ಶಿವಮೊಗ್ಗ: ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯಕ್ಕಾಗಿ ನಿಯಮಿತ ವೈದ್ಯಕೀಯ ತಪಾಸಣೆ ಪ್ರತಿಯೊಬ್ಬರಿಗೂ ಅಗತ್ಯ ಎಂದು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ.ಲತಾ ನಾಗೇಂದ್ರ ಸಲಹೆ ನೀಡಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಸೀಗೆಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಪುರದಾಳು ಗ್ರಾಮ ಪಂಚಾಯ್ತಿ ಆವರಣದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.
ದೇಶದ ಎಲ್ಲ ನಾಗರಿಕರಿಗೂ ಶಿಕ್ಷಣ ಮತ್ತು ಆರೋಗ್ಯ ದೊರೆಯುವಂತಾಗಬೇಕು. ಇದರ ಪ್ರಮುಖ ಭಾಗವಾಗಿ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸಂರಕ್ಷಣೆಯ ಕುರಿತು ಜಾಗೃತಿ ಅಗತ್ಯ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ವಿದ್ಯಾವಂತ ಯುವಕ ಯುವತಿಯರು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಗ್ರಾಮದಲ್ಲಿನ ಚರಂಡಿ ವ್ಯವಸ್ಥೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವ ಜೊತೆಯಲ್ಲಿ ಸುತ್ತಲಿನ ಪ್ರದೇಶಗಳನ್ನು ಶುಭ್ರವಾಗಿಟ್ಟುಕೊಳ್ಳುವ ಮೂಲಕ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಬಹುದಾಗಿದೆ. ಇನ್ನು, ಸಹಜವಾದ ಆಹಾರ ಪದ್ಧತಿಯಿಂದ ಮನುಷ್ಯ ರೋಗಗಳಿಗೆ ತುತ್ತಾಗುವುದನ್ನು ನಿಯಂತ್ರಿಸಬಹುದು ಎಂದರು.
ಸೀಗೆಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರೇಣುಕಾ ಅವರು ಮಾತನಾಡಿ, ಸರ್ಕಾರ ಆರೋಗ್ಯ ಇಲಾಖೆ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ. ಆರೋಗ್ಯ ಕೇಂದ್ರಗಳ ಸೌಲಭ್ಯಗಳಿಂದ ವಂಚಿತವಾಗದಂತೆ ಪ್ರತಿ ತಿಂಗಳು ಪ್ರಾಥಮಿಕ ಆರೋಗ್ಯ ಕೇಂದ್ರವು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತದೆ. ಶಿಬಿರದಲ್ಲಿ ಅಗತ್ಯವಿರುವ ತಜ್ಞ ವೈದ್ಯರುಗಳು ಭಾಗವಹಿಸಿರುತ್ತಾರೆ. ಸಾರ್ವಜನಿಕರು ಆರೋಗ್ಯ ಸಂಬಂಧಿ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸಲು ಸಹಕಾರಿಯಾಗಬೇಕು ಎಂದರು.
ಸುಬ್ಬಯ್ಯ ವೈದ್ಯಕೀಯ ಕಾಲೇಜು ವತಿಯಿಂದ ಜನರ ಆರೋಗ್ಯಕ್ಕಾಗಿ ಕೈಗೊಳ್ಳುತ್ತಿರುವ ಹಲವು ಕಾರ್ಯಕ್ರಮಗಳು ನಮಗೂ ಸಹ ಸಹಕಾರ ನೀಡಿದೆ. ಕಾಲೇಜಿನ ಮುಖ್ಯಸ್ಥರು ಹಾಗೂ ವೈದ್ಯರುಗಳ ನಿರಂತರ ಸಹಕಾರ ನಮಗೆ ನಮ್ಮ ಕರ್ತವ್ಯ ನಿರ್ವಹಿಸಲು ಮತ್ತಷ್ಟು ಶಕ್ತಿಯನ್ನು ನೀಡಿದೆ ಎಂದು ಶ್ಲಾಘಿಸಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ ಈಶ್ವರಪ್ಪ ಮಾತನಾಡಿ, ಗ್ರಾಮದ ಎಲ್ಲ ನಾಗರೀಕರು ಆರೋಗ್ಯವಂತರಾಗಿರಬೇಕು. ಆರೋಗ್ಯದಿಂದ ಸದೃಡವಾಗಿದ್ದರೆ ಕುಟುಂಬ ನಿರ್ವಹಣೆ ಸುಲಭವಾಗುತ್ತದೆ. ಅನಾರೋಗದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ತಿಳಿಸಿದರು.
ಸಾಮಾನ್ಯವಾಗಿ ಯಾವುದೇ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳ ಆಯೋಜಿಸುವ ಶಿಬಿರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳು ಪಾಲ್ಗೊಳ್ಳುತ್ತಾರೆ. ಆದರೆ, ಇಂದು ಪುರದಾಳಿನಲ್ಲಿ ಆಯೋಜಿಸಲಾಗಿದ್ದ ಶಿಬಿರದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ.ಲತಾ ನಾಗೇಂದ್ರ ಅವರು ಸ್ವತಃ ಪಾಲ್ಗೊಂಡು ವೈದ್ಯಕೀಯ ಪರೀಕ್ಷೆ ನಡೆಸಿ, ವೈಯಕ್ತಿಕ ಆರೋಗ್ಯ ಸಲಹೆಗಳನ್ನು ನೀಡಿದ್ದು ವಿಶೇಷ. ಒಂದು ಬೃಹತ್ ವೈದ್ಯಕೀಯ ಕಾಲೇಜಿನ ಮುಖ್ಯಸ್ಥರಾಗಿದ್ದೂ, ಯಾವುದೇ ಹಮ್ಮುಬಿಮ್ಮುಗಳಿಲ್ಲದೇ ತಮ್ಮ ಕರ್ತವ್ಯ ನಿರ್ವಹಿಸಿ ಇವರಿಗೆ ಗ್ರಾಮಸ್ಥರಿಂದ ವ್ಯಾಪಕ ಪ್ರಶಂಸೆ ದೊರೆತಿದೆ.
ಶಿಬಿರದಲ್ಲಿ ಪುರುದಾಳು ಗ್ರಾಮ ಪಂಚಾಯ್ತಿ ಸದಸ್ಯರಾದ ವೀರಭದ್ರಪ್ಪ ಎಂ.ಜಿ. ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ವೈದ್ಯರಾದ ಡಾ.ಅಶ್ವಿನ್, ಡಾ.ನಿರಂಜನ್, ಡಾ.ವಿಶ್ವಾಸ್ ಮೊದಲಾದವರು ಭಾಗವಹಿಸಿದ್ದರು.
(ವರದಿ: ಯು.ಜೆ. ನಿರಂಜನಮೂರ್ತಿ)
Discussion about this post