ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೋವಿಡ್-19 ಸಾಂಕ್ರಾಮಿಕವನ್ನು ನಿಗ್ರಹಿಸಲು ಜಾರಿಯಲ್ಲಿರುವ ಲಾಕ್‌ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ವಾಹನ ಬಳಕೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಮಾಜಿ ಶಾಸಕ ಪ್ರಸನ್ನಕುಮಾರ್ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅಗತ್ಯವಸ್ತುಗಳ ಖರೀದಿಗೆ ಜನರಿಗೆ ಯಾವುದೇ ಪರ್ಯಾಯ ಕಲ್ಪಿಸದೇ ವಾಹನ ಓಡಾಟ ನಿರ್ಬಂಧಿಸಿರುವುದು ಅವೈಜ್ಞಾನಿಕವಾದ ಜನವಿರೋಧಿ ಕೆಲಸವಾಗಿದೆ ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಜನರ ಓಡಾಟ ನಿರ್ಬಂಧಿಸದೆ ಈ ಸಾಂಕ್ರಾಮಿಕವನ್ನು ತಡೆಗಟ್ಟುವುದು ಅಸಾಧ್ಯ ಎಂಬುದು ಸತ್ಯ. ಹಾಗೆಯೇ ಪೊಲೀಸ್ ವ್ಯವಸ್ಥೆ ಹಗಲು ರಾತ್ರಿ ಜನರ ಆರೋಗ್ಯದ ಕಾರಣಕ್ಕಾಗಿ ಕಾಳಜಿ ವಹಿಸುತ್ತಿದೆ ಎಂಬುದು ಪ್ರಶಂಸನೀಯ. ಆದರೆ ಅಗತ್ಯ ವಸ್ತುಗಳ ಖರೀದಿಗೆ ವಾಹನ ಬಳಸುವಂತಿಲ್ಲ ಎಂಬ ನಿಯಮ ಜನರಿಗೆ ತೀವ್ರ ತೊಂದರೆ ನೀಡಲಿದ್ದು, ಜನರಲ್ಲಿ ಹುಟ್ಟುವ ಆಕ್ರೋಶ ಪೊಲೀಸ್‌ರ ಕೆಲಸಕ್ಕೆ ತೊಡಕಾಗುವ ಸಾಧ್ಯತೆಯೂ ಇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಿಂಗಳಿಗಾಗುವಷ್ಟು ದಿನಸಿ ತಂದಿಟ್ಟುಕೊಳ್ಳುವ ಸಾಮಾರ್ಥ್ಯವಿಲ್ಲದ ಬಡ ಕುಟುಂಬಗಳು ದಿನವೂ ಅಂಗಡಿ ಬಾಗಿಲಿಗೆ ಹೋಗಬೇಕಾಗುತ್ತದೆ. ಔಷಧಿ ತರಲು, ಆಸ್ಪತ್ರೆಗೆ ಹೋಗಿಬರಲು, ವ್ಯಾಕ್ಸಿನ್ ಹಾಕಿಸಿಕೊಳ್ಳಲು, ಆಸ್ಪತ್ರೆಯಲ್ಲಿನ ರೋಗಿಗಳಿಗೆ ಊಟ, ಔಷಧ ಕೊಟ್ಟು ಬರಲು ವಾಹನದಲ್ಲಿ ಓಡಾಟ ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಅಗತ್ಯವಿರುವವರಿಗೆ ವಾಹನದಲ್ಲಿ ಓಡಾಡುವುದಕ್ಕೆ ಅವಕಾಶ ನೀಡಬೇಕು ಮತ್ತು ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮಹಿಳೆಯರು, ವೃದ್ಧರಿಗೆ ಓಡಾಡಲು ಆಟೋಗಳಿಗೆ ಅವಕಾಶ ನೀಡಬೇಕೆಂದು ಜನರಪರವಾಗಿ ಪ್ರಸನ್ನಕುಮಾರ್ ವಿನಂತಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















