ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾಯಿ ಕಡಿದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಕೂಡಲೇ ವೈದ್ಯರ ಮಾರ್ಗದರ್ಶನದಂತೆ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ ಹೇಳಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವದಿಂದ ರೇಬಿಸ್ ಕಾಯಿಲೆಯ ಗುಣಲಕ್ಷಣಗಳು ಮತ್ತು ನಿಯಂತ್ರಣ ಕುರಿತು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ನಾಯಿ ಕಚ್ಚಿದ ತಕ್ಷಣ ಗಾಯವನ್ನು ಸೋಪು ಮತ್ತು ನೀರಿನಿಂದ ಸತತ 15 ನಿಮಿಷಗಳ ಕಾಲ ತೊಳೆಯುವುದರಿಂದ ಶೇ 80 ರಷ್ಟು ರೇಬಿಸ್ ಬರದಂತೆ ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.
ರೇಬಿಸ್ ಕಾಯಿಲೆಯು ಲಿಸ್ಸಾ ವೈರಸ್ ಸೋಂಕಿನಿಂದ ಉಂಟಾಗುವ ಮೆದುಳು ಮತ್ತು ನರಮಂಡಲಕ್ಕೆ ಸಂಬಂಧಿಸಿದ ಕಾಯಿಲೆಯಾಗಿದೆ. ಕಾಯಿಲೆ ಗುಣಲಕ್ಷಣಗಳು ಕಾಣಿಸಿಕೊಂಡ ನಂತರ ಬದುಕುಳಿಯಲು ಸಾಧ್ಯವಿಲ್ಲದ ಭಯಾನಕ ಕಾಯಿಲೆ ಆಗಿದೆ. ಇದು ಸೋಂಕಿತ ನಾಯಿ ಕಚ್ಚುವುದರಿಂದ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ ಎಂದರು.
Also read: ತಪ್ಪು ಮಾಹಿತಿ ಹರಡಿದವರ ವಿರುದ್ಧ ಹಿರಿಯ ನಟಿ ವೀಣಾ ಕಪೂರ್ ಪ್ರಕರಣ ದಾಖಲು
ಪ್ರತಿ ವರ್ಷ ವಿಶ್ವದ 150 ರಾಷ್ಟ್ರಗಳಲ್ಲಿ 59000 ಜನರು ರೇಬಿಸ್ ನಿಂದ ಮರಣ ಹೊಂದುತ್ತಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ 20000 ಜನರು ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ನಾಯಿ ಕಚ್ಚಿದ ತಕ್ಷಣ ಗಾಯವನ್ನು ಸೋಪು ಮತ್ತು ಹರಿಯುವ ನೀರಿನಿಂದ ಸ್ವಚ್ಚವಾಗಿ ತೊಳೆದು, ನಂಜು ನಿರೋಧಕಗಳಾದ ಡೆಟಾಲ್ ಅಥವಾ ಪಾವಿಡೋನ್ ಅಯೋಡಿನ್ ಹಚ್ಚುವುದರ ಜೊತೆಗೆ ವೈದ್ಯರನ್ನು ಭೇಟಿ ಮಾಡಿ ರೇಬಿಸ್ ರೋಗ ನಿರೋಧಕ ಲಸಿಕೆಯನ್ನು 0, 3, 7, 14 ಮತ್ತು 28ನೇ ದಿನದಂದು ತಪ್ಪದೇ ಪಡೆಯುವ ಮೂಲಕ ಭಯಾನಕ ಕಾಯಿಲೆಯಿಂದ ರಕ್ಷಣೆ ಪಡೆಯಬೇಕೆಂದು ಸಲಹೆ ನೀಡಿದರು. ಉಪನ್ಯಾಸದ ನಂತರ ಸಂವಾದದಲ್ಲಿ ಭಾಗವಹಿಸಿ ಸಾರ್ವಜನಿಕರ ಪ್ರಶ್ನೆಗಳಿಗೆ ಸರಳ ಮತ್ತು ಸೂಕ್ತ ಸಲಹೆಗಳ ಮೂಲಕ ಉತ್ತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷೆ ಸುಮತಿ ಜಿ ಕುಮಾರಸ್ವಾಮಿ ಮಾತನಾಡಿ, ನಗರದಲ್ಲಿ ಇತ್ತೀಚೆಗೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಆತಂಕಕಾರಿ. ಬೀದಿನಾಯಿಗಳ ನಿಯಂತ್ರಣ ಕುರಿತಂತೆ ಸೂಕ್ತ ಕ್ರಮವಹಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗದ ಅಧ್ಯಕ್ಷ ಡಾ. ಅರುಣ್ ಮೈಸೂರ್ ಮತ್ತು ಜಿಲ್ಲಾ ಒಕ್ಕಲಿಗರ ಸಂಘ ಶಿವಮೊಗ್ಗದ ಅಧ್ಯಕ್ಷ ಹೆಚ್.ಬಿ. ಆದಿಮೂರ್ತಿ, ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ಕುಮಾರಸ್ವಾಮಿ, ಮಾಜಿ ಸಹಾಯಕ ಗವರ್ನರ್‌ಗಳಾದ ಜಿ. ವಿಜಯಕುಮಾರ್, ಚಂದ್ರಹಾಸ್ ಪಿ ರಾಯ್ಕರ್, ರೋಟರಿ ಶಿವಮೊಗ್ಗ ಪೂರ್ವದ ಕಡಿದಾಳ್ ಗೋಪಾಲ್, ಡಾ.ಪರಮೆಶ್ವರ್ ಡಿ. ಶಿಗ್ಗಾಂವ್, ಎನ್. ಹೆಚ್. ಶ್ರೀಕಾಂತ್, ಅರಣ್ ದಿಕ್ಷಿತ್, ಚಂದ್ರಶೇಖರಯ್ಯ, ಸತೀಶ್ ಚಂದ್ರ, ಸಂತೋಷ್, ಕೃಷ್ಣಮೂರ್ತಿ, ಮುಕುಂದೇಗೌಡ, ಕೇಶವಪ್ಪ, ಇನ್ನರ್ ವೀಲ್ ಕ್ಲಬ್‌ನ ಮಾಜಿ ಅಧ್ಯಕ್ಷೆ ರೂಪ ಗುಡದಪ್ಪ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post