ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಂದೆ ತಾಯಿಗಳು ಮಕ್ಕಳು ತೃತೀಯ ಲಿಂಗಿಗಳು ಎಂದು ಗೊತ್ತಾದ ತಕ್ಷಣ ಅವರಿಗಾಗಿ ಆಸ್ತಿ, ಮನೆ, ಅಂತಸ್ತು ಮಾಡುವ ಬದಲಾಗಿ ಆ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಿ ಎಂದು ಪದ್ಮಶ್ರೀ #PadmaSri ಪುರಸ್ಕೃತ ಮಂಜಮ್ಮ ಜೋಗತಿ #ManjappaJogati ಅವರು ತಿಳಿಸಿದರು.
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ 6ನೇ #KateelAshokPaiCollege ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ನಮ್ಮ ಹಳ್ಳಿ ಥಿಯೇಟರ್ ಸಹಯೋಗದಲ್ಲಿ ಪದ್ಮಶ್ರೀ ಪುರಸ್ಕೃತ ಡಾ.ಮಾತಾ ಬಿ.ಮಂಜಮ್ಮ ಜೋಗತಿ ಅವರ ಜೀವನಾಧಾರಿತ ಏಕವ್ಯಕ್ತಿ ನಾಟಕ ಪ್ರದರ್ಶನ ಮತ್ತು ಮಂಜಮ್ಮ ಜೋಗತಿ ಅವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ತೃತೀಯ ಲಿಂಗಿಗಳು ಹೆಣ್ಣಿನ ಮನಸ್ಸು, ಗಂಡಿನ ದೇಹವುಳ್ಳವರು. ಕುಟುಂಬದವರು ಮೊದಲು ತೃತೀಯ ಲಿಂಗಿಗಳನ್ನು #Transgender ಸ್ವೀಕರಿಸಿ. ಆಗ ಸುತ್ತಮುತ್ತಲಿನ ಜನ, ಸಮಾಜ, ಸರ್ಕಾರ ತಾನಾಗಿಯೇ ಅವರನ್ನು ಸ್ವೀಕರಿಸುವರು ಎಂದರು.
ರಂಗಭೂಮಿ ಕಲಾವಿದರಾದ ಡಾ.ಬೇಲೂರು ರಘುನಂದನ್ ಅವರು ಮಾತನಾಡಿ, ನಮ್ಮನ್ನ ನಾವು ಶುದ್ದಿಕರಿಸುವ ಮಾದ್ಯಮ ನಾಟಕ #Drama ಮಾತ್ರ. ಅದ್ಬುತ ಕಲಾವಿದರು ಹುಟ್ಟಿಕೊಳ್ಳುವುದು ನಾಟಕಗಳಿಂದಲೇ ಎಂದು ತಿಳಿಸಿದರು.ಮಂಜಮ್ಮ ಜೋಗತಿಯವರ ಜೀವನಾಧಾರಿತ ನಾಟಕದ ನಿರ್ದೇಶನ ಕೇವಲ ಮನರಂಜನೆಗೆ ಮಾತ್ರವಲ್ಲ. ನಾವೆಲ್ಲ ರಾಜ ಮಹಾರಾಜರ ಕಥೆಗಳನ್ನು ಕೇಳಿರುತ್ತೇವೆ ಅದರಲ್ಲಿ ಶೇ.70ರಷ್ಟು ನಿಜ ಕಥೆಯಿದ್ದರೆ, ಇನ್ನಷ್ಟು ವಿಷಯಗಳು ಕಾಲ್ಪನಿಕವಾಗಿರುತ್ತವೆ. ಆದರೆ ನಮ್ಮ ನಡುವೆ ಇರುವ ಆದರ್ಶ ವ್ಯಕ್ತಿಯ ಜೀವನದ ಮುಖ್ಯಭೂಮಿಕೆಗೆ ತರಲು ಪ್ರಯತ್ನ ಮಾಡಲಾಗಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಮಂಜುನಾಥ ಸ್ವಾಮಿಯವರು, ನಾಟಕಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಟಕಗಳನ್ನು ನೋಡಬೇಕು. ನಾಟಕವನ್ನು ಕಲಿತು ಪ್ರದರ್ಶನ ನೀಡಬೇಕು ಎಂದರು.
ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಡಾ.ರಾಜೇಂದ್ರ ಚೆನ್ನಿ ಅವರು ಮಾತನಾಡಿ, ಲಿಂಗ ತಾರತಮ್ಯದ ಬಗ್ಗೆ ಪುಸ್ತಕಗಳಲ್ಲಿ ವಿದ್ಯಾರ್ಥಿಗಳು ಓದಿರುತ್ತಾರೆ. ಮನಸ್ಸಿಗೆ ನಾಟುವಂತೆ ವಿಷಯವನ್ನು ಪ್ರಸ್ತುತ ಪಡಿಸುವುದು ನಾಟಕಗಳು ಮಾತ್ರ. ಮಂಜಮ್ಮ ಜೋಗತಿಯವರ ಜೀವನಾಧಾರಿತ ನಾಟಕದ ಮೂಲಕ ವಿದ್ಯಾರ್ಥಿಗಳು ಇನ್ನಷ್ಟು ಅರ್ಥಪೂರ್ಣವಾಗಿ ಹಲವಾರು ಸಾಮಾಜಿಕ ವಿಚಾರಗಳು ಅರ್ಥೈಸಿಕೊಳ್ಳಲು ಸಾಧ್ಯ. ಕಲೆಯನ್ನು ಆರಾಧಿಸುವ ಪ್ರತಿಯೊಬ್ಬ ಕಲಾವಿದರೂ ಸಮಾಜದ ಆಸ್ತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ಅವರು ಮಾತನಾಡಿ, ಮಂಜಮ್ಮ ಜೋಗತಿಯವರ ಜೀವನಾಧಾರಿತ ಏಕವ್ಯಕ್ತಿ ನಾಟಕ ಮಾತಾ ನಿಜಕ್ಕೂ ಅತ್ಯದ್ಬುತ ನಾಟಕ. ಭಾವನಾತ್ಮಕ, ಭಾವಪಲ್ಲಟಗಳನ್ನು ಸಮಂಜಸವಾಗಿ ನಟನೆಯ ಮೂಲಕ ತೋರಿಸಿಕೊಡುವ ಕೆಲಸವನ್ನುಕಲಾವಿದರು ಮಾಡಿದ್ದಾರೆ. ನಾಟಕ ನೋಡುವ ಮತ್ತು ನಾಟಕ ಮಾಡುವ ಮೂಲಕ ನಾವು ಬೆಳೆಯಲು ಸಾಧ್ಯ ಎಂದು ತಿಳಿಸಿದರು.ಈ ನಾಟಕವು ಹಲವು ವಿಚಾರಗಳನ್ನು ತಿಳಿದುಕೊಳ್ಳಲು, ಸ್ವವಿಶ್ಲೇಷಣೆ ಮಾಡಲು ಒಂದು ಮಾರ್ಗವಾಗಿದೆ. ಈ ನಾಟಕ ಕೇವಲ ಮನರಂಜನೆಗೆ ಸೀಮಿತವಾಗಿರದೇ, ಸಂಕೀರ್ಣವಾದ ಸಂದೇಶಗಳನ್ನು ಸಾರುವ ಆಗರವಾಗಿದೆ ಎಂದರು.
ನಮ್ಮ ಹಳ್ಳಿ ಥಿಯೇಟರ್ ಅಧ್ಯಕ್ಷರಾದ ಚೇತನ್‌ಕುಮಾರ್ ಸಿ. ರಾಯನಹಳ್ಳಿ, ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post