ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಲಾಕ್‍ಡೌನ್ ಜಿಲ್ಲೆಯಲ್ಲಿ ಕಟ್ಟುನಿಟ್ಟಿನಿಂದ ಜಾರಿಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು,
ಅವರು ಮಂಗಳವಾರ ಜಿಲ್ಲಾಧಿಕಾರಿ ನೂತನ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಹಿರಿಯ ಅಧಿಕಾರಿಗಳ ಪರಿಶೀಲನಾ ಸಭೆ ನಡೆಸಿದರು.
ಲಾಕ್‍ಡೌನ್ ಕುರಿತಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಪೊಲೀಸ್ ಇಲಾಖೆ ಜಾರಿಗೊಳಿಸಬೇಕು. ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿ ಇತ್ಯಾದಿಗಳಿಗಾಗಿ ನಿಗದಿಪಡಿಸಿದ ಸಮಯ ಹೊರತುಪಡಿಸಿ ಮನೆಯಿಂದ ಹೊರಗೆ ಬರಬಾರದು. ಎರಡನೇ ಅಲೆ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತಿ ಅಗತ್ಯವಾಗಿದೆ ಎಂದು ಹೇಳಿದರು.
ಬೆಂಗಳೂರಿನಿಂದ ಬರುವವರ ಮೇಲೆ ನಿಗಾ:
ಬೆಂಗಳೂರಿನಿಂದ ಆಗಮಿಸುವವರ ಮೇಲೆ ಕಳೆದ ಬಾರಿಯಂತೆ ಈ ಬಾರಿಯೂ ನಿಗಾ ಇರಿಸಲು ಕ್ರಮ ಕೈಗೊಳ್ಳಬೇಕು. ಅವರು ಕಡ್ಡಾಯವಾಗಿ ಹೋಂ ಐಸೋಲೇಷನ್‍ನಲ್ಲಿರುವುದನ್ನು ಗ್ರಾಮಗಳಲ್ಲಿ ರಚಿಸಲಾಗಿರುವ ಟಾಸ್ಕ್ ಫೋರ್ಸ್ ಸಮಿತಿ ಖಾತ್ರಿಪಡಿಸಬೇಕು. ಆರಂಭದ ದಿನಗಳಲ್ಲಿ ಕನಿಷ್ಟ ಅವರ ದೇಹದ ತಾಪಮಾನವನ್ನು ಎರಡು ದಿನಗಳಿಗೊಮ್ಮೆ ಪರಿಶೀಲಿಸಲು ವ್ಯವಸ್ಥೆ ಮಾಡಬೇಕು. ಅವರಿಗೆ ಕನಿಷ್ಟ ವೈದ್ಯಕೀಯ ಸೇವೆಯನ್ನು ಮನೆಗೆ ತಲುಪಿಸಿದರೆ ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯವಿದೆ ಎಂದು ಹೇಳಿದರು.
ತಾಲೂಕುಗಳ ವ್ಯವಸ್ಥೆ ಪರಿಶೀಲನೆ:
ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ವ್ಯವಸ್ಥಿತವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಪರಿಶೀಲನೆಗೆ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಅಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಭೆಯನ್ನು ನಡೆಸಲಾಗುವುದು ಎಂದರು.
ಕಂಟೈನ್‍ಮೆಂಟ್ ವಲಯ:
ಸರ್ಕಾರದ ಮಾರ್ಗಸೂಚಿ ಪ್ರಕಾರ ನಿಗದಿತ ಸಂಖ್ಯೆಯ ಕರೋನಾ ಪಾಸಿಟಿವ್ ಕಂಡು ಬರುವ ಪ್ರದೇಶವನ್ನು ಕಂಟೈನ್‍ಮೆಂಟ್ ವಲಯ ಎಂದು ಗುರುತಿಸಲಾಗುವುದು. ಅಂತಹ ಕಡೆಗಳಲ್ಲಿ ಅಗತ್ಯವಿದ್ದರೆ ಸ್ಥಳೀಯಾಡಳಿತದಿಂದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದರು.
ರೆಮಿಡಿಸಿಯರ್ ಕೃತಕ ಬೇಡಿಕೆ ಸೃಷ್ಟಿಸಬೇಡಿ:
ಕರೋನಾ ಪಾಸಿಟಿವ್ ವ್ಯಕ್ತಿಗಳಿಗೆ ರೆಮಿಡಿಸಿಯರ್ ನೀಡಿದರೆ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ ಎಂಬುವುದಕ್ಕೆ ಆಧಾರವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯ ರೋಗಿಗಳ ಅಂಕಿಅಂಶಗಳನ್ನು ನೋಡಿದರೆ ಸಹ ಇದು ಸ್ಪಷ್ಟವಾಗುತ್ತದೆ. ಜಿಲ್ಲೆಯಲ್ಲಿ ಇದುವರೆಗೆ ಗುಣಮುಖರಾಗಿರುವ ಶೇ.80ರಷ್ಟು ಮಂದಿಗೆ ಈ ಇಂಜೆಕ್ಷನ್ ನೀಡಲಾಗಿರಲಿಲ್ಲ ಎಂಬುವುದನ್ನು ಗಮನಿಸಬೇಕಾಗಿದೆ. ಅದೇ ರೀತಿ ಕರೋನಾದಿಂದ ಸಾವಿಗೀಡಾದ ಎಲ್ಲಾ 15ಮಂದಿಗೂ ಸದರಿ ಇಂಜೆಕ್ಷನ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಜ್ಞ ವೈದ್ಯರ ಸಲಹೆ ಅನುಸರಿಸಬೇಕು ಎಂದು ಅವರು ಮನವಿ ಮಾಡಿದರು.
ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀಪ್ರಸಾದ್ ಅವರು ಮಾತನಾಡಿ, ಲಾಕ್‍ಡೌನ್ ಕುರಿತು ಸಾರ್ವಜನಿಕರಿಗೆ ಅಟೋ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ವಾರಾಂತ್ಯ ಕಫ್ರ್ಯೂ ಅವಧಿಯಲ್ಲಿ ಜನತೆ ಉತ್ತಮವಾಗಿ ಸಹಕಾರ ನೀಡಿದ್ದು, ಮಾರ್ಗಸೂಚಿ ಉಲ್ಲಂಘಿಸಿದ ಪ್ರಕರಣಗಳಲ್ಲಿ ದಂಡ ಹಾಗೂ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post