ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ರಾಜ್ಯಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಅ.8ರ ಶುಕ್ರವಾರ ಸಂಜೆ 5:30ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ ಎಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ವಿ. ಶಿವಕುಮಾರ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಕಂಟ್ರಿಕ್ಲಬ್ ಆವರಣದಲ್ಲಿ ಆಯೋಜಿಸಲಾಗಿತ್ತಾದರೂ, ಮಳೆಯ ಅನಿಶ್ಚಿತತೆಯ ಕಾರಣದಿಂದ ಕುವೆಂಪು ರಂಗಮಂದಿರಕ್ಕೆ ಸ್ಥಳಾಂತರಿಸಲಾಗಿದೆ ಎಂದರು.
ಇದುವರೆಗೂ ಈ ಎಲ್ಲ ಪ್ರಶಸ್ತಿಗಳನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ವಾರ್ಷಿಕ ಸಮ್ಮೇಳನಗಳಲ್ಲಿ ನೀಡಲಾಗುತ್ತಿತ್ತು. ಆದರೆ, ಈ ಬಾರಿ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿಗಳನ್ನು ಇನ್ನಷ್ಟು ಘನತೆಯಿಂದ ವಿತರಿಸಬೇಕೆಂಬ ಉದ್ದೇಶದಿಂದ ಪ್ರತ್ಯೇಕವಾಗಿ ನಡೆಸಲು ತೀರ್ಮಾನಿಸಿದ ಪರಿಣಾಮ ಮೊದಲ ಬಾರಿಗೆ ಮಲೆನಾಡಿನ ಹೆಬ್ಬಾಗಿಲು, ಪತ್ರಿಕೋದ್ಯಮಕ್ಕೆ ತನ್ನದೇ ಆದ ಪ್ರತಿಭೆಗಳನ್ನು ಕೊಡಮಾಡಿರುವ ಹೆಗ್ಗಳಿಕೆ ಹೊಂದಿರುವ ಶಿವಮೊಗ್ಗೆಯಲ್ಲಿ ಪ್ರದಾನ ಮಾಡಲಾಗುತ್ತಿದೆ ಎಂದರು.
ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಪತ್ರಕರ್ತರಿಗೆ ಆಸರೆಯಾಗಿ ನಿಂತ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಇದೇ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಶಿವಮೊಗ್ಗ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ‘ಸಿಹಿಮೊಗೆ ಮಾಧ್ಯಮ’ ಹೆಸರಿನ ವಿಶೇಷ ಸ್ಮರಣ ಸಂಚಿಕೆಯನ್ನು ಸಂಸದ ಬಿ.ವೈ ರಾಘವೇಂದ್ರ ಬಿಡುಗಡೆ ಮಾಡಲಿದ್ದಾರೆ. ಶಿವಮೊಗ್ಗೆಯ ಪತ್ರಿಕಾ ಛಾಯಾಗ್ರಾಹಕರ ಸಹಭಾಗಿತ್ವದಲ್ಲಿ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಪ್ರಶಸ್ತಿಗಳನ್ನು ಜಿಲ್ಲಾ ಉಸ್ತುವಾರಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರದಾನ ಮಾಡಲಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಆಶಯನುಡಿಗಳನ್ನಾಡಲಿದ್ದಾರೆ ಎಂದರು.
ಮುಖ್ಯಅತಿಥಿಗಳಾಗಿ, ಶಾಸಕ ಬಿ.ಕೆ.ಸಂಗಮೇಶ್ವರ, ಕೆ.ಬಿ. ಅಶೋಕ ನಾಯ್ಕ, ಕುಮಾರ್ ಬಂಗಾರಪ್ಪ, ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಕರ್ನಾಟಕ ಆರ್ಯವೈಶ್ಯ ಸಮುದಾಯದ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ. ಎಸ್. ಅರುಣ್, ಮಹಾಪೌರರಾದ ಸುನೀತಾ ಅಣ್ಣಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಜಾತ್ಯಾತೀತ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಗೋಪಾಲ್ ಎಸ್. ಯಡಗೆರೆ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ. ವಿ. ಮಲ್ಲಿಕಾರ್ಜುನಯ್ಯ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಏಷ್ಯಾ ವಿಭಾಗದ ಸಂಚಾಲಕ ಹೆಚ್. ಬಿ. ಮದನಗೌಡ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಎನ್. ರವಿಕುಮಾರ್ ಟೆಲೆಕ್ಸ್ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಹಿಂದೂಸ್ಥಾನಿ ಗಾಯಕ ಉಸ್ತಾದ್ ಹುಮಾಯೂನ್ ಹರ್ಲಾಪುರ ಮತ್ತು ಸಂಗಡಿಗರಿಂದ ವಚನಗಾಯನ ನಡೆಯಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವೈದ್ಯ, ನಗರ ಕಾರ್ಯದರ್ಶಿ ವಿ. ಟಿ. ಅರುಣ್, ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್ ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತರು:
ಡಿವಿಜಿ ಪ್ರಶಸ್ತಿ: ರವಿ ಹೆಗಡೆ, ಸಂಪಾದಕರು, ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್, ಎಚ್. ಎಸ್. ದೊರೆಸ್ವಾಮಿ ಪ್ರಶಸ್ತಿ: ಬಿ.ಎಂ ಹನೀಫ್, ಪ್ರಜಾವಾಣಿ, ಗೊಮ್ಮಟ ಮಾಧ್ಯಮ ಪ್ರಶಸ್ತಿ: ಎಸ್.ಎನ್.ಅಶೋಕಕುಮಾರ್, ಸಂಪಾದಕರು, ಗೊಮ್ಮಟವಾಣಿ, ಪಾಟೀಲ್ ಪುಟ್ಟಪ್ಪ ಪ್ರಶಸ್ತಿ : ಎಸ್.ಕೆ.ಶೇಷಚಂದ್ರಿಕ, ಹಿರಿಯ ಪತ್ರಕರ್ತರು, ಎಸ್.ವಿ.ಜಯಶೀಲರಾವ್ ಪ್ರಶಸ್ತಿ: ಅ.ಚ.ಶಿವಣ್ಣ, ಹಿರಿಯ ಪತ್ರಕರ್ತರು, ಪಿ.ಆರ್. ರಾಮಯ್ಯಪ್ರಶಸ್ತಿ: ಯು.ಎಸ್. ಶೆಣೈ, ಸಂಪಾದಕರು, ಕುಂದಪ್ರಭ, ಗರುಡನಗಿರಿ ನಾಗರಾಜ್ ಪ್ರಶಸ್ತಿ ಕೆ.ಆರ್.ಮಂಜುನಾಥ್, ಸಂಪಾದಕರು, ಮಲೆನಾಡ ಮಂದಾರ, ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ : ಕೋಡಿ ಹೊಸಳ್ಳಿ ರಾಮಣ್ಣ, ಹಿರಿಯ ಪತ್ರಕರ್ತರು, ಕಿಡಿ ಶೇಷಪ್ಪ ಪ್ರಶಸ್ತಿ: ಕೆ.ಎಂ.ರೇಖಾ, ಸಂಪಾದಕರು, ಹೊಸಪೇಟೆ ಟೈಮ್ಸ್, ಪಿ.ರಾಮಯ್ಯ ಪ್ರಶಸ್ತಿ: ರೇವಣ್ಣಸಿದ್ದಯ್ಯ ಮಹಾನುಭವಿಮಠ, ಸಂಪಾದಕರು, ಶಿಡ್ಲು ಪತ್ರಿಕೆ, ಯಶೋಧಮ್ಮ ಜಿ ನಾರಾಯಣ ಪ್ರಶಸ್ತಿ: ರಶ್ಮಿ, ಬ್ಯೂರೋ ಮುಖ್ಯಸ್ಥೆ, ಪ್ರಜಾವಾಣಿ, ಹುಬ್ಬಳ್ಳಿ, ಎಂ. ನಾಗೇಂದ್ರರಾವ್ ಪ್ರಶಸ್ತಿ : ಎನ್. ಡಿ. ಶಾಂತಕುಮಾರ್ ವಿಜಯವಾಣಿ, ಶಿವಮೊಗ್ಗ, ಮಿಂಚು ಶ್ರೀನಿವಾಸ್ ಪ್ರಶಸ್ತಿ: ರಾಮಸ್ವಾಮಿ ಹುಲಕೋಡು, ವಿಜಯ ಕರ್ನಾಟಕ, ಎಸ್.ಹೆಚ್. ರಂಗಸ್ವಾಮಿ ಪ್ರಶಸ್ತಿ : ಪಿ.ಸುನೀಲ್‌ಕುಮಾರ್ ಸಂಪಾದಕರು ‘ಸಿಟಿ ಹೈಲೈಟ್ಸ್’ ಬೆಂಗಳೂರು, ಸಂಘದ ವಿಶೇಷ ಪ್ರಶಸ್ತಿಗಳು: ಪ್ರಹ್ಲಾದಗುಡಿ, ವರದಿಗಾರರು, ಕನ್ನಡ ಪ್ರಭ, ರಾಯಚೂರು, ಮುನಿವೆಂಕಟೇಗೌಡ, ಹಿರಿಯ ಪತ್ರಕರ್ತರು ಕೋಲಾರ, ಎಂ.ಕೆ. ರಾಘವೇಂದ್ರ ಮೇಗರವಳ್ಳಿ. ‘ವಿಜಯಕರ್ನಾಟಕ’ ತೀರ್ಥಹಳ್ಳಿ, ಪ್ರಕಾಶ್ ರಾಮಜೋಗಿಹಳ್ಳಿ, ವಾರ್ತಾಭಾರತಿ, ಬೆಂಗಳೂರು.
ಸಂವಾದ:
ಇದೇ ಸಂದರ್ಭದಲ್ಲಿ ಪತ್ರಿಕಾ ಭವನದಲ್ಲಿ ಬೆಳಿಗ್ಗೆ ೧೧ಗಂಟೆಗೆ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಯಲಿದ್ದು, ಹಿರಿಯ ಪತ್ರಕರ್ತ ನಾ. ರ. ವೆಂಕಟೇಶ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂವಾದದಲ್ಲಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ರವಿ ಹೆಗಡೆ, ಬಿ. ಎಂ. ಹನೀ-, ರಶ್ಮಿ, ಎನ್. ಡಿ. ಶಾಂತಕುಮಾರ್‌ರವರು ವಿಷಯ ಮಂಡನೆ ಮಾಡಲಿದ್ದಾರೆ. ಸಂಘದ ಗ್ರಾಮಾಂತರ ಉಪಾಧ್ಯಕ್ಷರಾದ ಮೋಹನ ಶೆಟ್ಟಿ ಮುನ್ನೂರುರವರು ಸಂವಾದವನ್ನು ನಿರ್ವಹಿಸಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post