಗ್ಗೆ ತಿಳವಳಿಕೆ ಮೂಡಿಸಲಿಲ್ಲ. ಆದ್ದರಿಂದಲೇ ಯುವಜನತೆ ಸಂಸ್ಕೃತಿ ಆಧ್ಯಾತ್ಮಿಕದಿಂದ ದೂರವಾಗಿದ್ದಾರೆ. ಯುವಜನರಿಗೆ ಅರಿವಾಗುವ ರೀತಿಯಲ್ಲಿಯೇ ಧರ್ಮದ ಜ್ಞಾನವನ್ನು ಹೆಚ್ಚಿಸುವ ದಿಸೆಯಲ್ಲಿ ಕಾರ್ಯ ನಿರ್ವಹಿಸಬೇಕಿದೆ ಎಂದು ತಿಳಿಸಿದರು.

ಆರ್ಯವೈಶ್ಯ ಸಮಾಜದ 50ಕ್ಕೂ ವಿದ್ಯಾಸಂಸ್ಥೆಗಳಿದ್ದು, 100ಕ್ಕೂ ಅಧಿಕ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುತ್ತಿವೆ. ದೇಶಾದ್ಯಂತ ಸಮಾಜದ ನೂರಾರು ದೇವಸ್ಥಾನಗಳಿದೆ. ಎಲ್ಲರಲ್ಲಿಯೂ ಗುರುಪೀಠ ಇರಲಿಲ್ಲ ಎಂಬ ಕೊರಗಿತ್ತು. ಆರ್ಯವೈಶ್ಯ ಮಹಾಸಭಾವು ಸಮಾಜದ ಸಂಕಲ್ಪವನ್ನು ಸ್ವಾಮೀಜಿಗಳಲ್ಲಿ ನಿವೇದನೆ ಮಾಡಿಕೊಳ್ಳುತ್ತಿತ್ತು. ಇದೀಗ ವಾಸವಿ ಮಾತೆ ಅನುಗ್ರಹದಿಂದ ಗುರುಪೀಠ ಸ್ಥಾಪನೆ ಆಗುತ್ತಿದೆ. ಸಮಾಜದ ಶ್ರೇಷ್ಠತೆ ಹೆಚ್ಚಿಸುವಲ್ಲಿ ಗುರುಪೀಠ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.

ಆರ್ಯವೈಶ್ಯ ಮಹಾಸಭಾ ಕಾರ್ಯದರ್ಶಿ ಎಸ್.ಕೆ. ಶೇಷಾಚಲ ಪ್ರಾಸ್ತವಿಕ ಮಾತನಾಡಿ, ಸಮಾಜದಲ್ಲಿ ಸಂಸ್ಕಾರ ತರುವ ನಿಟ್ಟಿನಲ್ಲಿ, ಯುವಕರಲ್ಲಿ ಧರ್ಮಜಾಗೃತಿಗೊಳಿಸಲು ಗುರುಪೀಠ ಕಲ್ಪನೆ ಅವಶ್ಯಕ. ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅತ್ಯಂತ ದಿಟ್ಟ ಹೆಜ್ಜೆಗಳನ್ನು ಇಡುತ್ತಿದ್ದು, ಗುರುಪೀಠದ ಮಾರ್ಗದರ್ಶನದಲ್ಲಿ ಮುನ್ನಡೆಯಲಿದೆ. ಗುರುಪೀಠಕ್ಕೆ ಅವಶ್ಯವಿರುವ ಎಲ್ಲ ಕಾರ್ಯಗಳನ್ನು ಮಹಾಸಭಾ ಮಾಡಲಿದೆ ಎಂದು ತಿಳಿಸಿದರು.

ಸಭಾ ಕಾರ್ಯಕ್ರಮದ ಆರಂಭದಲ್ಲಿ ನೂರಕ್ಕೂ ಅಧಿಕ ಮಹಿಳೆಯರಿಂದ ಶತಕಂಠ ಗಾಯನ ನಡೆಯಿತು. ಸಹಚೇತನಾ ನಾಟ್ಯಾಲಯದ ವಿದ್ಯಾರ್ಥಿಗಳು ಸ್ವಾಗತ ನೃತ್ಯ ನಡೆಸಿಕೊಟ್ಟರು. ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರ್‌ಮೂರ್ತಿ, ಆರ್‌ಎಸ್‌ಎಸ್ ಪ್ರಮುಖರಾದ ಪಟ್ಟಾಭಿರಾಮ್, ಮೇಯರ್ ಸುನೀತಾ ಅಣ್ಣಪ್ಪ, ಆರ್ಯವೈಶ್ಯ ಮಹಾಸಭಾ ಸಂಘಟನಾ ಕಾರ್ಯದರ್ಶಿ ಎ.ಆರ್. ರವಿಕುಮಾರ್, ಗುರುಪೀಠ ಸ್ವಾಗತ ಸಮಿತಿ ಜಿಲ್ಲಾ ಸಂಚಾಲಕ ಭೂಪಾಳಂ ಎಸ್. ಶಶಿಧರ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post