ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದಿನ ಯುವಪೀಳಿಗೆಯು, ಅಲ್ಪ ಕ್ಷಣದ ಖುಷಿಗಾಗಿ ತಮ್ಮ ಇಡೀ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆ, ಎನ್‌ಸಿಸಿಯಂತಹ ಸಂಘಟನೆಗಳು ವಿದ್ಯಾರ್ಥಿಗಳಿಗೆ ನೂತನ ಯೋಜನೆಯೊಂದಿಗೆ ಯೋಚನೆ, ಆಲೋಚನೆಗಳನ್ನು ಹುಟ್ಟುಹಾಕುವಲ್ಲಿ ಸಹಕಾರಿಯಾಗಿದೆ. ಆ ಮೂಲಕ ಭಾರತಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡುತ್ತವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಮ್. ಲಕ್ಷ್ಮೀಪ್ರಸಾದ್ SP Lakshimi Prasad ಹೇಳಿದರು.
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ದುಶ್ಚಟಗಳು, ಮಾಧ್ಯಮಗಳ ಅತಿಯಾದ ಬಳಕೆಯಿಂದ ಯುವ ಪೀಳಿಗೆ ತಮ್ಮ ಗುರಿ ತಲುಪುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ರಾಷ್ಟ್ರೀಯ ಭಾವೈಕ್ಯತಾ ಶಿಬಿರಗಳು ಮತ್ತೆ ವಿದ್ಯಾರ್ಥಿಗಳಿಗೆ ಹೊಸ ಹುರುಪನ್ನು ತುಂಬಿ ಸಾಮಾಜಿಕ ಜವಾಬ್ದಾರಿಯನ್ನು ಹುಟ್ಟುಹಾಕುತ್ತದೆ. ಮತ್ತು ಇತರರಿಗೆ ಮಾರ್ಗದರ್ಶನ ಮಾಡುವ ಕೌಶಲ್ಯ ಹಾಗೂ ಅರಿವು ಮೂಡಿಸುವಲ್ಲಿ ಸಹಾಯಕವಾಗಲಿದೆ ಎಂದು ಹೇಳಿದರು.
ಕುವೆಂಪು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾದ ಪ್ರೊ. ಕಿರಣ್ ದೇಸಾಯಿ ಮಾತನಾಡಿ, ಇಂದಿನ ಶಿಬಿರದಲ್ಲಿ ಎಲ್ಲಾ ಕಾರ್ಯಕ್ರಮಾಧಿಕಾರಿಗಳು, ಶಿಬಿರಾಧಿಕಾರಿಗಳ ಅನಿಸಿಕೆಯೇ ಈ ಕಾರ್ಯಕ್ರಮದ ಯಶಸ್ಸಿನ ಪ್ರತಿಬಿಂಬವಾಗಿದೆ. ಇಲ್ಲಿನ ಎಲ್ಲಾ ವಿದ್ಯಾರ್ಥಿಗಳ ಶಿಸ್ತು, ಸಮಯ, ಸೋದರತ್ವ ಗುಣ ನಿಜವಾದ ಭಾರತದ ಐಕ್ಯತೆಯನ್ನು ಎತ್ತಿ ಹಿಡಿಯುತ್ತಿದೆ. ಶಿಬಿರಾರ್ಥಿಗಳ ಭಾಷೆ ಬೇರೆಯಾದರು ಭಾವ ಒಂದೆಯಾಗಿದೆ. ಅವರ ಆಚಾರ ಬೇರೆಯಾದರು ಅವರ ದೇಶ ನಿರ್ಮಾಣದ ಯೋಚನೆ ಒಂದೇ ಆಗಿದೆ. ಶಿಬಿರದ ಆಯೋಜನೆ, ವ್ಯವಸ್ಥೆ, ರೂಪರೇಶಗಳು ಅತ್ಯಂತ ಕ್ರಮಬದ್ದವಾಗಿ ಮೂಡಿಬಂದು ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪದವೀಧರರ ಸ್ವಸಹಾಯ ಸಂಘದ ಅಧ್ಯಕ್ಷ ಎಸ್.ಪಿ. ದಿನೇಶ್ ಮಾತನಾಡಿ, ಶಿಬಿರವು ಭಾವನಾತ್ಮಕ ಬೆಸುಗೆಯನ್ನು ಬೆಸೆದಿದೆ. ಎಲ್ಲಾ ಶಿಬಿರಾರ್ಥಿಗಳು ಕುಟುಂಬದ ಸದಸ್ಯರಂತೆ ಕಾಣುತ್ತಿರುವುದನ್ನು ಕಂಡರೆ, ಭಾರತದ ಸರ್ವ-ಧರ್ಮ ಸಮನ್ವಯದ ತಾತ್ಪರ್ಯ ನಿಜಕ್ಕೂ ಸತ್ಯ ಮತ್ತು ಶ್ಲಾಘನೀಯ ಎಂಬ ಭಾವನೆ ನಮ್ಮಲ್ಲಿ ಮೂಡುತ್ತಿದೆ. ನಿಜವಾದ ಪ್ರೀತಿ ಸೌಹಾರ್ಧತೆ, ಸೋದರತ್ವ, ಉತ್ತಮ ಆಲೋಚನೆಗಳಿದ್ದರೆ, ಭಾಷೆಯಾಗಲಿ, ಪ್ರದೇಶವಾಗಲಿ ಯಾವ ಅಡ್ಡಿಯಾಗದು ಎಂದು ಶಿಬಿರವನ್ನು ನೋಡಿದರೆ ತಿಳಿಯುತ್ತದೆ. ಇದು ವಿವಿಧ ರಾಜ್ಯಗಳ ಕಲೆ, ಸಂಸ್ಕೃತಿ, ಸಂಸ್ಕಾರಗಳ ಸಂಗಮ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಕೆ. ಎಂ. ವೀಣಾ ಮಾತನಾಡಿ, ಶಿಬಿರದ ಆಯೋಜನೆ ಅತ್ಯಂತ ವ್ಯವಸ್ಥಿತವಾಗಿದ್ದು. ಈ ಶಿಬಿರವು ನಮ್ಮ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದು ನಮಗೆ ಹೆಮ್ಮೆ ತಂದಿದೆ. ಡಾ. ನಾಗರಾಜ ಪರಿಸರ ಅವರ ಕಾರ್ಯಕ್ಷಮತೆ, ಕ್ರಿಯಾಶೀಲತೆ ಅವರ ಸಹಾನುಭೂತಿ ಗುಣಗಳು. ಈ ಶಿಬಿರದ ಯಶಸ್ಸಿಗೆ ಕಾರಣವಾಗಿದೆ. ದೇಶ ನಮಗೇನು ಕೊಟ್ಟಿದೆ ಎಂಬುದಕ್ಕಿಂತ ದೇಶಕ್ಕಾಗಿ ನಾವು ಏನುಕೊಟ್ಟಿದ್ದೇನೆ ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರು ಉತ್ತಮ ಕಾರ್ಯಗಳನ್ನು ನಿರ್ವಹಿಸಲಿ ಎಂದು ಆಶಿಸಿದರು.
Also read: ರಾಕೇಶ್ ಟಿಕಾಯತ್ ಮೇಲಿನ ದಾಳಿಗೆ ರವಿಕುಮಾರ್ ಖಂಡನೆ
ಇದೇ ಸಂದರ್ಭದಲ್ಲಿ ಶರಾವತಿ ತಂಡದವರು ಹೆಣ್ಣು ಭ್ರೂಣ ಹತ್ಯೆಯ ಕುರಿತು ಸೇವಾ ಸ್ಪಂದನೆಯನ್ನು ಬಿಡುಗಡೆ ಮಾಡಿ, ತಂಬಾಕು ಮುಕ್ತ ಭಾರತ ಎಂಬ ವಿಷಯದ ಕುರಿತು ಚಿತ್ರ ವಿಶ್ಲೇಷಣೆ ಮಾಡಿದರು. ಮಹೇಂದ್ರ ಶೆಟ್ಟಿ ಭಾವೈಕ್ಯತಾ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಡಾ. ನಾಗರಾಜ ಪರಿಸರ ಅವರು ಯೋಗ ತರಬೇತಿ ನೀಡಿ, ಹಿರಿಯ ಸ್ವಯಂ ಸೇವಕರು ಮನೋರಂಜನಾ ಆಟಗಳನ್ನು ಆಡಿಸಿದರು.
ವಿವಿಧ ರಾಜ್ಯದ ಮತ್ತು ವಿಶ್ವವಿದ್ಯಾಲಯದ ಸ್ವಯಂ ಸೇವಕರು ತಾವು ಕಲಿತ ಪಾಠ, ಕಳೆದ ಕ್ಷಣಗಳ ಬಗ್ಗೆ ಶಿಬಿರದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಕಾರ್ಯಕ್ರಮಾಧಿಕಾರಿಗಳು ಈ ಶಿಬಿರದಲ್ಲಿ ನಾವು ಪಾಲ್ಗೊಂಡಿದ್ದು ಜೀವನದಲ್ಲಿ ನಮಗೆ ಸಿಕ್ಕ ಸುವರ್ಣಾವಕಾಶ. ಈ ಶಿಬಿರವು ನಮಗೆ ಅನೇಕ ರೀತಿ ಸಕರಾತ್ಮಕ ಬದಲಾವಣೆಯನ್ನು ಹೊಂದುವಲ್ಲಿ ಸಹಾಯಕವಾಗಿದೆ. ಕುವೆಂಪು ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ ಮತ್ತು ಅವರ ಹಿರಿಯ ಸ್ವಯಂ ಸೇವಕರ ತಂಡ ನಮ್ಮನ್ನ ಉಪಚರಿಸಿದ ರೀತಿ ನಮ್ಮಲ್ಲಿ ಅಗಾದ ಗೌರವನ್ನುಂಟು ಮಾಡಿದೆ. ಇಂತಹ ಶಿಬಿರ ಮತ್ತೊಮ್ಮೆ ಮೊಗದೊಮ್ಮೆ ಆಯೋಜನೆಯಾಗುತ್ತಿರಲಿ. ಈ ಶಿಬಿರಕ್ಕಾಗಿ ಶ್ರಮಿಸಿದ ಸರ್ವರಿಗೂ ನಮ್ಮ ನಮಸ್ಕಾರಗಳು. ತಮಗೆಲ್ಲಾ ಶುಭವಾಗಲಿ ಎಂದು ತಮ್ಮ ಶಿಬಿರದ ಅನಿಸಿಕೆಯನ್ನು ಭಾವನಾತ್ಮಕವಾಗಿ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post