ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಲೋಕ ಕಲ್ಯಾಣಾರ್ಥವಾಗಿ ರವೀಂದ್ರ ನಗರ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಸಂಕಲ್ಪ ಮಾಡಲಾಗಿದ್ದ ಒಂದು ಕೋಟಿ ಓಂ ನಮಃ ಶಿವಾಯ ಜಪ ಯಜ್ಞದ ಮಂಗಲೋತ್ಸವ ಮಾರ್ಚ್ 21ರಂದು ನಡೆಯಲಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ವೇ.ಬ್ರ. ಅ.ಪ. ರಾಮಭಟ್ಟರು ಹೇಳಿದರು.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಲೋಕ ಕಲ್ಯಾಣಾರ್ಥವಾಗಿ ಭಜನಾ ಪರಿಷತ್, ಅರ್ಚಕರ ವೃಂದ, ರವೀಂದ್ರ ನಗರದ ಪ್ರಸನ್ನ ಗಣಪತಿ(ಬಲಮುರಿ) ದೇವಾಲಯ ಹಾಗೂ ಸಂಸ್ಕಾರ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಜಪಯಜ್ಞ ಸಂಕಲ್ಪ ಮಾಡಲಾಗಿತ್ತು. ಇದರಂತೆ ನಡೆದ ಜಪದ ಮಂಗಲೋತ್ಸವ ಹಾಗೂ ಈ ಪ್ರಯುಕ್ತ ಶ್ರೀ ರುದ್ರ ಹೋಮವನ್ನು ಆಯೋಜನೆ ಮಾಡಲಾಗಿದೆ ಎಂದರು.
ನಾವು ಒಂದು ಕೋಟಿ ಜಪ ಯಜ್ಞಕ್ಕೆ ಸಂಕಲ್ಪ ಮಾಡಿದ್ದೆವು. ಆದರೆ, ಭಕ್ತರ ಅತ್ಯುತ್ತಮ ಪ್ರತಿಕ್ರಿಯೆಯಿಂದ 11 ಕೋಟಿ 50 ಲಕ್ಷದ 75 ಸಾವಿರ 900 ಶಿವ ಜಪ ನಡೆದಿರುವುದು ಸಂತಸ ತಂದಿದೆ ಎಂದರು.
ಮಂಗಲೋತ್ಸವ ಮಾರ್ಚ್ 21ರಂದು ದೇವಾಲಯದಲ್ಲಿ ನಡೆಯಲಿದ್ದು, ಅಂದು ಬೆಳಗ್ಗೆ 10.30ಕ್ಕೆ ರುದ್ರಹೋಮ ನಡೆಯಲಿದೆ. ಹರಿಹರ ಕ್ಷೇತ್ರದ ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಅನುಗ್ರಹ ಸಂದೇಶ ನೀಡಲಿದ್ದಾರೆ ಎಂದರು.
ಪ್ರಮುಖರಾದ ಶಬರೀಶ್ ಕಣ್ಣನ್, ಶಂ. ಸಂದೇಶ್ ಉಪಾಧ್ಯ, ಶ್ರೀಧರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post