ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ವೈದ್ಯಕೀಯ ಕ್ಷೇತ್ರ ಮಾತ್ರವಲ್ಲದೇ ಯಾವುದೇ ಕ್ಷೇತ್ರದ ವೃತ್ತಿನಿರತರೂ ಸೇರಿದಂತೆ ಯಾರ ಜೀವನವೂ ಸಹ ಸಾಹಿತ್ಯದ ಪಸೆಯಿಲ್ಲದೇ ಸಂಪೂರ್ಣವಲ್ಲ ಎಂದು ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕಿ ಡಾ.ಶುಭಾ ಮರವಂತೆ ಅಭಿಪ್ರಾಯಪಟ್ಟರು.
ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಲಿಟರರಿ ಕ್ಲಬ್ ವತಿಯಿಂದ ಆಯೋಜಿಸಿದ್ದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಜೀವನದಲ್ಲಿ ಸಾಹಿತ್ಯ ಕೃಷಿಯ ಮಹತ್ವ ಎಂಬ ವಿಚಾರದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಕೇವಲ ಶರೀರದ ಮೂಲಕ ಮನುಷ್ಯ ಎನಿಸಿಕೊಳ್ಳಲು ಸಾಧ್ಯವಿಲ್ಲ. ಬದಲಾಗಿ ಮಾನಸಿಕವಾಗಿ ಸಾಹಿತ್ಯ, ಸಂಸ್ಕøತಿ, ಸಂಗೀತ, ಕಲೆಗಳನ್ನು ಮೈಗೂಡಿಸಿಕೊಂಡು ತನ್ನ ಬೆಳವಣಿಗೆಯ ಜೊತೆಗೆ ನಮ್ಮ ಸಮಾಜವನ್ನೂ ಇದರ ಮುಖಿಯಾಗಿ ಮುನ್ನಡೆಸುವವನೇ ನಿಜವಾದ ಮನುಷ್ಯ ಎನಿಸಿಕೊಳ್ಳುತ್ತಾನೆ ಎಂದು ಪಂಪ ಹೇಳಿರುವ ಮಾತು ಎಂದಿಗೂ ಪ್ರಸ್ತುತವಾಗಿದೆ ಎಂದರು.
ಭಾವನೆಗಳ ಕೋಶ ವಿಸ್ತರಣೆಯಾದಾಗ ಮಾತ್ರ ಮನುಷ್ಯ ಉನ್ನತೀಕರಣಗೊಳ್ಳುತ್ತಾನೆ. ಇದಕ್ಕಾಗಿ ಕನಸುಗಳನ್ನು ಕಾಣುವುದನ್ನು ಕಲಿಯಬೇಕು. ಇದೇ ನಿಟ್ಟಿನಲ್ಲಿ ಪ್ರತಿ ವಿದ್ಯಾರ್ಥಿಯೂ ಸಾಗಿದಾಗ, ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಭಾವ ಕೋಶಗಳ ವಿಸ್ತರಣೆ ಮೂಲಕ ಪರಿಪೂರ್ಣ ಜ್ಞಾನದತ್ತ ಸಾಗಬೇಕು ಎಂದರು.
ವಿದ್ಯಾರ್ಥಿಗಳು ಪ್ರತಿ ಕ್ಷಣವನ್ನೂ ಸನ್ನಿವೇಶದಿಂದ ಹೊರನಿಂತು ಅವಲೋಕನ ನಡೆಸಿದಾಗ ಉತ್ತಮ ಸಾಹಿತ್ಯ ಪ್ರಕಾರಗಳ ಸೃಜನಶೀಲ ಅಂಶಗಳು ಕಾಣಸಿಗುತ್ತವೆ. ಆಗ ಸಮಾಜಕ್ಕೆ ಅವಶ್ಯವಾದ ಸಾಹಿತ್ಯ ಹೊರಹೊಮ್ಮುತ್ತದೆ ಎಂದರು.
ಸಾಹಿತ್ಯವನ್ನು ಅಧ್ಯಯನ ನಡೆಸಿದಾಗ ಮನೋವಿಕಾಸ ಪ್ರಬುದ್ಧವಾಗುತ್ತದೆ. ಎಂತಹುದೇ ಉದ್ವೇಗನ್ನಾದರೂ ಕಡಿಮೆ ಮಾಡಿಕೊಂಡು ಧ್ಯಾನಾವಸ್ಥೆಗೆ ತಲುಪುವಂತೆ ಮಾಡುವುದರೆ ಜೊತೆಗೆ, ಇತರರನ್ನು ಪ್ರೀತಿಸುವುದನ್ನು ಕಲಿಸುತ್ತದೆ. ಇತ್ತೀಚಿನ ಯುವ ಪೀಳಿಗೆಯಲ್ಲಿ ಓದುವ, ಬರೆಯುವ ಮನಸ್ಸುಗಳು ತೀರಾ ವಿರಳವಾಗಿವೆ. ಯಾಂತ್ರಿಕ ಬದುಕು, ಬಾಲ್ಯದಿಂದ ಮುಪ್ಪಿನವರೆಗೂ ಇಡಿಯ ಮನುಷ್ಯ ಕುಲವನ್ನು ಆವರಿಸಿದೆ. ಆಳವಾದ ಅಧ್ಯಯನದಿಂದ ಮನುಷ್ಯ ತನ್ನನ್ನ ತಾನು ವಿಶಾಲ ದೃಷ್ಠಿಕೋನದಿಂದ ವಿಕಸನಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಲತಾ ನಾಗೇಂದ್ರ, ಡಾ. ವಿನಯಾ ಶ್ರೀನಿವಾಸ್, ಪ್ರಾಂಶುಲರಾದ ಡಾ. ಎಸ್.ಎಂ. ಕಟ್ಟಿ, ಡಾ. ಸಿ.ಎಂ. ಸಿದ್ದಲಿಂಗಪ್ಪ, ಶೈಕ್ಷಣಿಕ ನಿರ್ದೇಶಕರಾದ ಡಾ. ಆರ್.ಪಿ. ಪೈ, ವಿಭಾಗಗಳ ಮುಖ್ಯಸ್ಥರು, ವೈದ್ಯರು ಹಾಗೂ ವಿದ್ಯಾರ್ಥಿಗಳು ಇದ್ದರು.
ಜೀವನದ ದೃಷ್ಠಿಯಲ್ಲಿ ಲಬ್-ಡಬ್
ಮನುಷ್ಯ ಹೃದಯ ಬಡಿತ ಲಬ್-ಡಬ್ ಎನ್ನುವುದನ್ನು ಲಬ್ ಎಂದರೆ ಲಿವ್ ಯುವರ್ ಬೆಸ್ಟ್ ಹಾಗೂ ಡಬ್ ಎಂದರೆ ಡೂ ಯುವರ್ ಬೆಸ್ಟ್ ಎಂದು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಮಾನಸಿಕ ಆರೋಗ್ಯವನ್ನು ಹೊಂದಲು ಸಹಕಾರಿಯಾಗುತ್ತದೆ.
-ಡಾ. ಶುಭಾ ಮರವಂತೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post