ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಮುದ್ರಣ ಸಾಮಗ್ರಿಗಳ ಬೆಲೆ ಏರಿಕೆಯಾಗಿರುವುದರಿಂದ ಆಹ್ವಾನ ಪತ್ರಿಕೆ, ಸ್ಟ್ಯಾಂಪಿಂಗ್, ಮೊದಲಾದ ಮುದ್ರಣಗಳ ದರಗಳನ್ನ ಹೆಚ್ಚಿಸಲಾಗುತ್ತಿದೆ ಎಂದು ಮಲೆನಾಡು ಮುದ್ರಕರ ಸಂಘದ ಅಧ್ಯಕ್ಷ ಮಾಧವಾಚಾರ್ ಹೇಳಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುದ್ರಣದ ಕಚ್ಚಾ ವಸ್ತುಗಳ ಏರಿಕೆಯಿಂದಾಗಿ ಮಾಮೂಲಿಯಾಗಿದ್ದ ದರಕ್ಕಿಂತ ಶೇ.10ರಷ್ಟು ಹೆಚ್ಚಿಸಕಾಗಿದೆ. ಕೊರೋನಾದಿಂದ ಕಳೆದ ಒಂದು ವರ್ಷದಲ್ಲಿ ಕೆಲಸ ನಿರ್ವಹಿಸಲಾಗದೇ, ಸಾಲದ ಕಂತುಗಳನ್ನು ಕಟ್ಟಲಾಗದೆ, ಸರ್ಕಾರದ ಯಾವುದೇ ಸಹಾಯವೂ ಸಿಗದೇ ಮುದ್ರಣಾಲಯಗಳನ್ನು ಮುಚ್ಚಬೇಕಾದ ಅನಿವಾರ್ಯತೆ ಎದುರಾಗಿತ್ತು ಎಂದು ತಿಳಿಸಿದರು.
ಕಾರ್ಮಿಕರಿಗೆ ಸಂಬಳ ಕೊಡಲಾಗದಿದ್ದ ಸಂದರ್ಭದಲ್ಲಿ ಸುಮಾರು 70 ಜನ ಮುದ್ರಣ ಕಾರ್ಮಿಕರಿಗೆ ಸಂಘದ ವತಿಯಿಂದ ಪರಿಹಾರದ ಕಿಟ್‌ಗಳನ್ನು ವಿತರಿಸಿ ಸಂಘವು ಸಹಾಯಹಸ್ತ ಚಾಚಿದೆ. ಎಷ್ಟೇ ಕಷ್ಟಗಳು ಎದುರಾದರೂ ಕಾರ್ಮಿಕರನ್ನು ಕೈಬಿಡದೇ ಸಾಧ್ಯವಿದ್ದಷ್ಟು ದಿನವೂ ಸಂಬಳ ನೀಡಿ ಮುದ್ರಣಾಲಯಗಳು ಸಲಹಿವೆ ಎಂದರು.
ಇತ್ತ ಕೊರೋನಾ ಸಂಕಷ್ಟಗಳು ಮರೆಯಾಗಿ ಮುದ್ರಣ ಕ್ಷೇತ್ರ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಪೆಟ್ರೋಲ್ ಉತ್ಪನ್ನಗಳ ಬೆಲೆ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಮುದ್ರಣ ಕಾಗದ ಹಾಗೂ ಮುದ್ರಣಕ್ಕೆ ಬಳಸುವ ಸಾಮಗ್ರಿಗಳಾದ ಕೆಮಿಕಲ್ಸ್, ಇಂಕು ಇತ್ಯಾದಿಗಳ ಬೆಲೆಗಳು ದಿಢೀರನೆ ಶೇ 25 ರಿಂದ 30 ವರೆಗೆ ಏರಿಕೆಯಾಗಿವೆ ಎಂದರು.
ಮುದ್ರಕರು ಈ ಬೆಳವಣಿಗೆಯಿಂದ ಕಂಗಾಲಾಗಿದ್ದಾರೆ. ಬೆಲೆ ಏರಿಕೆಯೆಂಬ ಮಹಾಮಾರಿ ನಮ್ಮನ್ನು ಚಿಂತೆಗೀಡು ಮಾಡುತ್ತಿದೆ. ಹಿಂದೆ ಪ್ರತಿ ಕೆಜಿಗೆ 40 ರೂ. ನಿಂದ 42 ರವರೆಗೆ ಸಿಗುತ್ತಿದ್ದ ವೈಟ್ ಪೀಪಲ್ ಇಂದು 63ರೂ. ಆಗಿದೆ. ಇದೇ ರೀತಿ ಕೋಟೆಡ್ ಆರ್ಟ್ ಪೇಪರ್‌ಗಳು ಪ್ರತಿ ಕೆಜಿಗೆ 60ರೂ. ನಿಂದ 85 ರೂಗಳಿಗೆ ಏರಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಎಲ್ಲಾ ರೀತಿಯ ಮುದ್ರಣ ಸಾಮಗ್ರಿಗಳು, ಬೈಂಡಿಂಗ್ ಸಾಮಗ್ರಿಗಳು ಏಕಾಏಕಿ ಏರಿಕೆಯಾಗಿದೆ. ಈ ಕಾರಣದಿಂದಾಗಿ ಈವರೆಗೆ ನಾವು ನಮ್ಮ ಗ್ರಾಹಕರಿಗೆ ಒದಗಿಸುತ್ತಿದ್ದ ಸೇವೆಯ ದರಗಳಲ್ಲಿ ಕೊಂಚ ಏರಿಕೆಯಾಗಲಿದೆ. ಅದಕ್ಕಾಗಿ ಮುದ್ರಕ ಸಂಘವು ಎಲ್ಲಾ ಮುದ್ರಣಾಲಯಗಳಿಗೆ ಏಕರೂಪದ ದರಪಟ್ಟಿಯನ್ನು ನಿಗದಿಪಡಿಸಿದೆ ಎಂದು ತಿಳಿಸಿದರು.
ಮುದ್ರಣಾಲಯಗಳವರು ತಮಗೆ ಸಂಘದಿಂದ ನೀಡಲಾಗಿರುವ ದರಪಟ್ಟಿಯನ್ನು ಅಳವಡಿಸಿಕೊಂಡು ಸಂಘದ ನಿಬಂಧನೆಗಳಿಗೆ ಬದ್ಧರಾಗಿ ಸಹಕಾರ ನೀಡಬೇಕು ಹಾಗೂ ಗ್ರಾಹಕರು ಇಂದಿನ ಬೆಲೆ ಏರಿಕೆಯ ಅನಿವಾರ್ಯತೆ ಮನಗಂಡು ಮುದ್ರಣಾಲಯಗಳೊಂದಿಗೆ ಸಹಕರಿಸಬೇಕೆಂದು ಸಂಘ ಮನವಿ ಮಾಡಿಕೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post