ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸಂಯೋಜಿತ ಬೋಧನೆ ಎಂದಾಗ ವಿದ್ಯಾರ್ಥಿ ಕೇಂದ್ರಿತ ಕಲಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು ಈ ಮೂಲಕ ವಿದ್ಯಾರ್ಥಿಗಳಿಗೆ ಯಾವುದೇ ಸಮಯ ಸಂದರ್ಭದಲ್ಲಿಯೂ ಕಲಿಕೆಗೆ ಅವಕಾಶ ನೀಡಲು ಆನ್ಲೈನ್ ಪೂರಕ ವೇದಿಕೆಯಾಗಿ ನಿಲ್ಲಲಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಅಭಿಪ್ರಾಯಪಟ್ಟರು.
ಇಂದು ಜೆ.ಎನ್.ಎನ್.ಸಿ ಇಂಜಿನಿಯರಿಂಗ್ ಕಾಲೇಜಿನ ಎಂ.ಬಿ.ಎ ವಿಭಾಗದ ವತಿಯಿಂದ ಉಪನ್ಯಾಸಕರಿಗಾಗಿ ಏರ್ಪಡಿಸಿದ್ದ ‘ಸಂಯೋಜಿತ ಬೋಧನೆ ಮತ್ತು ಕಲಿಕೆ ವಿಧಾನಗಳ’ ಕುರಿತ ವಿಚಾರ ಸಂಕಿರಣ ಉದ್ದೇಶಿಸಿ ಅವರು ಮಾತನಾಡಿದರು.
ಡಿಜಿಟಲ್ ವೇದಿಕೆಗಳ ಅನುಷ್ಟಾನಗೊಳಿಸುವುದರ ಮೂಲಕ ಬೋಧನೆಯ ಗುಣಮಟ್ಟ ಹೆಚ್ಚಿಸಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ಸಮಯದ ನಿರ್ಭಂದಗಳಿಲ್ಲದೆ ಯಾವುದೇ ವಿಷಯಗಳ ಅಧ್ಯಯನ ನಡೆಸಲು ಮತ್ತು ತಮ್ಮ ಉಪನ್ಯಾಸಕರೊಂದಿಗೆ ಮುಕ್ತವಾಗಿ ಚರ್ಚಿಸಬಹುದಾಗಿದೆ. ಅದರೇ ಡಿಜಿಟಲ್ ವೇದಿಕೆಗಳ ಅನುಷ್ಟಾನ ದೊಡ್ಡ ಸವಾಲಾಗಿದೆ. ಇಂದಿಗೂ ಹಲವು ಪ್ರದೇಶಗಳು ನೆಟ್‌ವರ್ಕ್‌ಗಳ ಸಮಸ್ಯೆಯಿಂದ ಬಳಲುತ್ತಿದೆ. ಈ ಸವಾಲುಗಳ ನಡುವೆ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕಲಿಕೆಯ ಅವಶ್ಯಕತೆ, ಉಚಿತವಾಗಿ ಲಭ್ಯವಿರುವ ಹಲವು ಅಧ್ಯಯನ ಸಾಮಾಗ್ರಿಗಳು ಹಾಗೂ ಅವುಗಳ ಲಾಭದ ಕುರಿತು ಪ್ರೇರಣೆ ನೀಡಬೇಕಾಗಿದೆ ಎಂದು ಹೇಳಿದರು.
ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ನಿವೃತ್ತ ಮುಖ್ಯಸ್ಥರಾದ ಡಾ. ಎಸ್.ಎನ್.ಜಗದೀಶ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಆನ್ಲೈನ್‌ಗಳ ಬಳಕೆ ಹೆಚ್ಚಾಗಿದೆ. ಈ ಮೂಲಕ ಸಾಕಷ್ಟು ಹೊಸ ಅನುಭವಗಳನ್ನು ಪಡೆದಿದ್ದೇವೆ. ಭಾರತ ಸರ್ಕಾರ ಅನುಷ್ಟಾನಗೊಳಿಸುತ್ತಿರುವ ನೂತನ ಐ.ಟಿ ಕಾಯ್ದೆಯ ಆಧಾರದಲ್ಲಿ ನೂತನ ಶಿಕ್ಷಣ ನೀತಿಯ ವ್ಯಾಪ್ತಿಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗವು ಸಂಯೋಜಿತ ಬೋಧನೆ ಮತ್ತು ಕಲಿಕೆಗಳ ವಿಧಾನಗಳನ್ನು ಅನುಷ್ಟಾನಗೊಳಿಸಲು ತಯಾರಿ ನಡೆಸಿದೆ. ಉನ್ನತ ಮಟ್ಟದ ಶಿಕ್ಷಣದಲ್ಲಿ ಶೇ.40ರಷ್ಟು ಪಠ್ಯಕ್ರಮ ಆನ್ಲೈನ್ ಮೂಲಕವು ಹಾಗೂ ಶೇ.60ರಷ್ಟು ಪಠ್ಯಕ್ರಮ ದೈನಂದಿನ ಬೋಧನಾ ಕ್ರಮದಲ್ಲಿ ನಡೆಸಲು ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಆಯೋಗವು ಸಲಹೆಗಳನ್ನು ಆಹ್ವಾನಿಸಿ ಸಾರ್ವಜನಿಕ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಆಯೋಗ ಅನುಷ್ಟಾನಗೊಳಿಸಲು ಹೊರಟಿರುವ ಸಂಯೋಜಿತ ಭೋಧನ ಕಲಿಕೆ ವಿಧಾನಗಳು ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಯ ಜೊತೆಗೆ ಅವರು ಇಚ್ಚಿಸುವ ಹಲವು ಇತರೇ ವಿಷಯಗಳ ಕುರಿತ ಅಧ್ಯಯನ ನಡೆಸಲು ಅವಕಾಶ ನೀಡಲಿದೆ ಎಂದರು.
ಶೈಕ್ಷಣಿಕ ಪರಿವರ್ತನೆಯ ಮೂಲಕ ವಿದ್ಯಾರ್ಥಿಗಳ ತಾವು ಇಚ್ಚಿಸುವ ವಿಷಯ, ಬೋಧನಾ ಕ್ರಮ, ಬೋಧಕ ವರ್ಗ, ಬೋಧನಾ ಸಮಯ, ಬೋಧನಾ ಭಾಷೆಗಳ ಕುರಿತಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆನ್ಲೈನ್ ಮೂಲಕ ತಾವು ಇರುವ ಸ್ಥಳದಿಂದಲೇ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಲು ಮತ್ತು ಅಲ್ಲಿನ ವಿಷಯಗಳ ಕುರಿತು ಅರಿವು ಪಡೆಯಲು ಸಾಧ್ಯವಾಗಲಿದೆ. ಕಲೆ, ಸಾಹಿತ್ಯ, ವಿಜ್ಞಾನ, ವಾಣಿಜ್ಯ ವಿಚಾರಗಳ ಕುರಿತು ಮುಕ್ತವಾಗಿ ಕಲಿಕೆ ತೊಡಗಿಸಿಕೊಳ್ಳಲು ಸರ್ಕಾರದ ಎನ್.ಪಿ.ಟಿ.ಎಲ್, ಸ್ವಯಂ ಆಪ್‌ಗಳ ಮೂಲಕ ಅವಕಾಶ ಮಾಡಿಕೊಡಲಾಗಿದೆ. ಈ ಎಲ್ಲಾ ಕಾರ್ಯ ಯೋಜನೆ ಅನುಷ್ಟಾನಗಳಿಸಲು ಆಯೋಗ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಡುತ್ತಿದ್ದು, ಆನ್ಯೈನ್ ಆಫ್ಲೈನ್‌ನಂತಹ ಶೇಕಡವಾರು ಬೋಧನೆಯ ವಿಗಂಡನೆ ಮತ್ತು ಬೋಧನಾ ವರ್ಗ, ಕ್ರಮ, ಸಮಯ ಆಯ್ಕೆಯ ಸೌಲಭ್ಯ ನೀಡುವ ಕುರಿತು ಹೆಚ್ಚು ಚರ್ಚೆಗಳ ಅವಶ್ಯಕತೆಯಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕುಲಸಚಿವರಾದ ಪ್ರೊ. ಟಿ.ಎಸ್. ಹೂವಯ್ಯ ಗೌಡ ಅಧ್ಯಕ್ಷತೆ ವಹಿಸಿದ್ದರು. ಜೆ.ಎನ್.ಎನ್.ಸಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ. ಪಿ, ಇನ್ಫ್ರಾಸ್ಟ್ರಕ್ಚರ್ ಡೀನ್ ಡಾ. ಎಂ.ಎಂ. ರಜತ್ ಹೆಗಡೆ, ನಿವೃತ್ತ ಸಹ ಪ್ರಾದ್ಯಾಪಕರಾದ ಪ್ರೊ. ಆರ್.ಕೆ.ಬಾಳಿಗ, ಎಂ.ಬಿ.ಎ ವಿಭಾಗದ ನಿರ್ದೇಶಕರಾದ ಡಾ.ಸಿ.ಶ್ರೀಕಾಂತ್, ಸಹ ಪ್ರಾದ್ಯಪಕಾರಾದ ಅನುರಾಧ.ಸಿ.ಕೆ, ಡಾ. ಸಂತೋಷ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿ ವ್ಯಾಪ್ತಿಯ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post