ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅ.25ರಿಂದ 28ರವರೆಗೆ ನಾಲ್ಕು ದಿನಗಳ ಕಾಲ ನಗರದ ನವುಲೆ ಕೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ಗೋವಾ ತಂಡಗಳ ನಡುವೆ ರಣಜಿ ಟ್ರೋಫಿ ಪಂದ್ಯಾವಳಿಯನ್ನು #Ranaji Trophy ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ)ವತಿಯಿಂದ ಆಯೋಜಿಸಲಾಗಿದ್ದು, ಉದಯೋನ್ಮುಖ ಪ್ರಸಿದ್ಧ ಕ್ರಿಕೆಟ್ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿವಮೊಗ್ಗ ವಲಯದ ಹಿಂದಿನ ವಲಯ ಸಂಚಾಲಕರು ಹಾಗೂ ಎಂಎಲ್‍ಸಿ ಡಿ.ಎಸ್. ಅರುಣ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.25ರಂದು ಬೆಳಿಗ್ಗೆ 8.45ಕ್ಕೆ ಸರಿಯಾಗಿ ಟಾಸ್ಕ್ ಹಾಕಲಾಗುವುದು. 9.30ಕ್ಕೆ ಮೊದಲ ಬಾಲ್ ಹಾಕುವುದರ ಮೂಲಕ ಚಾಲನೆ ದೊರೆಯಲಿದೆ. ಉದ್ಘಾಟನಾ ಕಾರ್ಯಕ್ರಮ ಸಾಂಕೇತಿಕವಾಗಿ ನಡೆಯಲಿದ್ದು, ಈಗಾಗಲೇ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಧನಂಜಯ ಸರ್ಜಿ ಆಗಮಿಸಲಿದ್ದಾರೆ ಎಂದರು.
ರಣಜಿ ಟ್ರೋಫಿ ಭಾರತೀಯ ಕ್ರಿಕೆಟ್‍ನ ರಾಷ್ಟ್ರೀಯ ಮಟ್ಟದ ಅತ್ಯಂತ ಪ್ರಾಚೀನ ಪ್ರಥಮ ದರ್ಜೆ ಕ್ರಿಕೆಟ್ ಸ್ಪರ್ಧೆಯಾಗಿದ್ದು, 1934ರಲ್ಲಿ ಬಿಸಿಸಿಐ ಇದಕ್ಕೆ ಭಾರತ ಕ್ರಿಕೆಟ್ ಚಾಂಪಿಯನ್ ಶಿಪ್ ಎಂಬ ಹೆಸರನ್ನು ಕೊಟ್ಟಿತ್ತು. ನಂತರ ಖ್ಯಾತ ಕ್ರಿಕೆಟ್ ಆಟಗಾರ ರಂಜಿತ್‍ಸಿಂಗ್ ಸ್ಮರಣಾರ್ಥ ರಣಜಿ ಟ್ರೋಫಿ ಎಂದು ನಾಮಕರಣ ಮಾಡಿದ್ದು, ಕ್ರಿಕೆಟಿಗರಿಗೆ ಒಂದು ಹಬ್ಬದ ವಾತಾವರಣ ಈ ರಣಜಿ ಕ್ರಿಕೆಟ್‍ನಲ್ಲಿ ದೊರೆಯಲಿದೆ ಎಂದರು.
ರಣಜಿ ಟ್ರೋಫಿ ಭಾರತೀಯ ಕ್ರಿಕೆಟ್‍ನ ವಿಶಾಲ ಸಂಸ್ಕøತಿಯ ಪ್ರತೀಕವಾಗಿ ಪ್ರತಿಭಾವಂತ ಯುವ ಕ್ರಿಕೆಟಿಗರಿಗೆ ಅಂತರಾಷ್ಟ್ರೀಯ ಮಟ್ಟದ ವೇದಿಕೆ ಕಲ್ಪಿಸುವ ನೆಲೆಯಾಗಿದೆ. ಶಿವಮೊಗ್ಗದಲ್ಲಿ ನಡೆಯುವ ಈ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ ತಂಡದಲ್ಲಿ ನಾಯಕರಾಗಿ ಮಯಾಂಕ್ ಅಗರ್‍ವಾಲ್, ಉಪನಾಯಕರಾಗಿ ತರುಣ್‍ನಾಯಕ್, ವಿಕೇಟ್ ಕೀಪರ್ ಆಗಿ ಶ್ರೀಜಿತ್ ಕೆ.ಎಲ್. ಹಾಗೂ ಶ್ರೇಯಸ್ ಗೋಪಾಲ್, ಸ್ಮರಣ್ ಆರ್., ವಿದ್ವತ್ ಕಾವೇರಪ್ಪ, ಯಶೋವರ್ಧನ್ ಪರಾಂತಪ, ಅಭಿಲಾಷ್‍ಶೆಟ್ಟಿ, ವೆಂಕಟೇಶ್ ಎಂ., ನಿಖಿನ್ ಜೋಷ್, ಅಭಿನವ್ ಮನೋಹರ್, ಕೃತಿಕ್ ಕೃಷ್ಣ, ಅನೀಷ್ ಕೆ.ವಿ., ಮೌಸಿನ್‍ಖಾನ್, ಶಿಖರಶೆಟ್ಟಿ ಹಾಗೂ ಗೋವಾ ತಂಡದಲ್ಲಿ ನಾಯಕರಾಗಿ ದೀಪ್‍ರಾಜ್ ಗಾಂವ್‍ಕರ್, ಉಪನಾಯಕರಾಗಿ ಸಮರ್ ದುಬಾಷಿ, ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್, ಲಲಿತ್ ಯಾದವ್, ಸುಯಾಸ್ ಎಸ್. ಪ್ರಭುದೇಸಾಯಿ, ಮಂಥನ್ ಕೌತುಕರ್, ಕಶ್ಯಪ್‍ಭಕ್ಲೆ, ದರ್ಶನ್ ನಿಸಾಲ್, ಮೋಹಿತ್ ರೆಡ್ಕರ್, ಅಭಿನವ್ ತೇಜರಾಣ, ಹೀರಂಬಪರಾಬೆ, ವಿಕಾಸ್‍ಸಿಂಗ್, ಈಶಾನ್‍ಗಡೇಕರ್, ರಾಜಶೇಖರ್ ಹರಿಕಾಂತ್, ವಿಜೇಶ್ ಪ್ರಭುದೇಸಾಯ್, ವಾಸುಕಿ ಕೌಶಿಕ್, ಸ್ನೇಹಲ್ ಕೌತನ್ಕರ್ ಭಾಗವಹಿಸಲಿದ್ದಾರೆ ಎಂದರು.
ನವುಲೆ ಕ್ರೀಡಾಂಗಣಕ್ಕೆ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ಒದಗಿಸಿದ್ದು, ಒಂದು ಒಳಾಂಗಣ ಕ್ರೀಡಾಂಗಣದ ಅವಶ್ಯಕತೆಯಿದ್ದು, ಅದರ ಬಗ್ಗೆ ಜನಪ್ರತಿನಿಧಿಗಳಿಗೆ ಈಗಾಗಲೇ ಗಮನಕ್ಕೆ ತರಲಾಗಿದೆ ಎಂದರು.
ಶಿವಮೊಗ್ಗ ವಲಯ ಸಂಚಾಲಕರಾದ ಹೆಚ್.ಎಸ್. ಸದಾನಂದ ಮಾತನಾಡಿ, ಕ್ರೀಡಾಕೂಟಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ. ಈ ಭಾಗದ ಕ್ರಿಕೇಟ್ ಪ್ರೇಮಿಗಳಿಗೆ ಒಂದು ಸದಾವಕಾಶವಾಗಿದ್ದು, ಎಲ್ಲಾ ಕ್ರಿಕೇಟ್ ಅಕಾಡೆಮಿಗಳನ್ನು ಮತ್ತು ಶಾಲಾ-ಕಾಲೇಜುಗಳನ್ನು ಸಂಪರ್ಕಿಸಲಾಗಿದ್ದು, ಕ್ರಿಕೆಟಿಗರಿಗೆ ಒಂದು ಒಳ್ಳೆಯ ಅವಕಾಶವಾಗಿದ್ದು ಕುಳಿತುಕೊಂಡು ಪಂದ್ಯ ವೀಕ್ಷಿಸಲು ಗ್ಯಾಲರಿ ನಿರ್ಮಾಣವಾಗಿದೆ ಎಂದರು. ಮಳೆಯ ನೀರು ಕ್ರೀಡಾಂಗಣದಲ್ಲಿ ನಿಲ್ಲದೆ ಇರಲು ಈಗಾಗಲೇ ಪಾಲಿಕೆಯ ಸಹಯೋಗದಲ್ಲಿ ಸೂಕ್ತಕ್ರಮ ಕೈಗೊಳ್ಳಲಾಗಿದೆ. ಯಾವುದೇ ಆತಂಕಬೇಡ. ಕೆಎಸ್‍ಸಿಎ ನವುಲೆ ಕ್ರೀಡಾಂಗಣ ಒಂದು ಉತ್ತಮ ಕ್ರೀಡಾಂಗಣ ಎಂಬ ಖ್ಯಾತಿ ಪಡೆದಿದ್ದು, ರಾಷ್ಟ್ರೀಯ, ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಕೂಟಗಳು ನಡೆದಿದ್ದು, ಮುಂದೆ ಕೂಡ ನಡೆಯಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರಮುಖರಾದ ರಾಜೇಶ್ ಕಾಮತ್, ಬಿ.ಆರ್. ನಾಗರಾಜ್, ಐಡಿಯಲ್ ಗೋಪಿ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post