ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಡಿಕೆ ಬೆಳೆಗಾರರು ಎಲೆಚುಕ್ಕಿ, ಕೊಳೆರೋಗ ಮತ್ತು ಇತರೆ ಗಂಭೀರ ಸಮಸ್ಯೆಗಳಿಂದ ಬಳಲುತ್ತಿದ್ದು, ಇದಕ್ಕೆ ಸೂಕ್ತ ಪರಿಹಾರೋಪಾಯಗಳನ್ನು ಒದಗಿಸುವಂತೆ ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರಿಗೆ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ B S Yadiyurappa ಇಂದು ಪತ್ರ ಮುಖೇನ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯವು ದೇಶದಲ್ಲೇ ಅತಿ ಹೆಚ್ಚು ಅಡಿಕೆ ಬೆಳೆಯುವ ರಾಜ್ಯವಾಗಿದ್ದು, ಒಟ್ಟು ಪ್ರದೇಶದ 68% ಮತ್ತು ದೇಶದ ಒಟ್ಟು ಅಡಿಕೆ ಉತ್ಪಾದನೆಯ 80% ಕೊಡುಗೆ ನೀಡುತ್ತದೆ. ಪ್ರಸ್ತುತ ಕರ್ನಾಟಕದಲ್ಲಿ ಅಡಿಕೆಯನ್ನು 5.02 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, 05 ದಶಲಕ್ಷಕ್ಕೂ ಹೆಚ್ಚು ಜನರು ಅಡಿಕೆ ಕೃಷಿಯ ಮೇಲೆ ಅವಲಂಬಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 1.02 ಲಕ್ಷ ಹೆಕ್ಟೇರ್ ಪ್ರದೇಶವನ್ನು ಅಡಿಕೆ ಬೆಳೆಯಲು ಬಳಸಲಾಗುತ್ತಿದ್ದು, ಜಿಲ್ಲೆಯ ಆರ್ಥಿಕತೆಯ 60% ಅಡಿಕೆ ಉತ್ಪಾದನೆ ಇದ್ದು, ದೊಡ್ಡ ಪ್ರಮಾಣದ ತೆರಿಗೆ ಮತ್ತು ಸೆಸ್ ನೀಡುತ್ತಿದ್ದಾರೆ.

ನಿರಂತರ ಮಳೆಯಿಂದಾಗಿ ಮಣ್ಣಿನಿಂದ ಪೋಷಕಾಂಶಗಳ ನಾಶವಾಗುತ್ತಿದ್ದು ಈ ರೋಗದ ತೀವ್ರತೆ ಹೆಚ್ಚಾಗಿದೆ. ಹಾಗೂ ಗಾಳಿ ಮೂಲಕ ರೋಗ ಹರಡುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಅಡಿಕೆ ಉತ್ಪಾದನೆ ಮತ್ತು ಇಳುವರಿ ನಷ್ಟದಿಂದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಯ ರೈತರು ತೀವ್ರ ಆರ್ಥಿಕ ನಷ್ಟ ಮತ್ತು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಈ ಎಲ್ಲ ಜಿಲ್ಲೆಗಳ ರೈತರು ಮತ್ತು ಅಡಿಕೆ ಬೆಳೆಗಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿಯೂ ರೈತ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದೆ.

Also read: ಬಾಕ್ಸ್ ಆಫೀಸ್‌ನಲ್ಲಿ ಕಾಂತಾರ ಅಬ್ಬರಕ್ಕೆ ಘಟಾನುಘಟಿಗಳ 9 ಸಿನಿಮಾಗಳು ತತ್ತರ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪರಿಹಾರದಂತೆ ಅಡಿಕೆ ಉತ್ಪಾದನೆಯ ನಷ್ಟಕ್ಕೆ ಸೂಕ್ತ ಪರಿಹಾರ ಅಲ್ಲದೇ, ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳನ್ನು ಅಧ್ಯಯನ ಮಾಡಲು ಅಡಿಕೆ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲು ಮತ್ತು ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರ ಹಿತಾಸಕ್ತಿಗಳನ್ನು ರಕ್ಷಿಸಲು ಸೂಕ್ತವಾದ ಕಾರ್ಯತಂತ್ರಗಳನ್ನು ರೂಪಿಸಲು ವಿನಂತಿಸಲಾಗಿದೆ.
ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ಸೂಕ್ತ ಪರಿಹಾರ ಕ್ರಮಗಳನ್ನು ಶಿಫಾರಸು ಮಾಡಲು ಕೇಂದ್ರ ತಂಡವನ್ನು ಕಳುಹಿಸಲು ನಾನು ನಿಮ್ಮನ್ನು ಈ ಮೂಲಕ ವಿನಂತಿಸುತ್ತೇನೆ ಎಂದು ಅವರು ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.











Discussion about this post