ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪರಿಶಿಷ್ಟ ಜಾತಿ, ಪಂಗಡಗಳಿಗೆ ಒಳಮೀಸಲಾತಿಯನ್ನು ಹೆಚ್ಚಿಸುವ ಬಗ್ಗೆ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಖಂಡಿಸಿ ಬಂಜಾರ ಸಮುದಾಯದವರು ಇಂದು ನಗರದ ಗಾಡಿಕೊಪ್ಪದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಶಿವಮೊಗ್ಗ-ಸಾಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ, ಟಯರ್‌ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ ಬಂಜಾರ ಜನಾಂಗದ ಶಾಸಕರು ಹಾಗೂ ಸಂಸದರ ಅಣುಕು ಶವ ಪ್ರದರ್ಶನವನ್ನು ಮಾಡಿ. ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಗಾಡಿಕೊಪ್ಪ ತಾಂಡದ ಗ್ರಾಮಸ್ಥರು ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು
ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹ ಹಿನ್ನೆಲೆ: ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸದ ಸ್ಥಾನ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಇಂದು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ನೇತೃತ್ವದಲ್ಲಿ ಮಹಾತ್ಮ ಗಾಂಧಿ ಪಾರ್ಕ್‌ನಲ್ಲಿ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ವಜಾ ಮಾಡಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಂಡಂತಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಸಂಸತ್ ಪಾವಿತ್ರ್ಯತೆಯನ್ನೇ ಬಿಜೆಪಿ ಹಾಳು ಮಾಡಿದೆ ಎಂದು ಪ್ರತಿಭಟನಾಕಾರರು ದೂರಿದರು.
ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿರುವುದು ಅತ್ಯಂತ ಕರಾಳ ದಿನಗಳಲ್ಲಿ ಒಂದಾಗಿದೆ. ಕಾಂಗ್ರೆಸ್ ಇದನ್ನು ಒಕ್ಕೊರಲಿನಿಂದ ಖಂಡಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ತರವಲ್ಲ. ಇದು ಪ್ರಧಾನಿ ಮೋದಿಯವರ ಸರ್ವಾಧಿಕಾರದ ಪ್ರತೀಕವಾಗಿದೆ. ಮತ್ತು ಚುನಾವಣೆಯ ಲಾಭ ಪಡೆದುಕೊಳ್ಳುವ ಉದ್ದೇಶವನ್ನು ಪಡೆದುಕೊಳ್ಳುತ್ತಿದೆ. ಬಿಜೆಪಿಯನ್ನು ದೇಶದಿಂದ ದೂರ ಮಾಡುವುದೇ ಕಾಂಗ್ರೆಸ್ ಗುರಿಯಾಗಿದೆ ಎಂದು ಪ್ರತಿಭಟನಕಾರರು ತಿಳಿಸಿದರು.
ಪ್ರತಿಭಟನೆಯಲ್ಲಿ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಇಕ್ಕೇರಿ ರಮೇಶ್, ಪ್ರಮುಖರಾದ ಹೆಚ್.ಪಿ. ಗಿರೀಶ್, ಎಸ್.ಪಿ,. ಶೇಷಾದ್ರಿ, ರಮೇಶ್ ಶಂಕರಘಟ್ಟ, ಜಿ.ಡಿ. ಮಂಜುನಾಥ್, ಕಲೀಂ ಪಾಶಾ, ಟಿ. ಕೃಷ್ಣಪ್ಪ, ಹೆಚ್.ಆರ್. ಮಹೇಂದ್ರ, ರಾಘವೇಂದ್ರ, ಸೌಗಂಧಿಕ, ಎನ್.ಡಿ. ಪ್ರವೀಣ್‌ಕುಮಾರ್, ಸ್ಟೆಲ್ಲಾ ಮಾರ್ಟಿನ್, ನಾಜೀಮಾ, ಪ್ರೇಮಾ, ತಬಸ್ಸುಮ್, ನವೀನ್, ಸಯ್ಯದ್, ಜಮೀರ್, ಅರ್ಚನಾ ಸೇರಿದಂತೆ ಹಲವರಿದ್ದರು.
ಆರ್‌ಟಿಓ ಕಚೇರಿಯಲ್ಲಿ ಮಧ್ಯವರ್ತಿಗಳಿಗೆ ಕಡಿವಾಣ ಹಾಕಿ: ಐಎನ್‌ಟಿಯುಸಿ ವಿದ್ಯಾರ್ಥಿ ಘಟಕ ಮನವಿ
ಆರ್‌ಟಿ.ಓ ಕಚೇರಿಯಲ್ಲಿ ಮಧ್ಯವರ್ತಿಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಐಎನ್‌ಟಿಯುಸಿ ವಿದ್ಯಾರ್ಥಿ ಘಟಕ ಇಂದು ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.
ಶಿವಮೊಗ್ಗದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದೆ. ಅಧಿಕಾರಿಗಳು ನೌಕರರು ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಚಾಲನಾ ಪರವಾನಗಿ, ಆರ್‌ಸಿ, ಸ್ಮಾರ್ಟ್ ಕಾರ್ಡ್ ಮುಂತಾದ ದಾಖಲೆಗಳನ್ನು ಅಂಚೆ ಮೂಲಕ ರವಾನೆ ಮಾಡಬೇಕೆಂಬ ಆದೇಶ ಇದ್ದರೂ ಕೂಡ ಇದನ್ನು ಪಾಲನೆ ಮಾಡದೆ, ಸಕಾಲ ಯೋಜನೆಯನ್ನೂ ಕೂಡ ಸಮರ್ಪಕವಾಗಿ ಜಾರಿ ಮಾಡದೆ ಮಧ್ಯವರ್ತಿಗಳು ಹೇಳಿದಂತೆ ಕೇಳುತ್ತಿದ್ದಾರೆ. ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ನೇರವಾಗಿ ಕಚೇರಿಗೆ ತೆರಳಿ ದಾಖಲೆಯನ್ನು ಪಡೆಯುವುದು ಸಾಧ್ಯವೇ ಇಲ್ಲ ಎಂದು ದೂರಿದರು.
ಕಚೇರಿ ಆವರಣದಲ್ಲಿಯೇ ಈ ಮಧ್ಯವರ್ತಿಗಳು ತಿರುಗಾಡುತ್ತಿರುತ್ತಾರೆ. ಇವರನ್ನು ನಿಯಂತ್ರಿಸುವುದು ಸಾಧ್ಯವಿಲ್ಲ. ಈ ಹಿಂದೆ ಕಾಲೇಜುಗಳಿಗೆ ತೆರಳಿ ಕ್ಯಾಂಪ್ ನಡೆಸಿ ವಿದ್ಯಾರ್ಥಿಗಳಿಗೆ ಚಾಲನಾ ಪರವಾನಿಗಿಯನ್ನು ನೀಡಲಾಗುತ್ತಿತ್ತು. ಆದರೆ ಈಗ ಅದನ್ನು ಸ್ಥಗಿತಗೊಳಿಸಲಾಗಿದೆ. ಅದನ್ನು ಪುನಃ ಆರಂಭಿಸಬೇಕು. ಭ್ರಷ್ಟ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಐಎನ್‌ಟಿಯುಸಿ ಜಿಲ್ಲಾಧ್ಯಕ್ಷ ವಿನಯ್‌ಕುಮಾರ್, ಪ್ರಮುಖರಾದ ಮಧುಕುಮಾರ್, ಸ್ವರೂಪ್ ಹೇಮಂತಕುಮಾರ್, ಸಂದೀಪ್, ವಿಜಯ್, ನಿಹಾಲ್, ಸಂದೇಶ್ ಸೇರಿದಂತೆ ಹಲವರಿದ್ದರು.
ಶ್ರೀಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಮಾ.30ರಂದು ರಾಮನವಮಿ ಉತ್ಸವ
ಶಿವಮೊಗ್ಗ: ಶೋಭಕೃತ್ ನಾಮ ಸಂವತ್ಸರದ ಚೈತ್ರ ಶುಕ್ಲ ನವಮಿ ಮಾ.30ರ ಗುರುವಾರ ಶ್ರೀಲಕ್ಷ್ಮಿ ವೆಂಕಟರಮಣ ದೇವಸ್ಥಾನ, ಗೌಡ ಸಾರಸ್ವತ ಕಲ್ಯಾಣ ಮಂದಿರ ರಸ್ತೆ, ಶಿವಮೊಗ್ಗ ಇಲ್ಲಿ ರಾಮನವಮಿ ಉತ್ಸವದ ಅಂಗವಾಗಿ ಪ್ರಾತಃ 6:15ಕ್ಕೆ ಸುಪ್ರಭಾತದಿಂದ ಪ್ರಾರಂಭವಾಗಿ ವಿಷ್ಣು ಸಹಸ್ರನಾಮ, ರಾಮತಾರಕ ನಾಮ ನಂತರ ಉಷಃ ಪೂಜೆ. ಬೆಳಿಗ್ಗೆ 9 ಗಂಟೆಗೆ ರಾಮ ತಾರಕ ಹವನ, ಶ್ರೀರಾಮನಿಗೆ ತೊಟ್ಟಿಲು ಶಾಸ್ತ್ರ. ನಂತರ ಮಹಾಪೂಜೆ, ಪ್ರಸಾದ, ಭೋಜನ.
ಸಂಜೆ 6:30ಕ್ಕೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ, ವಸಂತ ಪೂಜೆ, ಮಂಗಳಾರತಿ, ಪನಿವಾರ ಪ್ರಸಾದ. ಈ ಎಲ್ಲಾ ದೇವತಾ ಕಾರ್ಯಗಳಿಗೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಆಡಳಿತ ಮಂಡಳಿ ವಿನಂತಿಸಿದೆ.
Also read: ಚುನಾವಣೆ ಘೋಷಣೆ: ಶಿವಮೊಗ್ಗ ಜಿಲ್ಲೆ ಎಷ್ಟು ಮತದಾರರಿದ್ದಾರೆ? ಎಷ್ಟು ಮತಗಟ್ಟೆಗಳಿವೆ?
ದಿಢೀರ್ ಪಕ್ಷಕ್ಕೆ ಬಂದವರಿಗೆ ಟಿಕೆಟ್: ಕಾಂಗ್ರೆಸ್ ಮುಖಂಡರಿಂ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಶಿವಮೊಗ್ಗ: ಮುಂಬರುವ ವಿಧಾನಸಾಭ ಚುನಾವಣೆಗೆ ಶಿವಮೊಗ್ಗ ನಗರ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಹನ್ನೊಂದು ಮಂದಿ ಆಕಾಂಕ್ಷಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದವರಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ಕೊಡಬೇಕೇ ವಿನಃ ಹೊರಗಿನಿಂದ ಬಂದವರಿಗೆ ಅಥವಾ ದಿಢೀರ್ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡಬಾರದು ಎಂದು 32 ವಾರ್ಡಿನ ಅಧ್ಯಕ್ಷರು ಸಭೆ ಸೇರಿ ತೀರ್ಮಾನ ಮಾಡಿದ್ದು, ಪ್ರಮಾಣ ಕೂಡ ಮಾಡಿದ್ದಾರೆ.
ಈ ಸಂದರ್ಭದಲ್ಲಿ ವಾರ್ಡಿನ ಪ್ರಮುಖರು ಚರ್ಚಿಸಿ ತೀರ್ಮಾನಕ್ಕೆ ಬಂದಿದ್ದು, ಅರ್ಜಿ ಸಲ್ಲಿಸಿದವರಿಗೆ ಟಿಕೆಟ್ ನೀಡಬೇಕು. ಪಕ್ಷದಲ್ಲಿ ಕನಿಷ್ಠ ಮೂರರಿಂದ ಐದು ವರ್ಷವಾದರೂ ಕೆಲಸ ಮಾಡಿರಬೇಕು. ಅದನ್ನು ಬಿಟ್ಟು ಈಗ ಬಂದವರಿಗೆ ಯಾವುದೇ ಕಾರಣಕ್ಕೂ ಮಣೆ ಹಾಕಬಾರದು. ಪಕ್ಷಕ್ಕಾಗಿದುಡಿದ ಕಟ್ಟಕಡೆಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದರೂ ಕೂಡ ನಾವು ಒಪ್ಪುತ್ತೇವೆ. ಆದರೆ ಹೊರಗಿನಿಂದ ಬಂದವರಿಗೆ ಮಣೆ ಹಾಕಿದಲ್ಲಿ ನಾವೆಲ್ಲರೂ ವಾರ್ಡಿನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡಿ ಚುನಾವಣೆಯಿಂದ ದೂರ ಉಳಿಯುತ್ತೇವೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಸಂಘಟನೆಗಾಗಿ., ಬಲವರ್ಧನೆಗಾಗಿ ಸದಸ್ಯತ್ವ ನವೀಕರಣಕ್ಕಾಗಿ, ಪ್ರಚಾರಕ್ಕಾಗಿ, ಆಡಳಿತ ಪಕ್ಷದ ವಿರುದ್ಧ ಪ್ರತಿಭಟನೆಗಾಗಿ ಹಗಲು ರಾತ್ರಿ ಶ್ರಮಿಸಿದ್ದಾರೆ. ಇಷ್ಟು ವರ್ಷ ನಾವು ಕಟ್ಟಿ ಬೆಳೆಸಿದ ಪಕ್ಷದಲ್ಲಿ ಗೆದ್ದಲು ನಿರ್ಮಿಸಿದ ಹುತ್ತದಲ್ಲಿ ಹಾವು ಸೇರಿಕೊಂಡಂತೆ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರೆ ಅವರಿಗೆ ಮಣೆ ಹಾಕಬಾರದು ಎಂದು ತಿಳಿಸಿದ್ದಾರೆ.
ಏಪ್ರಿಲ್ 2ರಿಂದ ಮಕ್ಕಳಿಗೆ ವಿಶೇಷ ಬೇಸಿಗೆ ಶಿಬಿರ
ಉತ್ತಿಷ್ಟ ಭಾರತ ಮಲೆನಾಡು ಮತ್ತು ಸಿಹಿಮೊಗೆ ಕ್ರಿಕೆಟ್ ಅಕಾಡೆಮಿ (ರಿ), ಶಿವಮೊಗ್ಗ ಇವರ ವತಿಯಿಂದ ಈ ವರ್ಷವೂ ಮಕ್ಕಳಿಗೆ ವಿಶೇಷ ಬೇಸಿಗೆ ಶಿಬಿರ ಏರ್ಪಡಿಸಿದ್ದು , ಕ್ರಿಕೆಟ್, ಕಬ್ಬಡ್ಡಿ, ಯೋಗಾಸನಗಳ ಬಗ್ಗೆ ತರಬೇತುದಾರರಿಂದ ತರಬೇತಿ ನೀಡಲಾಗುವುದು. ಆಟಗಳ ಜೊತೆಗೆ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಸಲುವಾಗಿ ಬೀಜದುಂಡೆ ತಯಾರಿ, ಗಿಡಗಳ ಮಾಹಿತಿ, ಜಲಸಂರಕ್ಷಣೆ ಇತ್ಯಾದಿ ಪರಿಸರ ಪೂರಕ ಚಟುವಟಿಕೆಗಳನ್ನೂ ನಡೆಸಲಾಗುವುದು.
ಗೋಪಾಳದ ಸ್ವಾಮಿ ವಿವೇಕಾನಂದ ಬಡಾವಣೆ ಚಂದನ ಪಾರ್ಕ್ ಪಕ್ಕದ ವಿಶಾಲವಾದ ಕ್ರೀಡಾಂಗಣದಲ್ಲಿ ಎಪ್ರಿಲ್ 2ರಿಂದ 30ರವರೆಗೆ ಮೊದಲ ಬ್ಯಾಚ್ ಹಾಗೂ ಎಪ್ರಿಲ್ 16ರಿಂದ ಮೇ 14ರವರೆಗೆ ಎರಡನೇ ಬ್ಯಾಚ್ ಗಳಲ್ಲಿ ನಡೆಯುವ ಈ ಶಿಬಿರದಲ್ಲಿ ಬೆಳಿಗ್ಗೆ 6:30ರಿಂದ 9ರವರೆಗೆ ಹಾಗೂ ಸಂಜೆ 4ರಿಂದ 6:30ರವರೆಗೆ ತರಬೇತಿ ನೀಡಲಾಗುವುದು.
ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ, ನಗರದ ವಿದ್ಯಾರ್ಥಿಗಳಿಗೆ ಕ್ರೀಡಾಂಗಣಕ್ಕೆ ಬರಲು ವಾಹನ ವ್ಯವಸ್ಥೆ, ಹುಡುಗಿಯರಿಗೆ ಪ್ರತ್ಯೇಕ ತರಬೇತಿ ವ್ಯವಸ್ಥೆಯೂ ಈ ಬಾರಿ ಇರುತ್ತದೆ.
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿಧ್ಯಾರ್ಥಿಗಳಿಗೆ ಹಾಗೂ ಎಲ್ಲಾ ವಿದ್ಯಾರ್ಥಿನಿಯರಿಗೆ ಶಿಬಿರದಲ್ಲಿ ಯಾವುದೇ ಶುಲ್ಕವಿಲ್ಲದಿರುವುದು ಸಂಸ್ಥೆಯ ಹೆಗ್ಗಳಿಕೆ. ಆಸಕ್ತ ವಿದ್ಯಾರ್ಥಿ, ವಿಧ್ಯಾರ್ಥಿನಿಯರು ತಮ್ಮ ಪೋಷಕರ ಒಪ್ಪಿಗೆ ಪತ್ರದೊಂದಿಗೆ ಈ ಕೂಡಲೇ ಹೆಸರು ನೊಂದಾಯಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪದಾಧಿಕಾರಿ ಹಾಗೂ ತರಬೇತುದಾರ ಬಾಲಕೃಷ್ಣ ನಾಯ್ಡು, ಮೊ. 94482 56122ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post