ಕಲ್ಪ ಮೀಡಿಯಾ ಹೌಸ್ |
ಶಿವಮೊಗ್ಗ |
ಸಹಚೇತನ ನಾಟ್ಯಾಲಯದಿಂದ ಜೂ.25ರಂದು ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ನೃತ್ಯ ಕದಂಬಕಂ ಹೆಸರಿನ ಅಡಿಯಲ್ಲಿ ಉಚಿತ ಸಾಮೂಹಿಕ ರಂಗಪ್ರವೇಶ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ಹಾಗೂ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಹಚೇತನ ನಾಟ್ಯಾಲಯ ಹಲವು ವರ್ಷಗಳಿಂದ ಸಾವಿರಾರು ಜನರಿಗೆ ಭರತನಾಟ್ಯ ವಿದ್ಯೆ ಕಲಿಸಿದೆ. ಇಲ್ಲಿ ಕಲಿತ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಭರತ ನಾಟ್ಯದಲ್ಲಿ ರಂಗಪ್ರವೇಶ ಬಹಳ ಮುಖ್ಯವಾದ ಮತ್ತು ಶಾಸ್ತ್ರೀಯವಾಗಿದೆ. ಈ ರಂಗಪ್ರವೇಶಕ್ಕೆ ಖರ್ಚು ಕೂಡ ಹೆಚ್ಚಾಗುತ್ತದೆ. ಪ್ರತಿಭಾವಂತ ಬಡ ಮಕ್ಕಳಿಗೆ ರಂಗಪ್ರವೇಶ ಮಾಡುವುದು ಕಷ್ಟವಾಗುತ್ತದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡ ಸಹಚೇತನ ನಾಟ್ಯಾಲಯ ತಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರುವ ಐವರು ಭರತನಾಟ್ಯ ಪ್ರವೀಣರಿಗೆ ಉಚಿತವಾಗಿ ಸಾಮೂಹಿಕ ರಂಗಪ್ರವೇಶ ಹಮ್ಮಿಕೊಂಡಿದೆ ಎಂದರು.

ಇಲ್ಲಿ ವ್ಯಾಸಂಗ ಮಾಡಿದ ಡಿ.ಎ. ಸೇಜಲ್, ಶರಣ್ಯ ಎ.ಸಿ. , ಕಾಮಾಕ್ಷಿ ಆರ್.ಪ್ರಭು, ಸಿಂಧುಶ್ರೀ ಅಡಿಗ, ಆರ್. ರಕ್ಷಿತ ಅವರು ಸಾಮೂಹಿಕ ರಂಗಪ್ರವೇಶ ಮಾಡಲಿದ್ದಾರೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಬಹುಶಃ ಉಚಿತ ಸಾಮೂಹಿಕ ರಂಗಪ್ರವೇಶ ಹಮ್ಮಿಕೊಂಡಿರುವುದು ಜಗತ್ತಿನಲ್ಲಿಯೇ ಇದೇ ಪ್ರಥಮವಾಗಿದೆ. ಇದರ ಕೀರ್ತಿ ಸಹಚೇತನ ನಾಟ್ಯಾಲಯದ ನೃತ್ಯಗುರು ಸಹನಾ ಚೇತನ್‍ರವರಿಗೆ ಸಲ್ಲುತ್ತದೆ ಎಂದರು.
Also read: ಶಿರಾಳಕೊಪ್ಪ ಸಾಮೀಲ್ ನಲ್ಲಿ ಒಂಟೆ ಪತ್ತೆ ಹಿನ್ನೆಲೆ: ದೂರು ದಾಖಲು
ನೃತ್ಯಗುರು ಸಹನಾ ಚೇತನ್ ಮಾತನಾಡಿ, ಭರತನಾಟ್ಯ ಕಲಿಕಾನಿರತ ವಿದ್ಯಾರ್ಥಿಗಳಿಗೆ ತಮ್ಮ ನೃತ್ಯ ಜೀವನದ ಅತ್ಯಂತ ಮಹತ್ವದ ಘಟ್ಟವೇ ಈ ರಂಗಪ್ರವೇಶವಾಗಿದೆ. ನೃತ್ಯವೆಂದರೆ ಅದೊಂದು ಆತ್ಮಾನುಭವದ ಅಭಿವ್ಯಕ್ತಿ. ಆನಂದದ ಪರಾಕಾಷ್ಠೆಯ ಅನುಭೂತಿಯಾಗಿದೆ. ಗುರುವಿನ ಮಾರ್ಗದರ್ಶನದಲ್ಲಿ ಈ ಭಾವಸ್ಪಂದನ ಹೊರಹೊಮ್ಮಿದಾಗ ದೊರಕುವ ಫಲಶ್ರುತಿಯೇ ಅನನ್ಯ ಅನುಭವವಾಗಿದೆ ಎಂದರು.

ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್ ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ನೃತ್ಯ ವಿದ್ವಾಂಸರಾದ ಮೈಸೂರಿನ ಡಾ.ತುಳಸೀರಾಮಚಂದ್ರ ಕಾರ್ಯಕ್ರಮ ಉದ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಡಿ.ಎಸ್. ಅರುಣ್, ವಾಸವಿ ಶಾಲೆಯ ಕಾರ್ಯದರ್ಶಿ ಎಸ್.ಕೆ. ಶೇಷಾಚಲ, ಮಾಜಿ ಜಿ.ಪಂ. ಸದಸ್ಯ ಕೆ.ಈ.ಕಾಂತೇಶ್, ನಾಟ್ಯಾಲಯದ ಅಧ್ಯಕ್ಷ ಎಸ್.ಆರ್. ಪ್ರಕಾಶ್ ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಪ್ರಮುಖರಾದ ಚೇತನ್, ಆನಂದರಾಮ್, ಹರೀಶ್ ಕಾರ್ಣಿಕ್, ಕೌಶಿಕ್ ಪಂಡಿತ್, ದಿನೇಶ್ ಆಚಾರ್ಯ, ಪ್ರಜ್ವಲ್ ಮುಂತಾದವರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
