ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ ಬಂದಾಗಿನಿಂದಲೂ ನೂತನ ಕಾರ್ಯಕ್ರಮಗಳಿಗೆ ನಾಂದಿ ಹಾಡಿದ್ದು, ಇದರ ಮುಂದುವರಿದ ಭಾಗವಾಗಿ ಜಿಲ್ಲೆಯಲ್ಲಿರುವ ಕುಗ್ರಾಮಗಳನ್ನು ಗುರುತಿಸಿ ಅಲ್ಲಿ ಪತ್ರಕರ್ತರು ಗ್ರಾಮ ವಾಸ್ತವ್ಯವನ್ನು ಮಾಡುವ ಮೂಲಕ ಅಲ್ಲಿಯ ಜ್ವಲಂತ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸುವ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ‘ನಮ್ಮ ನಡೆ ಸಮಾಜ ಕಡೆ’ ಘೋಷಣೆಯಡಿ ಸಂಘವು ಈ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಜಿಲ್ಲೆಯ ಅತ್ಯಂತ ಹಿಂದುಳಿದ ಗ್ರಾಮಗಳನ್ನು ಸಾರ್ವಜನಿಕರು, ವಿವಿಧ ಸಂಘಟನೆಗಳು, ಸಂಘ-ಸಂಸ್ಥೆಗಳು ಗುರುತಿಸಿ ಸಾಥ್ ನೀಡುವ ಮೂಲಕ ಶಿವಮೊಗ್ಗ ಜಿಲ್ಲಾಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ತಿಳಿಸಬೇಕು ಎಂದು ಮನವಿ ಮಾಡಿದರು.ಈ ಗ್ರಾಮಗಳಿಗೆ ಪತ್ರಕರ್ತರ ತಂಡ ಭೇಟಿ ನೀಡಿ ಅಧ್ಯಯನ ನಡೆಸಲಿದೆ. ಬಳಿಕ ಅವುಗಳಲ್ಲಿ ಮೂರು ಗ್ರಾಮಗಳನ್ನು ಅಂತಿಮಗೊಳಿಸಲಾಗುವುದು ಎಂದು ವಿವರಿಸಿದರು.
ಆ ಮೂರು ಕುಗ್ರಾಮಗಳಲ್ಲಿ ಪತ್ರಕರ್ತರು ಒಂದು ದಿನ ವಾಸ್ತವ್ಯ ಅಂದರೆ ಇಡೀ ದಿನ ಹಗಲಿನ ಹೊತ್ತು ಅಲ್ಲಿಯೇ ಇದ್ದು ಆ ಗ್ರಾಮದ ಸಮಸ್ಯೆಗಳನ್ನು ಅಧ್ಯಯನ ನಡೆಸಲಿದೆ. ಎಲ್ಲ ಪತ್ರಕರ್ತರು ಈ ಅಧ್ಯಯನವನ್ನು ಸುದ್ದಿರೂಪದಲ್ಲಿ ಪ್ರಕಟಿಸಲಿದ್ದಾರೆ. ಪ್ರಕಟಗೊಂಡ ಎಲ್ಲ ವರದಿಗಳನ್ನು ಕ್ರೋಢಿಕರಿಸಿ ಪತ್ರಕರ್ತರ ಸಂಘವು ಆಯಾ ಗ್ರಾಮದ ವ್ಯಾಪ್ತಿಯ ಶಾಸಕರು, ಜಿಲ್ಲಾಡಳಿತ, ಉಸ್ತುವಾರಿ ಸಚಿವರು ಹಾಗೂ ಸರ್ಕಾರಕ್ಕೆ ಗ್ರಾಮದ ಅಭಿವೃದ್ಧಿ ಕುರಿತು ಸಮಗ್ರ ವರದಿ ನೀಡಲಾಗುತ್ತದೆ. ಅಷ್ಟೇ ಅಲ್ಲದೆ, ಸರ್ಕಾರಕ್ಕೆ ವರದಿ ನೀಡಿದ ಬಳಿಕ ಅದರ ಪ್ರಗತಿ ಕುರಿತು ಸಂಘ ನಿರಂತವಾಗಿ ಪ್ರಯತ್ನಿಿಸಲಿದೆ ಎಂದು ಮಾಹಿತಿ ನೀಡಿದರು.
ಪತ್ರಕರ್ತರ ಸಂಘಟನೆ ಇತಿಹಾಸದಲ್ಲಿ ಮೊದಲ ಬಾರಿ ಈ ರೀತಿಯ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದರ ಜೊತೆ ಜಿಲ್ಲೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣ ಉದ್ದೇಶದಿಂದ ವರ್ಷ ಪೂರ್ತಿ ಮಾದಕ ವಸ್ತು ವಿರೋಧಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಹಲವಾರು ಜನ ಜಾಗೃತಿ ಕಾರ್ಯಕ್ರಮ ರೂಪಿಸಲಾಗಿದೆ. ಇದರ ಜೊತೆಗೆ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳನ್ನು ಕೂಡ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
Also read: ವಿಕಲಚೇತನರ ಪ್ರಯಾಣವನ್ನು ಇನ್ನಷ್ಟು ಸುಲಲಿತಗೊಳಿದ ಬೆಂಗಳೂರು ವಿಮಾನ ನಿಲ್ದಾಣ
ಕುಗ್ರಾಮಗಳ ಕುರಿತಾದ ಮಾಹಿತಿಯನ್ನು ತಿಳಿಸಲು ಸಾವರ್ಜನಿಕರು ಸಂಘದ ಅಧ್ಯಕ್ಷ ಗೋಪಾಲ್ ಎಸ್.ಯಡಗೆರೆ (9108825454), ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ (9341126340) ಅವರನ್ನು ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ. ತಿಮ್ಮಪ್ಪ , ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಖಜಾಂಚಿ ಶಿವಮೊಗ್ಗ ನಂದನ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post