ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅತಿಥಿ ಉಪನ್ಯಾಸಕರ ಸೇವಾವಿಲೀನ ಘೋಷಣೆಗೆ ಆಗ್ರಹಿಸಿ ಇಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ವತಿಯಿಂದ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು ನಗರದ ಅಂಬೇಡ್ಕರ್ ಭವನದಿಂದ ಪತ್ರಿಕಾ ಭವನದವರೆಗೆ ಪ್ರತಿಭಟನಾ ಸಭೆ ಮತ್ತು ರ್‍ಯಾಲಿ ನಡೆಸಿದರು.
ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14564 ಅತಿಥಿ ಉಪನ್ಯಾಸಕರು ಅನೇಕ ವರ್ಷಗಳಿಂದ ನಿಯಮಾನುಸಾರ ಆಯ್ಕೆಯಾಗಿ ಅತ್ಯಂತ ಕನಿಷ್ಠ ಗೌರವ ಧನ ಪಡೆದು ಕಾರ್ಯನಿರ್ವಹಿಸುತ್ತಿದ್ದಾರೆ. ಕರೋನಾ ಸಂಕಷ್ಟದಿಂದಾಗಿ ಬದುಕು ಎದುರಿಸುವ ಧೈರ್ಯ ಕಳೆದು ಕೊಂಡು 4 ಜನ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ದಾರಿ ಹಿಡಿದರೆ, 20 ಮಂದಿ ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಚಿಕಿತ್ಸೆಗೆ ಹಣವಿಲ್ಲದೆ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ, ಮೃತಪಟ್ಟಿದ್ದಾರೆ. ಅವರ ಕುಟುಂಬದವರಿಗೆ ಯಾವ ಆರ್ಥಿಕ ನೆರವು ದೊರೆಯದೆ ಕಣ್ಣೀರಿನಲ್ಲೆ ಬದುಕು ಸಾಗಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಲಾಕ್‌ಡೌನ್ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಿ, ಕೋವಿಡ್ ಮಾರ್ಗಸೂಚಿಯಂತೆ ೫ ತಿಂಗಳ ಗೌರವಧನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಡುಗಡೆ ಮಾಡಿದ್ದರು. ಆದರೆ ಆಗಸ್ಟ್‌ನಿಂದ ಇಲ್ಲಿಯವರೆಗೆ ಮತ್ತೆ ಅದೇ ಸಂಕಷ್ಟದಲ್ಲಿದ್ದೇವೆ. ಫೆಬ್ರವರಿ ಮತ್ತು ಮಾರ್ಚ್ 2 ತಿಂಗಳ ಅವಧಿಗೆ ಕೆಲಸಕ್ಕೆ ತೆಗೆದುಕೊಂಡು ಮಾರ್ಚ್ ನಿಂದ ಕೆಲಸದಿಂದ ಬಿಡುಗಡೆಮಾಡಿ ಪರೀಕ್ಷೆ ಮೌಲ್ಯಮಾಪನದಂತಹ ಕೆಲಸಕ್ಕೆ ವೇತನ ರಹಿತವಾಗಿ ದುಡಿಸಿಕೊಳ್ಳಲಾಗುತ್ತದೆ. ಇದೊಂದು ರೀತಿ ಸರ್ಕಾರಿ ಶೋಷಣೆಯ ಜೀತಗಾರಿಕೆ ಪ್ರವೃತ್ತಿಯಾಗಿದೆ. ಪ್ರಜಾಪ್ರಭುತ್ವ ಮಾದರಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡು ದಶಕಗಳಿಂದ ಅತಿಥಿ ಉಪನ್ಯಾಸಕ ಗುಲಾಮಗಿರಿಯ ಕರಿನೆರಳಲ್ಲಿ ವಿದ್ಯಾವಂತ ಸಮುದಾಯಕ್ಕೆ ಇಎಸ್‌ಐ, ಪಿಎಫ್ ನಂತಹ ಯಾವುದೇ ನೆರವು ನೀಡದೆ ಕನಿಷ್ಠ ವೇತನ ನೀಡಿ ದುಡಿಸಿಕೊಂಡು ಬಂದಿರುವುದು ಆಧುನಿಕ ಸರ್ಕಾರಿ ಜೀತಪದ್ಧತಿಯ ಪ್ರವೃತ್ತಿಯಾಗಿದ್ದು, ದೇಶದ ಭದ್ರ ಬುನಾದಿಗೆ ಗುಣಮಟ್ಟದ ಶಿಕ್ಷಣ ಅಗತ್ಯದ ಹೆಸರಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಟಾನಕ್ಕೆ ಸಾವಿರಾರೂ ಕೋಟಿ ರೂಪಾಯಿ ನೀಡಲು ಮುಂದಾಗಿರುವ ಸರ್ಕಾರ ಅತಿಥಿ ಉಪನ್ಯಾಸಕರ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡುತ್ತಿದೆ. ಸರ್ಕಾರ ಈ ಶೋಷಣೆಯ ನೀತಿಯನ್ನು ಪ್ರಸಕ್ತ ಸಾಲಿನಿಂದ ಕೊನೆಗಾಣಸಬೇಕೆಂದು ಮನವಿ ಮಾಡಿದರು.
ಎಂಟು ಸಾವಿರ ಉಪನ್ಯಾಸಕರ ನೇಮಕಾತಿಗೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಶೇ.80ರಷ್ಟು ಅತಿಥಿ ಉಪನ್ಯಾಸಕರನ್ನೇ ಕಾಲೇಜು ಮತ್ತು ವಿವಿ ಗಳಲ್ಲಿ ಬಳಸಿಕೊಂಡಿರುವ ಸರ್ಕಾರ ಗುಣಮಟ್ಟದ ಬೋಧನ ಕೌಶಲ್ಯ ಅನುಭವ ಹೊಂದಿರುವ ಅತಿಥಿ ಉಪನ್ಯಾಸಕರನ್ನೇ ಸೇವೆಯಲ್ಲಿ ವಿಲೀನಗೊಳಿಸಬೇಕು. ಮತ್ತು ಅವೈಜ್ಞಾನಿಕ ನಿಯೋಜನೆ ಮತ್ತು ವರ್ಗಾವಣೆ ಪ್ರಕ್ರಯೆಯಿಂದ ಸಾವಿರಾರು ಉಪನ್ಯಾಸಕರು ಸೇವೆಯಿಂದ ಹೊರಗುಳಿಯಲಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಶಾಶ್ವತ ನಿಯಮಾವಳಿ ರೂಪಿಸಲು ರೂಪಿಸಲು ಕಾಲೇಜು ಶಿಕ್ಷಣ ಇಲಾಖೆ ನೀಡಿರುವ ವರದಿಯನ್ನು ಬಜಟ್ ಅಧಿವೇಶನದಲ್ಲಿ ಘೋಷಣೆ ಮಾಡುವಂತೆ ಆಗ್ರಹಿಸಿದರು.
ಸಮಿತಿಯ ಡಾ.ಹೆಚ್. ಸೋಮಶೇಖರ್ ಶಿವಮೊಗ್ಗಿ, ಮದ್ದೂರು ನಾಗರಾಜ್, ಡಾ.ನರಹರಿ, ಡಾ.ರವೀದ್ರ ಮೊದಲಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post