ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯಲ್ಲಿ ಪ್ರಸವಪೂರ್ವ ಲಿಂಗಪತ್ತೆ ಮತ್ತು ಭ್ರೂಣಹತ್ಯೆ ಪ್ರಕರಣಗಳು ಗೌಪ್ಯವಾಗಿ ನಿರಂತರವಾಗಿ ನಡೆಯುತ್ತಿವೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕಾಗಿದ್ದ ಸ್ಕ್ಯಾನಿಂಗ್ ಸೆಂಟರ್‍ಗಳು ಸರ್ಕಾರದ ನಿಯಮಗಳನ್ನು ನಿರ್ಲಕ್ಷಿಸಿ ಕಾರ್ಯನಿರ್ವಹಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಸೆಲ್ವಮಣಿ DCSelvamani ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಪ್ರಸವಪೂರ್ವ ಲಿಂಗ ಪತ್ತೆ, ಭ್ರೂಣಹತ್ಯೆ ಮತ್ತು ಸ್ಕ್ಯಾನಿಂಗ್ ಸೆಂಟರ್‍ಗಳ ಕಾರ್ಯವೈಖರಿಗಳ ಕುರಿತು ಏರ್ಪಡಿಸಲಾಗಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಯಾವುದೇ ಅಹಿತಕರ ಘಟನೆಗಳು ತಿಳಿದು ನಂತರ ಅವುಗಳ ಕುರಿತು ಕ್ರಮ ವಹಿಸುವ ಮೊದಲು ಮುನ್ನೆಚ್ಚರಿಕೆ ವಹಿಸುವುದು ಉತ್ತಮ, ಸಂಬಂಧಿತ ಇಲಾಖಾ ಅಧಿಕಾರಿಗಳು ಕೂಡಲೇ ಕ್ರಮವಹಿಸುವಂತೆ ಹಾಗೂ ಕೈಗೊಂಡ ಕ್ರಮದ ಬಗ್ಗೆ ಕೂಡಲೇ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

Also read: ಕೃಷ್ಣ ಜನ್ಮಭೂಮಿ | ಹಿಂದೂಗಳಿಗೆ ಭರ್ಜರಿ ಜಯ | ಶಾಹಿ ಈದ್ಗಾ ಸಮೀಕ್ಷೆಗೆ ಕೋರ್ಟ್ ಅನುಮತಿ
ಸ್ಕ್ಯಾನಿಂಗ್ ನಂತರ ಕೆಲವೇ ದಿನಗಳಲ್ಲಿ ಗರ್ಭಪಾತವಾಗಿರುವ ಪ್ರಕರಣಗಳ ಮೂಲ ಹಾಗೂ ಕಾರಣಗಳನ್ನು ಹುಡುಕಿದಾಗ ವಾಸ್ತವದ ಅರಿವಾಗಲಿದೆ. ಅವರು ನೀಡುವ ಕಾರಣ ವೈಜ್ಞಾನಿಕವಾಗಿದ್ದಲ್ಲಿ ಒಪ್ಪಿಕೊಳ್ಳಬಹುದಾಗಿದೆ. ಅಥವಾ ಅದು ಸಕಾರಣವಲ್ಲ ಎಂದು ತಿಳಿದಾಗ ಅಂತಹ ಗರ್ಭಪಾತಕ್ಕೆ ಸಹಕರಿಸಿದ ವೈದ್ಯರು, ಸ್ಕ್ಯಾನಿಂಗ್ ಸೆಂಟರ್‍ಗಳ ನಿರ್ವಾಹಕರು ಮತ್ತು ಅಂತಹ ಕುಟುಂಬಗಳ ವಿರುದ್ಧ ಕ್ರಮ ಅನಿವಾರ್ಯವಾಗಲಿದೆ ಎಂದರು.

ಸ್ಕ್ಯಾನಿಂಗ್ ಸೆಂಟರ್‍ಗಳ ನಿರ್ವಾಹಕರು ಸಕಾಲದಲ್ಲಿ ತಮ್ಮ ಘಟಕದ ಪರವಾನಗಿ ನವೀಕರಣ ಮತ್ತು ನಿರ್ವಹಿಸಿದ ದಾಖಲೆಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಸಲ್ಲಿಸಬೇಕು. ನಿರ್ಲಕ್ಷ್ಯ ತೋರುವ ಘಟಕಗಳ ಪರವಾನಿಗೆಯನ್ನು ರದ್ದುಗೊಳಿಸುವ ಕಠಿಣ ನಿರ್ಧಾರ ಕೈಗೊಳ್ಳಬೇಕು. ಅಕ್ರಮದಲ್ಲಿ ಭಾಗಿಯಾಗಿರುವ ವೈದ್ಯರು ಹಾಗೂ ಸ್ಕ್ಯಾನಿಂಗ್ ಸೆಂಟರ್‍ಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಅಗತ್ಯವಿದ್ದಲ್ಲಿ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ, ಕುಟುಂಬ ಕಲ್ಯಾಣಾಧಿಕಾರಿ ವೆಂಕಟೇಶ್, ಡಾ. ಮಂಜುನಾಥ ನಾಗಲೀಕರ್ ಸೇರಿದಂತೆ ಎಲ್ಲಾ ತಾಲೂಕುಗಳ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post