ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ಕಾರದ ತುಘಲಕ್ ನೀತಿಯಿಂದಾಗಿ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಒಂದು ಕೈಯಲ್ಲಿ ಗ್ಯಾರಂಟಿ ನೀಡಿ ಇನ್ನೊಂದು ಕೈಯಲ್ಲಿ ಬೆಲೆ ಏರಿಕೆಯ ಬಿಸಿ ಮುಟ್ಟಿಸಿರುವ ಸರ್ಕಾರ ಕೂಡಲೇ ತೊಲಗಬೇಕು ಎಂದು ಬಿಜೆಪಿ ನಾಯಕ ಎಂ.ಬಿ. ಭಾನುಪ್ರಕಾಶ್ ಹೇಳಿದರು.
ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ರಾಜ್ಯ ಸರ್ಕಾರ ತೆರಿಗೆ ಹೆಚ್ಚಳ ಮಾಡಿರುವುದರಿಂದ ಜನಸಾಮಾನ್ಯರಿಗೆ ಎಲ್ಲಾ ವಸ್ತುಗಳ ಮೇಲೆ ಬೆಲೆ ಏರಿಕೆಯ ಪರಿಣಾಮವಾಗಲಿದ್ದು, ಇದರ ವಿರುದ್ಧ ಇಂದು ಬಿಜೆಪಿಯ ವಿವಿಧ ಮೋರ್ಚಾಗಳು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಸೀನಪ್ಪ ಶೆಟ್ಟಿ ವೃತ್ತದಲ್ಲಿ (ಗೋಪಿ ವೃತ್ತ)ಹಮ್ಮಿಕೊಂಡಿದ್ದ ಬಹಿರಂಗ ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗ್ಯಾರಂಟಿ ಬಡವರಿಗಾಗಿ ನೀಡಿದ್ದಾರೆ ಎಂಬ ಸಂತೋಷ ಬಿಜೆಪಿಗೆ ಆಗಿತ್ತು. ನಾವು ಯಾವಾಗಲು ಬಡವರ ಪರ ಆದರೆ ಕಾಂಗ್ರೆಸ್ ಸ್ವಾತಂತ್ರ ಬಂದಾಗಿನಿಂದ ಗರೀಬಿ ಹಠಾವೋ ಎಂದು ಜಪಿಸುತ್ತ ಇನ್ನೂ ಬಡತನ ನಿರ್ಮೂಲನೆ ಅವರ ಕೈಯಲ್ಲಿ ಮಾಡಲಾಗಲಿಲ್ಲ. ಆದರೆ, ಮೋದಿ ಸರ್ಕಾರ ಯಾವುದೇ ಘೋಷಣೆ ಮಾಡದೆ ಬಡವರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದು ದೇಶಕ್ಕೆ ಭದ್ರಾ ಬುನಾದಿ ಹಾಕಿ ವಿಶ್ವದಲ್ಲೇ 5ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಆದರೆ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸುಳ್ಳಿನ ಸರಮಾಲೆ ಸೃಷ್ಠಿಸಿ ಒಂದು ಕಡೆಯಿಂದ ಗ್ಯಾರಂಟಿಯ ಹೆಸರಿನಲ್ಲಿ ಬಡಜನರಿಗೆ ಸಲ್ಲಬೇಕಾದ ನ್ಯಾಯಯುತ ಸೌಲತ್ತುಗಳನ್ನು ಕಸಿದಿದೆ. ಒಂದು ಇಲಾಖೆಯ 1459 ಕೋಟಿ ಹಣ ಕಾಣೆಯಾಗಿದ್ದು, ಸದನದಲ್ಲಿ ಡಿ.ಎಸ್.ಅರುಣ್ ಪ್ರಸ್ತಾಪಿಸಿದ ನಂತರ ಈಗ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ತನಿಖೆಗೆ ಹೊರಟಿದ್ದಾರೆ. ಅದು ಇತ್ತೀಚೆಗೆ ವಾಲ್ಮೀಖಿ ನಿಗಮದ ಅಧಿಕಾರಿಯ ಶವಯಾತ್ರೆಯಂತೆ ಆಗಲಿದೆ. ಇದಕ್ಕೆ ಪೂರಕವಾಗಿ ಬಿಜೆಪಿ ಇಂದು ದ್ವಿಚಕ್ರವಾಹನವನ್ನು ಶವದ ರೀತಿಯಲ್ಲಿ ಶಿವಪ್ಪ ನಾಯಕ ವೃತ್ತದಿಂದ ಮೆರವಣಿಗೆ ಮೂಲಕ ಜಾಗೃತಿ ಯಾತ್ರೆ ಮಾಡಿದ್ದಾರೆ. ಇದೋಂದು ಸರ್ಕಾರಕ್ಕೆ ಎಚ್ಚರಿಕೆಯಾಗಿದ್ದು, ಕೂಡಲೇ ಅಗತ್ಯ ವಸ್ತುಗಳು ಮತ್ತು ತೈಲಬೆಲೆ ಏರಿಕೆಯನ್ನು ರಾಜ್ಯ ಸರ್ಕಾರ ಇಳಿಸಬೇಕು ಎಂದರು.
ಶಾಸಕ ಚನ್ನಬಸಪ್ಪ ಮಾತನಾಡಿ, ಸರ್ಕಾರಿ ಖಜಾನೆ ಖಾಲಿಯಾಗಿದೆ. ಟ್ರಾಫಿಕ್ ಪೊಲೀಸರನ್ನು ವಸೂಲಿ ಮಾಡಲು ಸರ್ಕಾರ ಬೀದಿಗಿಳಿಸಿದೆ. ಎಲ್ಲಾ ಕಡೆಯಿಂದಲೂ ದುಡ್ಡು ಹೊಡೆಯಲು ಸರ್ಕಾರ ಆದೇಶ ನೀಡಿದೆ. ಬಡವರು ಸಂತೆಗೆ ಹೋಗಲು ಆಗುತ್ತಿಲ್ಲ. ರೈತರಿಗೆ ಹಾಲಿನ ಸಬ್ಸಿಡಿ ಇನ್ನೂ ನೀಡಿಲ್ಲ. ಎಲ್ಲಾ ವಸ್ತುಗಳ ಬೆಲೆಯನ್ನು ಈ ಸರ್ಕಾರ ಏರಿಸಿದೆ. ಪಹಣಿಯಿಂದ ಹಿಡಿದು ಸರ್ಕಾರದ ಎಲ್ಲಾ ಸೇವೆಗಳಿಗೂ 10 ಪಟ್ಟು ದರ ಏರಿಸಿದ್ದು, ಭ್ರಷ್ಟಾತಿಭ್ರಷ್ಟ ಸರ್ಕಾರ ಇದಾಗಿದೆ ಎಂದರು.
Also read: ಎಂ.ಬಿ. ಭಾನುಪ್ರಕಾಶ್ ನಿಧನಕ್ಕೆ ಡಾ. ಧನಂಜಯ ಸರ್ಜಿ ತೀವ್ರ ಸಂತಾಪ
ಶಾಸಕ ಡಿ.ಎಸ್.ಅರುಣ್ ಬೆಲೆ ಏರಿಕೆ ಖಂಡಿಸಿ ಶಿವಪ್ಪ ನಾಯಕ ವೃತ್ತದಿಂದ ಕುದುರೆಯ ಮೇಲೆ ಬಂದು ಪ್ರತಿಭಟನೆ ವ್ಯಕ್ತಪಡಿಸಿದರು. ಯುವಮೋರ್ಚಾದವರು ಜೈಲುವೃತ್ತದಿಂದ ಗೋಪಿ ಸರ್ಕಲ್‍ವರೆಗೆ ಕಾರನ್ನು ಎಳೆಯುವುದರ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು.
ರೈತ ಮೋರ್ಚಾದವರು ಮಹಾವೀರವೃತ್ತದಿಂದ ಎತ್ತಿನಗಾಡಿಯ ಮೂಲಕ ಪ್ರತಿಭಟಿಸಿದರೆ, ಶಿವಪ್ಪನಾಯಕ ವೃತ್ತದಿಂದ ದ್ವಿಚಕ್ರ ವಾಹನದ ಅಣಕುಶವಯಾತ್ರೆ ನಡೆಯಿತು. ಎಸ್ಸಿ ಮೋರ್ಚಾದವರು ಬೈಕ್‍ನ್ನು ದಾರದ ಮೂಲಕ ಎಳೆದು ತಂದು ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಿದರೆ, ಮಹಿಳಾ ಮೋರ್ಚಾದವರು ತರಕಾರಿ ಮತ್ತು ಇನ್ನಿತರ ಅಗತ್ಯ ವಸ್ತುಗಳನ್ನು ಪ್ರದರ್ಶಿಸಿ ಸಂತೆಯನ್ನು ನಿರ್ಮಿಸಿ ಸರ್ಕಾರಕ್ಕೆ ಅಣಕಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧಕ್ಷ ಟಿ.ಡಿ. ಮೇಘರಾಜ್, ಎಸ್.ರುದ್ರೇಗೌಡ, ಡಿ.ಎಸ್. ಅರುಣ್, ‘ಭಾರತಿಶೆಟ್ಟಿ, ಮಾಜಿ ಶಾಸಕರಾದ ಮುಖಂಡರಾದ ಎಂ.ಬಿ. ಹರಿಕೃಷ್ಣ, ಶಿವರಾಜ್, ಎಸ್.ದತ್ತಾತ್ರಿ. ಪ್ರಶಾಂತ್ ಕುಕ್ಕೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಗಾಯತ್ರಿ ಮಲ್ಲಪ್ಪ, ರೈತಮೋರ್ಚಾ ಅಧ್ಯಕ್ಷ ಸಿದ್ದಲಿಂಗಪ್ಪ, ನಗರಾಧ್ಯಕ್ಷ ಮೋಹನ ರೆಡ್ಡಿ, ಸಂತೋಷ್ ಬಳ್ಳಕೆರೆ, ವಿನ್ಸಂಟ್ ರೋಡ್ರಿಗಸ್, ಮಾಲಂತೇಶ್, ಜಗದೀಶ್ ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post