ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಳೆಯ ವಯಸ್ಸಿನಿಂದಲೇ ಮಕ್ಕಳಿಗೆ ಪೋಷಕರು ಸಂಸ್ಕೃತಿ – ಸಂಸ್ಕಾರವನ್ನು ಪೋಷಕರು ಧಾರೆ ಎರೆಯಬೇಕು ಎಂದು ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಹೇಳಿದರು.
ನಗರದ ಎಸ್. ರಾಮಯ್ಯ ಸರ್ವೋದಯ ಬಾಲಿಕಾ ಪ್ರೌಢ ಶಾಲೆ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಆತ್ಮವಿಶ್ವಾಸದ ಕೊರತೆ ಇರುವುದರಿಂದ ಧನಾತ್ಮಕ ಚಿಂತನೆಗಳನ್ನು ಪೋಷಕರು ತುಂಬಬೇಕು. ಆದರೆ, ತಂದೆ ತಾಯಿಗಳು ಎಷ್ಟೇ ಕಷ್ಟ ಇದ್ದರೂ ಕೇಳಿದ್ದೆವಲ್ಲವನ್ನೂ ನೀಡುತ್ತಾರೆ, ಪ್ರೋತ್ಸಾಹಿಸುತ್ತಾರೆ. ನಿಜಕ್ಕೂ ಇದು ತಪ್ಪು. ಯಾವುದಕ್ಕೆ ಯೆಸ್ ಅನ್ನಬೇಕು, ಯಾವುದಕ್ಕೆ ನೋ ಎನ್ನಬೇಕು ಎಂಬ ಪರಿಜ್ಞಾನವಿರಲಿ.

ನಾವು ಕನ್ನಡಿಗರು, ಆಂಗ್ಲ ಮಾಧ್ಯಮದಿಂದ ಹೊರಗೆ ಬರಬೇಕು. ನಾನು ಕೂಡ ಸರ್ವೋದಯ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿದ್ದೇನೆ. ಈ ಸಂಸ್ಥೆಯ ಬಗ್ಗೆ ನನಗೆ ಹೆಮ್ಮೆ ಇದೆ. ಶಿಕ್ಷಣ ಕ್ಷೇತ್ರಕ್ಕೆ ಶಾಲೆಯ ಕೊಡುಗೆ ಹಿರಿದು. ಓದುವ ಮನ ಮತ್ತು ಛಲ, ಗುರಿ ಇದ್ದರೆ ಸಾಕು, ಸಾಧನೆ ಮಾಡಬಹುದು. ಹಾಗಾಗಿ ಕನ್ನಡದ ಬಗ್ಗೆ ಕೀಳರಿಮೆ ಬೇಡ ಎಂದರು.
ಮೂಲತಃ ತಮಿಳರಾದರೂ ಜಿ.ಪಿ.ರಾಜರತ್ನಂ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಮರಾಠಿಗರಾದ ದ.ರಾ. ಬೇಂದ್ರೆ, ತೆಲುಗಿನವರಾದ ಡಿ.ವಿ.ಗುಂಡಪ್ಪ ಅವರು ಕನ್ನಡಕ್ಕಾಗಿ ನೀಡಿದ ಕೊಡುಗೆ ಬಹಳ ದೊಡ್ಡದು. ವರೆಲ್ಲರೂ ಮೂಲತಃ ಬೇರೆ ಭಾಷೆಯವರಾಗಿದ್ದರೂ ಶ್ರೇಷ್ಠ ಸಾಹಿತ್ಯದ ಮೂಲಕ ಕನ್ನಡ ಶ್ರೀಮಂತಿಕೆಯನ್ನು ಮೇರು ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಕನ್ನಡಕ್ಕೆ ಅತಿ ಹೆಚ್ಚು ಜ್ಞಾನಪೀಠ ಪುರಸ್ಕಾರಗಳನ್ನು ಪಡೆದ ಹೆಗ್ಗಳಿಕೆ ಇದೆ. ಕನ್ನಡ ಸಂಸ್ಕೃತಿ ಮತ್ತು ಸಂಸ್ಕಾರದ ಭಾಷೆಯಾಗಿದೆ. ಹಾಗಾಗಿ ಕನ್ನಡಿಗರಾದ ನಾವು ಕನ್ನಡವನ್ನು ಪೊರೆಯುವ ಕೆಲಸ ಮಾಡಬೇಕಿದೆ ಎಂದರು.

ಕಾರ್ಯದರ್ಶಿ ನಾಗಭೂಷಣ್, ನಿರ್ದೇಶಕ ಹರೀಶ್, ಸರ್ವೋದಯ ವಾಣಿಜ್ಯ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶಶಿಕುಮಾರ್, ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನಳಿನಾ, ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅನಿತಾ ಮತ್ತಿತರರು ಭಾಗವಹಿಸಿದ್ದರು. ಸಂಸ್ಥೆಯ ವತಿಯಿಂದ ಈ ಸಂದರ್ಭ ಡಾ.ಧನಂಜಯ ಸರ್ಜಿ ಅವರನ್ನು ಸನ್ಮಾನಿಸಲಾಯಿತು.











Discussion about this post