ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಂಗ್ರೆಸ್ ಪಕ್ಷದಲ್ಲಿ ಪೇಜ್ ಪ್ರಮುಖರಿರಲಿ ರಾಜ್ಯಮಟ್ಟದ ಕಾರ್ಯಕಾರಿಣಿಯೇ ಇಲ್ಲ. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರ ರಾಜ್ಯದಲ್ಲಿ ಕಾರ್ಯಕಾರಿಣಿಯೇ ನಡೆದಿಲ್ಲ. ಅದನ್ನು ಮಾಡಲು ಹೋದರೆ ರಾಜ್ಯ ಮಟ್ಟದಲ್ಲಿರಲಿ, ಜಿಲ್ಲಾಮಟ್ಟದಲ್ಲೇ ಪಕ್ಷದಲ್ಲಿ ಒಡಕು ಮೂಡಲಿದೆ ಎಂದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್ ವ್ಯಂಗ್ಯವಾಡಿದರು.
ಇಲ್ಲಿನ ಎನ್‌ಇಎಸ್ ಮೈದಾನದಲ್ಲಿ ಭಾನುವಾರ ಜಿಲ್ಲಾ ಬಿಜೆಪಿಯಿಂದ ಆಯೋಜಿಸಿದ್ದ ನಗರಮಟ್ಟದ ಪೇಜ್ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ನಾಯಕರಂತೆ ಕಾಂಗ್ರೆಸ್ ನಾಯಕರು ಯಾವುದೇ ಕಾಂಗ್ರೆಸ್ ಕಾರ್ಯಕರ್ತನ ಮನೆಗೆ ಹೋಗಿ ಅವರೊಂದಿಗೆ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದ ಅವರು, ಬಿಸಿಲ ತಾಪಕ್ಕೆ ಪಂಚರತ್ನ ಯಾತ್ರೆ ಪಂಚರ್ ಆಗಿದೆ, ಪ್ರಜಾಧ್ವನಿ ಯಾತ್ರೆಗೆ ಬ್ರೇಕ್ ಫೇಲ್ಯೂರ್ ಆಗಿದೆ ಎಂದು ಛೇಡಿಸಿದರು.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಅಭ್ಯರ್ಥಿಗಳ ಗೆಲುವಿನಲ್ಲಿ ಪೇಜ್ ಪ್ರಮುಖರ ಪಾತ್ರ ಮುಖ್ಯವಾಗಿದ್ದು ಎಲ್ಲರೂ ಶ್ರಮ ವಹಿಸಿ ಕೆಲಸ ಮಾಡಬೇಕಿದೆ. ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ 50 ಸಾವಿರ ಮತಗಳಿಗಿಂತ ಅಧಿಕ ಅಂತರದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಬೇಕು. ಆ ನಿಟ್ಟಿನಲ್ಲಿ ಪಕ್ಷವನ್ನು ಸಂಘಟಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಂದಲ್ಲ ಒಂದು ಯೋಜನೆಗಳ ಪ್ರಯೋಜನ ಪಡೆದವರಿದ್ದಾರೆ. ಅಭಿವೃದ್ಧಿ ಕೆಲಸಗಳು ಆಗಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉತ್ತಮ ನಾಯಕತ್ವ ಇದೆ. ರಾಜ್ಯಾಧ್ಯಕ್ಷರು ಪ್ರವಾಸ ಮಾಡುತ್ತಿದ್ದಾರೆ. ಇವೆಲ್ಲವೂ ಕೂಡ ಗೆಲವಿಗೆ ಶಕ್ತಿ ತುಂಬಿದೆ ಎಂದು ಹೇಳಿದರು.
Also read: ಭವಾನಿ ರೇವಣ್ಣ ಸ್ಪರ್ಧೆ ಪಕ್ಷದ ವರಿಷ್ಠರಿಂದ ತೀರ್ಮಾನ: ನಿಖಿಲ್ ಕುಮಾರಸ್ವಾಮಿ
ರಾಜ್ಯದ 224 ಕ್ಷೇತ್ರಗಳಲ್ಲಿಯೂ ಪೇಜ್ ಪ್ರಮುಖರು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ನಿರಾಯಾಸವಾಗಿ ತಲುಪಬಹುದು. ಇದುವರೆಗೂ ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿರಲಿಲ್ಲ. ಈ ಬಾರಿ ಅದು ಸಾಕಾರಗೊಳ್ಳಲಿದೆ ಎಂದು ಹೇಳಿದರು.
ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಇದುವರೆಗೂ ಭೂಮಿ ನೀಡಿಕೆ ಸಾಧ್ಯವಾಗಿರಲಿಲ್ಲ. ಇದಕ್ಕೆ ತಾರ್ಕಿಕ ಅಂತ್ಯ ಹಾಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಒಂದು ತಿಂಗಳಲ್ಲಿ ಹಕ್ಕುಪತ್ರ ನೀಡಲಾಗುತ್ತದೆ. ಜನರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವಂತೆ ಹೇಳಿದರು.
ಜಿಲ್ಲೆಯನ್ನು ಎಜುಕೇಷನ್ ಹಬ್ ಆಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗಿದೆ. ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಆಯುರ್ವೇದ ವಿಶ್ವವಿದ್ಯಾಲಯ ಸೇರಿದಂತೆ ಜಾರಿಗೊಳಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಗರ ಘಟಕದ ಅಧ್ಯಕ್ಷ ಎನ್.ಕೆ. ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಬಿಜೆಪಿ ನೀಡಿದ ಎಲ್ಲ ಚಟುವಟಿಕೆಗಳನ್ನು ಯಶಸ್ವಿಗೊಳಿಸಲಾಗಿದೆ. ಬೂತ್ ಅಭಿಯಾನ, ವಿಜಯ ಸಂಕಲ್ಪ ಅಭಿಯಾನ, ಗೋಡೆ ಬರಹ ಯಶಸ್ವಿಯಾಗಿವೆ. ಮೊದಲ ಬಾರಿಗೆ ಪೇಜ್ ಪ್ರಮುಖರ ಸಮಾವೇಶ ಶಿವಮೊಗ್ಗದಲ್ಲಿ ನಡೆಯಿತು ಎಂಬುದು ಹೆಮ್ಮೆಯ ವಿಚಾರ ಎಂದರು.
ಶಾಸಕ ಕೆ.ಬಿ. ಅಶೋಕ್ ನಾಯ್ಕ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ, ಎಸ್.ರುದ್ರೇಗೌಡ, ಡಿ.ಎಸ್. ಅರುಣ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ರಾಜ್ಯ ಪ್ರಕೋಷ್ಟಗಳ ಎಂ.ಬಿ. ಭಾನುಪ್ರಕಾಶ್, ಮಾಜಿ ಸಂಚಾಲಕ ಆರ್. ಕೆ. ಸಿದ್ದರಾಮಣ್ಣ, ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮೇಯ ಎಸ್.ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ ಶಂಕರನಾಯ್ಕ, ಪ್ರಮುಖರಾದ ಎ.ಎನ್.ನಟರಾಜ್, ಎಸ್.ಎಸ್. ಜ್ಯೋತಿಪ್ರಕಾಶ್, ಎಸ್. ದತ್ತಾತ್ರಿ, ಎಸ್.ಎನ್. ಚನ್ನಬಸಪ್ಪ, ಕೆ.ಇ. ಕಾಂತೇಶ್, ಎಸ್. ಜ್ಞಾನೇಶ್ವರ್ ಇತರರಿದ್ದರು.









Discussion about this post