ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯುವ ಸಮೂಹಕ್ಕೆ ಅನುಭವದ ಮೂಲಕ ಶಿಕ್ಷಣ ನೀಡುವುದೇ ರಾಷ್ಟ್ರೀಯ ಸೇವಾ ಯೋಜನೆ ಎಂದು ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಮಾಜಿ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ.ಗೌಡರ್ ಶಿವಣ್ಣವರ್ ತಿಳಿಸಿದರು.
ಅವರು ಇಂದು ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಯುವ ಸಪ್ತಾಹದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಜೀವನಕ್ಕಿಂತ ಜೀವ ದೊಡ್ಡದು. ಕೊವಿಡ್ ಮಹಾಮಾರಿಯ ಸಂದರ್ಭದಲ್ಲಿಯೂ ನಮ್ಮ ದೇಶದಲ್ಲಿ ಯುವಕರು ಕಾಳಜಿಯಿಂದ ಜೀವನ ನಿರ್ವಹಿಸಿ ಬದುಕುಳಿದಿದ್ದೇ ನಮ್ಮ ದೇಶದ ದೊಡ್ಡ ಆಸ್ತಿಯಾಗಿದೆ ಎಂದು ಅವರು ಹೇಳಿದರು.
ಯಾವ ದೇಶದಲ್ಲಿ ಯುವಕರು ಕನಿಷ್ಟ ಪಕ್ಷ ಶೇ.೫೦ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇರುತ್ತಾರೋ ಆ ದೇಶ ಅಭಿವೃದ್ಧಿ ಕಾಣುವುದು ಕಷ್ಟಸಾಧ್ಯ ಎಂದ ಅವರು ನೆರೆಯ ಚೀನಾ ದೇಶದ ಉದಾಹರಣೆಯನ್ನು ನೀಡಿ ಯುವಕರ ಪ್ರಾಮುಖ್ಯತೆಯನ್ನು ವಿವರಿಸಿದರು.

ಸ್ವಾಮಿ ವಿವೇಕಾನಂದರು ಖಾವಿ ಧರಿಸಿ ಸನ್ಯಾಸಿಯಾದರೂ ಯಾವುದೇ ಗುಡಿ-ಗುಂಡಾರ, ಮಠ-ಮಂದಿರಗಳನ್ನು ಸುತ್ತಲಿಲ್ಲಿ. ಬದಲಾಗಿ ದೇಶ, ಪ್ರಪಂಚ ಸುತ್ತಿ ಯುವಕರಲ್ಲಿ ದೇಶ ಪ್ರೇಮ, ಸ್ವಾತಂತ್ರ್ಯದ ಕುರಿತು ಜಾಗೃತಿ ಮೂಡಿಸಿದರು ಎಂದು ತಿಳಿಸಿದರು.
ಉತ್ತಮವಾದ ಸಮಾಜ ನಿರ್ಮಿಸಲು ಉತ್ತಮವಾದ ಯುವಕರು ಬೇಕು. ಅದು ಎನ್.ಎಸ್.ಎಸ್.ನಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದ ಅವರು ಶ್ರಮ ಸಮಾಜ, ಹಳ್ಳಿಯ ಕಲ್ಪನೆ ಮೂಡಿಸಲು ಸಹಕಾರಿ ಎಂದು ಹೇಳಿದರು.

ಪ್ರಾಚಾರ್ಯ ಡಾ.ಎಚ್.ಎಸ್.ನಾಗಭೂಷಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿಗಳಾದ ಡಾ.ಬಾಲಕೃಷ್ಣ ಹೆಗಡೆ, ಶ್ರೀಮತಿ ದೀಪಿಕಾ ವಿ., ಐಕ್ಯೂಎಸಿ ಸಂಯೋಜಕ ಡಾ.ಓಂಕಾರಪ್ಪ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಆರ್.ಚೈತನ್ಯ ಸ್ವಾಗತಿಸಿದರು. ಪದ್ಮಾವತಿ ವಂದಿಸಿದರು. ಕು.ಗಾನವಿ ಎಚ್.ಸಿ. ಕಾರ್ಯಕ್ರಮ ನಿರ್ವಹಿಸಿದರು.
ಸಪ್ತಾಹದಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ, ಪ್ರಮಾಣಪತ್ರ ನೀಡಲಾಯಿತು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















