ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಏರಿಕೆ ಮಾಡಿದ್ದಕ್ಕಾಗಿ ರಾಜ್ಯ ಬಿಜೆಪಿ ಪ್ರತಿಭಟನೆಗೆ ಇಳಿದಿರುವುದು ಹಾಸ್ಯಾಸ್ಪದವಾಗಿ ಕಾಣುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಎಂ. ರಮೇಶ್ ಶೆಟ್ಟಿ #M Ramesh Shetty ಇವರು ಅಭಿಪ್ರಾಯಪಟ್ಟಿದ್ದಾರೆ.
ಅವರು ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪೆಟ್ರೋಲ್/ಡೀಸೆಲ್ ಬೆಲೆ ಕ್ರಮವಾಗಿ ರೂ. 60 ಮತ್ತು ರೂ. 55 ಇತ್ತು. ಈಗ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಪ್ರತಿ ದಿನ 25-30 ಪೈಸೆಯಂತೆ ಬೆಲೆ ಏರಿಕೆ ಮಾಡುವುದರ ಮೂಲಕ ಜನರ ಕಣ್ಣಿಗೆ ಮಣ್ಣೇರುಚಿ ಅಂತಿಮವಾಗಿ ಪೆಟ್ರೋಲ್ ಗೆ ರೂ.110 ಹಾಗೂ ಡೀಸೆಲ್ ಗೆ ರೂ.98ರವರೆಗೂ ಏರಿಸಿದ್ದ ಸಂದರ್ಭದಲ್ಲಿ ಕಣ್ಣು ಮುಚ್ಚಿ ಕುಳಿತ್ತಿದ್ದ ರಾಜ್ಯ ಬಿಜೆಪಿ ನಾಯಕರುಗಳು ಈಗ ಕೇವಲ ರೂ.3 ಏರಿಸಿದ್ದಕ್ಕೆ ಬೊಬ್ಬೆ ಹಾಕುತ್ತಿದ್ದಾರೆ.
ನಮ್ಮ ದೇಶದಲ್ಲಿ 2014ಕ್ಕಿಂತ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬ್ಯಾರಲ್ ಒಂದಕ್ಕೆ 148 ಡಾಲರ್ ನ ದಾಖಲೆ ಬೆಲೆ ಆಗಿತ್ತು. ಆಗ ಪೆಟ್ರೋಲ್, ಡೀಸೆಲ್ ಬೆಲೆ ಕ್ರಮವಾಗಿ ರೂ.60 ಮತ್ತು ರೂ.55 ಇತ್ತು. ಇಂದು ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲ 65 ಡಾಲರ್ ಕುಸಿದಿದ್ದರೂ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ರೂ.101 ಹಾಗೂ ರೂ.89 ಆಗಿದೆ. 2014ರಲ್ಲಿ ಡೀಸೆಲ್ ಗೆ ಅಡಿಷನಲ್ ಎಕ್ಸೈಸ್ ಡ್ಯೂಟಿ 3.46 ಇತ್ತು. ಈಗ ರೂ.31.84 ಪೈಸೆಗೆ ಏರಿಸಲಾಗಿದೆ ಹಾಗೂ ಡೀಸೆಲ್ ಮೇಲೆ ಎಕ್ಸೈಸ್ ಡ್ಯೂಟಿ ರೂ. 9.20 ಪೈಸೆ ಇದ್ದದ್ದನ್ನ ಈಗ ರೂ.32.98 ಪೈಸೆಗೆ ಏರಿಸಲಾಗಿದೆ.
Also read: ರೇಣುಕಾಸ್ವಾಮಿ ಹತ್ಯೆ ಪ್ರಕರಣ | 10 ದಿನ ಕಳೆದರೂ ಇನ್ನೂ ಸಿಗದ ಮೊಬೈಲ್ | ಮುಂದೇನು?
ಬಿಜೆಪಿಯವರಿಗೆ ಸಾಮಾನ್ಯ ಜನತೆಯ ಮೇಲೆ ನಿಜವಾದ ಕಾಳಜಿ ಇದ್ದರೆ ಮೊಸಳೆ ಕಣ್ಣೀರು ಸುರಿಸುವುದರ ಬದಲು ಪ್ರತಿಭಟನೆ ಕೈಬಿಟ್ಟು, ತಮ್ಮದೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಎಕ್ಸೈಸ್ ಡ್ಯೂಟಿ ಕಡಿಮೆ ಮಾಡಿಸಿ ತೈಲ ಬೆಲೆ ಕಡಿತಕ್ಕೆ ಒತ್ತಾಯಿಸಿಲಿ ಎಂದು ರಮೇಶ್ ತಿಳಿಸಿದರು.
ರಾಜ್ಯದ ಬಡಜನರಿಗೆ ಅನ್ನ,ಬೆಳಕು,ಮಹಿಳೆಯರಿಗೆ ಉಚಿತ ಪ್ರಯಾಣ, ತಿಂಗಳಿಗೆ ರೂ.2 ಸಾವಿರ ಹಾಗೂ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ ರೂ.3000 ನೀಡುತ್ತಿರುವ ಹಿನ್ನಲೆಯಲ್ಲಿ ಸಂಪನ್ಮೂಲ ಸಂಗ್ರಹಣೆಗೆ ರೂ.3 ಏರಿಸಿದ್ದನ್ನು ಪ್ರತಿಭಟಿಸುತ್ತಿರುವುದು ಖಂಡನೀಯವೆಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post