ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಲಸೆ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ್ ಪೋರ್ಟಲ್‍ನಲ್ಲಿ ನೋಂದಾಯಿಸುವ ಕಾರ್ಯ ನಡೆಯುತ್ತಿದ್ದು, ಈ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ದತ್ತಾಂಶ (ಇ-ಶ್ರಮ್) ಅನುಷ್ಟಾನ ಕುರಿತು ಸಭೆ ನಡೆಸಿದರು.
ಆಧಾರ್ ಸಂಖ್ಯೆಗೆ ಜೋಡಣೆಯಾದ ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ದತ್ತಾಂಶವನ್ನು ಸಿದ್ಧಪಡಿಸಲು www.eshram.gov.in ಇ-ಶ್ರಮ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ. ಇದು ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳನ್ನು ವಿಸ್ತರಿಸಲು ಅನುಕೂಲವಾಗುವಂತೆ ಕಾರ್ಮಿಕರ ಹೆಸರು, ವಿಳಾಸ, ವಿದ್ಯಾರ್ಹತೆ, ಕೌಶಲ್ಯದ ವಿಧ, ಕುಟುಂಬದ ವಿವರ, ಬ್ಯಾಂಕ್ ಖಾತೆ ವಿವರ ಇತ್ಯಾದಿ ವಿವರಗಳನ್ನು ಹೊಂದಿರುತ್ತದೆ. ಕಾರ್ಮಿಕರು ನೇರವಾಗಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಸಹ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಹೇಳಿದರು.
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಮೀನುಗಾರರು, ಆಶಾ ಕಾರ್ಯಕರ್ತೆಯರು, ಮನೆಗೆಲಸ ಕಾರ್ಮಿಕರು, ಚಾಲಕರು, ಟೈಲರ್‍ಗಳು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಕೇಂದ್ರ ಸರ್ಕಾರ ಗುರುತಿಸಿರುವ 156 ವರ್ಗಗಳ ಕಾರ್ಮಿಕರು ಹಾಗೂ ಈ ಪಟ್ಟಿಯಲ್ಲಿ ಸೇರಿರದ ಅಸಂಘಟಿತ ಕಾರ್ಮಿಕರು `ಇತರ ವರ್ಗ’ ಗಳ ಅಡಿಯಲ್ಲಿ ನೋಂದಣಿ ಮಾಡಬಹುದಾಗಿದೆ. ಈ-ಶ್ರಮ್ ಪೋರ್ಟಲ್‍ನಲ್ಲಿ ನೋಂದಣಿ ಉಚಿತವಾಗಿದ್ದು, ಯಶಸ್ವಿ ನೋಂದಣಿಯ ನಂತರ ಫಲಾನುಭವಿಗಳು ಸ್ಥಳದಲ್ಲಿಯೇ ಗುರುತಿನ ಚೀಟಿಯನ್ನು ಪಡೆಯಬಹುದು. ಇದು ಜೀವಿತಾವಧಿಯ ಮಾನ್ಯತೆ ಹೊಂದಿರುತ್ತದೆ ಎಂದು ಹೇಳಿದರು.
ನೋಂದಾಯಿಸುವವರು 16ರಿಂದ 59 ವಯೋಮಾನದ ಒಳಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಭವಿಷ್ಯ ನಿಧಿ ಹಾಗೂ ಇ.ಎಸ್.ಐ. ಫಲಾನುಭವಿಯಾಗಿರಬಾರದು. ನೋಂದಣಿಗೆ ಆಧಾರ್ ಕಾರ್ಡ್, ಆಧಾರ್ ಕಾರ್ಡ್‍ಗೆ ಜೋಡಣೆಯಾದ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳನ್ನು ಒದಗಿಸಬೇಕು. ನೋಂದಣಿಗೆ ನೆರವಾಗಲು ಇ-ಶ್ರಮ್ ಸಹಾಯವಾಣಿ 14434 ಸಂಪರ್ಕಿಸಬಹುದಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಭೀಮೇಶ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post