ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಹಿರಿಯ ಪತ್ರಕರ್ತರಾಗಿದ್ದ ದಿ.ಮಿಂಚು ಶ್ರೀನಿವಾಸ ಅವರ ನೆನಪಿನಲ್ಲಿ ಕಳೆದ ಹತ್ತು ವರ್ಷದಿಂದ ಅವರ ಕುಟುಂಬ ವರ್ಗ ಧಾರವಾಡದ ಸಾಕಾರ ಸಾಂಸ್ಕೃತಿಕ ಮತ್ತು ಮಾಧ್ಯಮ ಪ್ರತಿಷ್ಠಾನದ ಸಹಯೋಗದಲ್ಲಿ ನೀಡುತ್ತಿರುವ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಪರಿಸರ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ನಾಗೇಶ ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರತಿಷ್ಠಾನದ ಅಧ್ಯಕ್ಷ ಸುನಿಲ್ ಕುಲಕರ್ಣಿ, ನಾಗೇಶ್ ಹೆಗಡೆಯವರು ಪುಜಾವಾಣಿ ಹಾಗೂ ಇತರ ಪತ್ರಿಕೆಯಲ್ಲಿ ಜನಪರ, ಪರಿಸರ ಹಾಗೂ ಅಭಿವೃದ್ಧಿ ವಿಷಯಗಳ ಮೇಲೆ ಅನೇಕ ಮೌಲ್ಯಯುತ ಲೇಖನ, ಅಂಕಣ ಬರಹಗಳನ್ನು ಅವರು ಬರೆಯುತ್ತಿದ್ದಾರೆ ಎಂದರು.

ದಶಮಾನೋತ್ಸವದ ಅಂಗವಾಗಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುತ್ತಿದ್ದು ಹಿರಿಯ ಸಾಹಿತಿ ನಾ. ಡಿಸೋಜ ಮುಖ್ಯ ಅತಿಥಿಗಳಾಗಿ ಆಗಮಿಸಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ಬಂಕಾಪೂರದ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ, ದಿ. ದತ್ತಾತ್ರೇಯ ಕುಲಕರ್ಣಿ ಅವರ ನೆನಪಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ (ಎಂಎ) ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಶಿಕ್ಷಣ ಸಿರಿ ಪ್ರಶಸ್ತಿ ನೀಡುತ್ತಿದ್ದು ಈ ಬಾರಿ ಕುಮಾರ ಉಮೇಶ್ ಎನ್.ಆರ್. ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ವಿದುಷಿ ನಾಗರತ್ನ ಹಡಗಲಿ ಮತ್ತು ಡಾ. ಶುಭದಾ ಸಿ ಉಪಸ್ಥಿತರಿರುತ್ತಾರೆ ಎಂದರು.

ಉಪಸ್ಥಿತರಿದ್ದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಮಿಂಚು ಶ್ರೀನಿವಾಸ್ ಅವರ ಕೆಲಸದ ವೈಖರಿ, ಪತ್ರಿಕೋದ್ಯಮದಲ್ಲಿ ಅವರು ಇಟ್ಟ ದಿಟ್ಟ ಹೆಜ್ಜೆ, ಮಾಡಿದ ಅವಿಸ್ಮರಣೀಯ ಸಾಧನೆಗಳನ್ನು ತೆರೆದಿಟ್ಟರು.
ಪತ್ರಿಕಾಗೋಷ್ಟಿಯಲ್ಲಿ ಪ್ರತಿಷ್ಠಾನದ ಸದಸ್ಯರಾದ ರವಿಕುಮಾರ್, ಜ್ಯೋತಿ ರವಿಕುಮಾರ್, ಸುರಭಿ, ಗಣೇಶ್ ಅಡಿಗ, ಈಶ್ವರಪ್ರಸಾದ್ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post