ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತ ಸರ್ಕಾರದ ಪರಮ್ ಉತ್ಕರ್ಷ್ ಉನ್ನತ ಕ್ಷಮತೆಯ ಕಂಪ್ಯೂಟಿಂಗ್ ಯಂತ್ರವಾಗಿದ್ದು ಶೈಕ್ಷಣಿಕವಾಗಿ ಹೊರಹೊಮ್ಮುವ ನಾವೀನ್ಯ ಚಿಂತನೆಗಳಿಗೆ ಪೂರಕ ಶಕ್ತಿಯಾಗಿದೆ ಎಂದು ಭಾರತ ಸರ್ಕಾರದ ಸಿಡಾಕ್ ಸಂಸ್ಥೆಯ ನಿರ್ದೇಶಕರಾದ ಡಾ.ಎಸ್.ಡಿ ಸುದರ್ಶನ್ ತಿಳಿಸಿದರು.
ಶುಕ್ರವಾರ ನಗರದ ಜೆ.ಎನ್.ಎನ್.ಎನ್ ಎಂಜಿನಿಯರಿಂಗ್ ಕಾಲೇಜು ಹಾಗೂ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ ಮಂಗಳೂರಿನ ಉಪವಿಭಾಗದ ವತಿಯಿಂದ ಎರಡು ದಿನಗಳ ಕಾಲ ಏರ್ಪಡಿಸಿರುವ ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ನಾವೀನ್ಯತೆ ಮತ್ತು ಉದ್ಯಮಶೀಲ ಚಿಂತನೆಗಳು ಶೈಕ್ಷಣಿಕವಾಗಿ ಪ್ರಮುಖ ಪಾತ್ರ ವಹಿಸುತ್ತಿದೆ. ಇಂತಹ ಸಂದರ್ಭದಲ್ಲಿ ಶ್ರೇಣಿ ಎರಡು ಮತ್ತು ಮೂರು ನಗರಗಳ ಶೈಕ್ಷಣಿಕ ವ್ಯವಸ್ಥೆಗೆ ಪೂರಕವಾಗಿ ಭಾರತ ಸರ್ಕಾರದ ಸಿಡಾಕ್ ಮೂಲಕ ರೂಪಿಸಿರುವ ಪರಮ್ ಉತ್ಕರ್ಷ್ ಕಂಪ್ಯೂಟಿಂಗ್ ಯಂತ್ರ, ಕೃತಕ ಬುದ್ಧಿಮತ್ತೆಯ ಮೂಲಕ ಆವಿಷ್ಕಾರಿ ಸೌಲಭ್ಯಗಳನ್ನು ನೀಡಲಿದೆ. ಶಿವಮೊಗ್ಗದ ವಿದ್ಯಾರ್ಥಿಗಳು ಇಂತಹ ಅಭೂತಪೂರ್ವ ತಂತ್ರಜ್ಞಾನ ಸದ್ಭಳಕೆ ಮಾಡಿಕೊಳ್ಳಿ.
ಅನ್ವೇಷಣಾತ್ಮಕ ಗುಣಬೆಳೆಸಿಕೊಳ್ಳಲು ಸಹಭಾಗಿತ್ವದ ಅವಶ್ಯಕತೆಯಿದೆ. ಬದುಕಿನಲ್ಲಿ ಶಿಕ್ಷಣದ ಕಲಿಕೆಗಿಂತ ಬುದ್ದಿಶಕ್ತಿ ಅನುಭವಾಧಾರಿತವಾಗಿ ಕಲಿಯುವುದೇ ಹೆಚ್ಚು. ಅಂತಹ ಕಲಿಕೆಗೆ ನಮ್ಮ ನಡುವಿನ ಸ್ನೇಹಿತರ, ಬಂಧುಗಳ, ಸಹೋದ್ಯೋಗಿಗಳ ಸಹಭಾಗಿತ್ವ ಅತ್ಯವಶ್ಯಕ. ಆಗ ಮಾತ್ರ ವಾಸ್ತವತೆಯ ಅರಿವು ಪಡೆಯಲು ಸಾಧ್ಯ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಮಾತನಾಡಿ ಆಧುನಿಕತೆಯ ಒಲವಿನ ಹಿಂದೆ ಉಂಟಾಗುತ್ತಿರುವ ತ್ಯಾಜ್ಯಗಳ ಬಗ್ಗೆ ನಾವು ಯೋಚಿಸಬೇಕಿದೆ. ಇತಿಹಾಸದ ಪುಟಗಳನ್ನು ಮೆಲುಕು ಹಾಕಿದಾಗ ಜ್ಞಾನದ ವಿನಿಮಯ ಎಂಬುದು ನಮ್ಮ ರಾಜ ಮಹಾರಾಜರ ಕಾಲದಲ್ಲಿಂದಲೂ ಉನ್ನತವಾಗಿತ್ತು. ಅಂತಹ ಪರಂಪರೆ ಇಲ್ಲಿಯವರೆಗೂ ಮುಂದುವರಿಸಿಕೊಂಡು ಬಂದಿದೆ. ಮನುಷ್ಯನಲ್ಲಿ ಜ್ಞಾನ ಹೆಚ್ಚಾದಂತೆ ಸೌಜನ್ಯತೆಯು ಹೆಚ್ಚಾಗಬೇಕಾಗಿದ್ದು ಆಗ ಮಾತ್ರ ಶಿಕ್ಷಣದ ಪರಿಪೂರ್ಣತೆ ಸಾಧ್ಯ ಎಂದು ಹೇಳಿದರು.
Also read: ಜ್ಞಾನವಾಪಿ ಮಸೀದಿ ಶಿವಲಿಂಗ ವಿವಾದ ಕಾರ್ಬನ್‌ಡೇಟಿಂಗ್ ಪರೀಕ್ಷೆಗೆ ಕೋರ್ಟ್ ನಕಾರ
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಹೆಚ್.ಸಿ.ಶಿವಕುಮಾರ್, ಕಾರ್ಯಕ್ರಮ ಸಂಘಟನಾ ಮುಖ್ಯಸ್ಥರಾದ ಡಾ.ಪಿ.ಮಂಜುನಾಥ, ಡಾ.ಎಸ್.ವಿ ಸತ್ಯನಾರಾಯಣ, ಡಾ.ಪೂರ್ಣಲತಾ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post