ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈತರ ಹಾಗೂ ಗ್ರಾಹಕರ ವಿರೋಧಿಯಾಗಿರುವ ವಿದ್ಯುತ್ ತಿದ್ದುಪಡಿ ಮಸೂದೆ ಜಾರಿಗೆ ತರಬಾರದು ಎಂದು ಆಗ್ರಹಿಸಿ ರಾಜ್ಯದ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸೆ. 12 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್ ಖಾಸಗೀಕರಣವನ್ನು ರೈತ ಸಂಘ ವಿರೋಧಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್ ಖಾಸಗೀಕರಣ ಕಾಯ್ದೆ ಜಾರಿಗೆ ತರುವುದಿಲ್ಲ ಎಂದು ಆಶ್ವಾಸನೆ ಕೊಟ್ಟಿದ್ದರೂ ಈಗ ಮತ್ತೆ ಜಾರಿಗೆ ತರಲು ಹೊರಟಿವೆ ಎಂದು ಆರೋಪಿಸಿದರು.

ಗ್ರಾಹಕರು ಮೊದಲು ವಿದ್ಯುತ್ ಶುಲ್ಕ ಪಾವತಿಸಿ ಬಳಿಕ ಸರ್ಕಾರದ ಸಬ್ಸಿಡಿ ಪಡೆಯಬೇಕಾಗುತ್ತದೆ. ಈ ಹಿಂದೆ ಇದೇ ರೀತಿ ಅಡುಗೆ ಅನಿಲಕ್ಕೆ ಸಬ್ಸಿಡಿ ನೀಡಿ ಅದನ್ನು ವಾಪಸ್ ಪಡೆದುಕೊಳ್ಳಲಾಗಿತ್ತು. ಹಾಗೆಯೇ ಇದು ಕೂಡ ಆಗಲಿದೆ. ರೈತರು ಕೂಡ ತಮ್ಮ ಪಂಪ್ಸೆಟ್ ಗಳಿಗೆ ಪ್ರೀಪೇಯ್ಡ್ ಶುಲ್ಕ ಪಾವತಿಸಿ ವಿದ್ಯುತ್ ಪಡೆಯಬೇಕಾಗುತ್ತದೆ ಎಂದು ದೂರಿದರು.

ರಾಜ್ಯದಲ್ಲಿ ಭೀಕರ ಮಳೆಯಾಗಿದ್ದು, 3 ಸಾವಿರ ಕೋಟಿ ರೂ.ಗೂ ಹೆಚ್ಚು ರೈತರ ಬೆಳೆ ನಷ್ಟವಾಗಿದೆ. 9 ಲಕ್ಷ ಹೆಕ್ಟೇರ್ ನಷ್ಟು ಬೆಳೆ ನಾಶವಾಗಿದ್ದರೂ ಸರ್ಕಾರ ಇದುವರೆಗೂ ಒಂದು ರೂಪಾಯಿ ಪರಿಹಾರ ಕೂಡ ನೀಡಿಲ್ಲ. ಕೇಂದ್ರ ಸರ್ಕಾರದ ಹಣ ಕಾಯದೇ ಕೂಡಲೇ ಸರ್ಕಾರ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಪ್ರಮುಖರಾದ ಎಸ್. ಶಿವಮೂರ್ತಿ, ಇ.ಬಿ. ಜಗದೀಶ್, ಜ್ಞಾನೇಶ್, ಸಿ. ಚಂದ್ರಪ್ಪ, ಎಂ.ಡಿ. ನಾಗರಾಜ್ ಇದ್ದರು.










Discussion about this post