ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೋವಿಡ್ ಸಂಕಷ್ಟದಿಂದ ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಬೆಲೆ ಏರಿಕೆಯ ಬರೆ ಎಳೆಯಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಹೆಚ್. ರವಿಕುಮಾರ್ ಖಂಡಿಸಿದ್ದಾರೆ
2020ರ ನವೆಂಬರ್ 1ರ ನಂತರ ಪ್ರತೀ ಯೂನಿಟ್‌ಗೆ 40 ಪೈಸೆ (ಶೇ. ೬ರಷ್ಟು) ಏರಿಕೆಯಾಗಿದ್ದ ವಿದ್ಯುತ್ ಬೆಲೆಗೆ ಸರಕಾರ ಪ್ರತೀ ಯೂನಿಟ್‌ಗೆ 30 ಪೈಸೆ (ಶೇ. 4ರಷ್ಟು) ಏರಿಸಿದೆ. ಈಗಾಗಲೇ ಕೋವಿಡ್ ಲಾಕ್‌ಡೌನ್‌ಗಳ ಪರಿಣಾಮ ಆರ್ಥಿಕ ಸಂಕಷ್ಟದಲ್ಲಿ ಇರುವ ಜನತೆಯ ಮೇಲೆ ಸರಕಾರ ದೊಡ್ಡ ಹೊರೆಯನ್ನು ಹಾಕಿದೆ. ಜನಸಾಮಾನ್ಯ ಬಳಸುವ ತಿಂಗಳ 200 ಯೂನಿಟ್ ವಿದ್ಯುತ್‌ಗೆ 1,260 ರೂ. ಪಾವತಿ ಮಾಡಬೇಕು, ವರ್ಷಕ್ಕೆ 15,000 ರೂಪಾಯಿ ಪಾವತಿ ಮಾಡಬೇಕಾಗುತ್ತದೆ ಎಂದು ವಿವರಿಸಿದ್ಧಾರೆ.
ದೆಹಲಿಯ ವಿದ್ಯುತ್ ದರದ ಜೊತೆಗೆ ತುಲನೆ:
ದೆಹಲಿಯ ಜನತೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಬಳಸುತ್ತಾರೆ. ದೆಹಲಿಯ ಶೇ.70ರಷ್ಟು ಜನ ವಿದ್ಯುತ್ ಬಿಲ್ ಪಾವತಿಸುವುದೇ ಇಲ್ಲ. ಕಳೆದ ಆರು ವರ್ಷಗಳಲ್ಲಿ ವಿದ್ಯುತ್ ಬೆಲೆ ಏರಿಕೆಯಾಗಿಯೇ ಇಲ್ಲ. ರಾಜ್ಯದಲ್ಲಿ ಲಭ್ಯವಿರುವ ಎಲ್ಲಾ ನೈಸರ್ಗಿಕ ಮೂಲಗಳನ್ನು ಅಂದರೆ ನೀರು, ಗಾಳಿ ಮತ್ತು ಸೌರ ಶಕ್ತಿಯನ್ನು ಬಳಸಿ ವಿದ್ಯುತ್ ಉತ್ಪಾದಿಸುತ್ತದೆ. ಹೀಗಿದ್ದೂ ಸರಕಾರ ವಿದ್ಯುತ್ ಬೆಲೆ ಏರಿಸಿ ಜನತೆಯನ್ನು ಯಾಕೆ ಹಿಂಸಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ವಿದ್ಯುತ್ ನಿರ್ವಹಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆಯೇ? ಕಳೆದ ಎರಡು ವರ್ಷಗಳಿಂದ ಕರ್ನಾಟಕ ಸರ್ಕಾರ ಅದಾನಿ ಗ್ರೂಪ್ ನಿಂದ ಖರೀದಿ ಮಾಡುತ್ತಿರುವ ವಿದ್ಯುತ್‌ನ ಬೆಲೆ ಸತತವಾಗಿ ಏರುತ್ತಿದೆ. ಬೆಸ್ಕಾಂ ಅದಾನಿಯಿಂದ ಖರೀದಿಸುವ ವಿದ್ಯುತ್ ಬೆಲೆ ಪ್ರತೀ ಕೆಡಬ್ಲ್ಯೂಹೆಚ್‌ಗೆ 4.78ರೂ.ನಿಂದ 6.80 ರೂಪಾಯಿಗೆ ಏರಿದೆ. ಒಟ್ಟಾರೆ 2.02 ರೂಪಾಯಿ (ಶೇ.42ರಷ್ಟ) ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ಇಂದು ರಾಜ್ಯ ಬಹುತೇಕ ಉದ್ದಿಮೆಗಳು ನಷ್ಟದಲ್ಲಿ ಇರುವಾಗ ಅದಾನಿ ಪವರ್‌ಗೆ ಶೇ.50ರಷ್ಟು ಲಾಭವನ್ನು ತಂದು ಕೊಟ್ಟಿದೆ. ಅಂದರೆ 2021ರ ಆರ್ಥಿಕ ವರ್ಷದಲ್ಲಿ 3,500 ಕೋಟಿ ರೂ. ಲಾಭ ಗಳಿಸಿದೆ. ಇದನ್ನು ಸ್ವತಃ ಕಂಪನಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ವರ್ಷ ಕಲ್ಲಿದ್ದಿಲಿನ ಬೆಲೆ ಇಳಿದಿದ್ದರೂ ಅದಾನಿ ಪವರ್ ರಾಜ್ಯ ಸರಕಾರಕ್ಕೆ ಅಧಿಕ ಬೆಲೆಗೆ ಕಲ್ಲಿದ್ದಲನ್ನು ಮಾರಾಟ ಮಾಡಿತ್ತು. ಆ ಸಂದರ್ಭದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ವಿದ್ಯುತ್ ಖಾತೆಯನ್ನು ಹೊಂದಿದ್ದರು. ಸ್ವತಃ ರಾಜ್ಯ ಆರ್ಥಿಕ ಮುಗ್ಗಟ್ಟಿನಲ್ಲಿ ಬಳಲಿ ಹೋಗಿರುವಾಗ ಅದಾನಿ ಪವರ್‌ನ ಜೇಬು ತುಂಬಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ಕರ್ನಾಟಕ ಸರ್ಕಾರ ವಿದ್ಯುತ್ ಬೆಲೆಯ ಬಗ್ಗೆ ಸೂಕ್ತ ನಿಲುವು ತೆಗೆದುಕೊಳ್ಳಬೇಕು. ದೆಹಲಿ ಸರ್ಕಾರದ ಹಾಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಿ ಜನತೆಯನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಆಮ್ ಆದ್ಮಿ ಪಾರ್ಟಿಯ ಆಗ್ರಹಗಳು:
ಸರಕಾರ ಈಗ ಜಾರಿಯಲ್ಲಿ ಇರುವ ಬೆಲೆ ಏರಿಕೆಯನ್ನು ಸ್ಥಗಿತಗೊಳಿಸಿ ಕರ್ನಾಟಕದ ಜನತೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಬೇಕು. ಅದಾನಿ ಪವರ್ ಗೆ ಕಳೆದ ವರ್ಷ ಸರಕಾರ ಪಾವತಿಸಿರುವ ಏರಿಕೆಯ ಬೆಲೆಯನ್ನು ಹಿಂಪಡೆಯಬೇಕು. ಕಡಿಮೆ ಬೆಲೆಯ ಕೋಲ್ ಅನ್ನು ಹೆಚ್ಚಿನ ಬೆಲೆಗೆ ಸರಕಾರಕ್ಕೆ ಮಾರಿ ಪಡೆದ ಲಾಭವನ್ನು ಸರ್ಕಾರ ಮರುಪಡೆಯಬೇಕು. ಅದಾನಿ ಪವರ್ ಜೊತೆಗೆ ವಿದ್ಯುತ್ ಬೆಲೆ ಕುರಿತು ಸಮರ್ಪಕ ಮಾತುಕತೆ ನಡೆಸದೇ ರಾಜ್ಯಕ್ಕೆ ನಷ್ಟ ಉಂಟು ಮಾಡಿರುವ ಸಚಿವರು ಹಾಗೂ ಅಧಿಕಾರಿಗಳನ್ನು ವಜಾಗೊಳಿಸಿ.
ಕೋವಿಡ್ ಸೋಂಕಿನ ಮಧ್ಯೆ ಜನತೆ ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಬೆಲೆ ಏರಿಸಿ ಲೂಟಿ ಮಾಡುತ್ತಿರುವುದು ಯಾಕೆ? ಅದಾನಿ ಪವರ್ ಗೆ ಯಾಕೆ ಹೆಚ್ಚಿನ ಬೆಲೆಯನ್ನು ಪಾವತಿಸುತ್ತಿದೆ? ಈ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ಉತ್ತರಿಸಬೇಕು. ಸರ್ಕಾರ ತಕ್ಷಣವೇ 200 ಯೂನಿಟ್ ಉಚಿತ ವಿದ್ಯುತ್ ನೀಡಬೇಕು. ಇದರಿಂದ ಶ್ರೀಮಂತರಿಗೆ ಮಾತ್ರವಲ್ಲ, ಜನ ಸಾಮಾನ್ಯನಿಗೂ ಲಾಭವಿದೆ. ಉಚಿತ ವಿದ್ಯುತ್ ಗಾಗಿ ಆಮ್ ಆದ್ಮಿ ಪಾರ್ಟಿ ಆಂದೋಲನವನ್ನು ನಡೆಸಲಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post