ಶಿವಮೊಗ್ಗ: ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಘವೇಂದ್ರ ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಆಧಾರದಲ್ಲಿ ಭರ್ಜರಿ ಜಯ ದೊರೆಯಲಿದೆ ಎಂದಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಬಿಜೆಪಿ ಪ್ರಮುಖರಿಗೆ 1800 ಕೋಟಿ ಹಣವನ್ನು ಹಂಚಿದ್ದಾರೆ ಎಂಬ ಅನಾವಶ್ಯಕವಾಗಿಗಂಭೀರ ಆರೋಪ ಮಾಡಿರುವ ರಾಷ್ಟ್ರೀಯ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಪೋರ್ಜರಿ ಡೈರಿಯನ್ನು ಸೃಷ್ಟಿಸಿ ಆಧಾರ ರಹಿತ ಆರೋಪ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ಮುಂದಿನ ದಿನದಲ್ಲಿ ಬಿಜೆಪಿ ಇವರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಲು ಕಾನೂನು ರೀತಿಯ ಹೋರಾಟ ನಡೆಸಲಿದೆ. ಡಿ.ಕೆ. ಶಿವಕುಮಾರ್ ಅವರು ವರಮಾನ ತೆರಿಗೆ ವಂಚನೆ ಅಕ್ರಮ ಹಣ ಹೂಡಿಕೆ ಪ್ರಕರಣ ಸಿಲುಕಿದ್ದು, ಕೋಟ್ಯಂತರ ರೂಪಾಯಿ ಹಣ ತೆರಿಗೆ ದಾಳಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಈ ರೀತಿಯ ಗಂಭೀರ ಸ್ವರೂಪದ ಆರೋಪವನ್ನು ಹೊತ್ತಿರುವ ಡಿಕೆ ಶಿವಕುಮಾರ್ ಅವರನ್ನು ಏಕೆ ಸರ್ಕಾರದಲ್ಲಿ ಮಂತ್ರಿಯನ್ನಾಗಿ ಮುಂದುವರೆಸಿದ್ದಾರೆ. ಅದೇ ರೀತಿ ಸಚಿವ ವೆಂಕಟರಾವ್ ನಾಡಗೌಡ 24 ಎಕರೆ ಸರ್ಕಾರಿ ಭೂಮಿ ಕಬಳಿಕೆ ಮಾಡಿದ್ದು ಜಿಲ್ಲಾಧಿಕಾರಿ ಅದನ್ನು ವಶಪಡಿಸಿಕೊಂಡಿದ್ದಾರೆ ಎಂದರು.
ಈ ಹಿಂದೆ ವಿಧಾನಸೌಧದ ಆವರಣದಲ್ಲಿ ಸಚಿವರೊಬ್ಬರಿಗೆ ಸೇರಿದ ಕೋಟಿಗಟ್ಟಲೆ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇಂಥವರನ್ನು ಕಾಂಗ್ರೆಸ್ ಪಕ್ಷ ಮತ್ತು ಸಮ್ಮಿಶ್ರ ಸರ್ಕಾರ ಏಕೆ ಇಟ್ಟುಕೊಂಡಿದೆ. ಭ್ರಷ್ಟಾಚಾರ ಮಾಡುವವರು ಇವರು ಇಂಥವರನ್ನು ಏಕೆ ಸಚಿವ ಸ್ಥಾನದಿಂದ ಕೈ ಬಿಡುವುದಿಲ್ಲ. ಇವರು ಚುನಾವಣೆ ಬಂದಾಗ ಕಾಂಗ್ರೆಸ್ಸಿನವರು ಅನುಕೂಲ ಸಿಂಧು ರಾಜಕಾರಣವನ್ನು ಮಾಡುತ್ತಿದ್ದು ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಸುಭಾಷ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಅರುಣ್, ಮಾಜಿ ಶಾಸಕ ಕುಮಾರಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಬಿ.ಆರ್. ಮಧುಸೂದನ್, ಜಿಲ್ಲಾ ಮಾಧ್ಯಮ ಪ್ರಮುಖ್ ಪಿ. ರತ್ನಾಕರ ಶೆಣೈ, ಹಿರಣ್ಣಯ್ಯ ಉಪಸ್ಥಿತರಿದ್ದರು.
Discussion about this post