ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮದ್ಯದಂಗಡಿ ತೆರೆಯಲು ಪರವಾನಿಗೆ ನೀಡದಿರುವಂತೆ ಒತ್ತಾಯಿಸಿ ಗೋಪಾಲಗೌಡ ಮತ್ತು ಸ್ವಾಮಿ ವಿವೇಕಾನಂದ ಬಡಾವಣೆಗಳ ನಿವಾಸಿಗಳು ಅಬಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.


ಗೋಪಾಲ ಗೌಡ ಹಾಗೂ ಸ್ವಾಮಿ ವಿವೇಕಾನಂದ ಬಡಾವಣಿಗಳು ಇದೀಗ ಅಭಿವೃದ್ಧಿ ಹೊಂದುತ್ತಿರುವ ಅವಳಿ ಬಡಾವಣಿಗಳಾಗಿದ್ದು, ಇಲ್ಲಿ ಸರ್ಕಾರಿ, ಅರೆಸರ್ಕಾರಿ ಹಾಗೂ ಉದ್ದಿಮೆದಾರರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಸುಸಂಸ್ಕೃತ ಹಾಗೂ ಸಜ್ಜನರು ವಾಸಿಸುವ ಬಡಾವಣೆ ಎಂಬ ಖ್ಯಾತಿಗೆ ಹೆಸರಾಗಿದೆ. ಇಂತಹ ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿ ಪ್ರಾರಂಭಿಸಲು ಪರವಾನಿಗೆ ನೀಡದಿರಲು ವಿನಂತಿಸಿದರು.
ಮದ್ಯದಂಗಡಿ ತೆರೆಯಲು ಸೂಚಿಸಿರುವ ಸ್ಥಳದ ಸುತ್ತಮುತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳು, ದೇವಸ್ಥಾನ, ಶಾಲಾ ಕಾಲೇಜುಗಳು ಹಾಗೂ ಉದ್ಯಾವನಗಳಿದ್ದು, ಸಾರ್ವಜನಿಕರು ನಿತ್ಯ ಈ ಭಾಗದಲ್ಲಿ ಹೆಚ್ಚಾಗಿ ಸಂಚರಿಸುತ್ತಾರೆ. ಇಂತಹ ಪ್ರದೇಶದಲ್ಲಿ ಮದ್ಯದಂಗಡಿ ಪ್ರಾರಂಭಿಸಿದರೆ ಮದ್ಯವೆಸನಿಗಳಿಂದ ತೊಂದರೆಯಾಗುವ ಸಂಭವವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.


ದಿನನಿತ್ಯದ ವಸ್ತುಗಳನ್ನು ಖರೀದಿಸಲು ಬರುವ ಮಹಿಳೆಯರಿಗೆ ತೀವ್ರತರದ ತೊಂದರೆಯಾಗುತ್ತದೆ. ಈಗಾಗಲೇ ಈ ಭಾಗದಲ್ಲಿ ಗಾಂಜಾ ಮದ್ಯವ್ಯಸನಿಗಳಿಂದ ಪಾರ್ಕ್‌ಗಳು ಹಾಗೂ ಖಾಲಿ ನಿವೇಶನದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಕಳ್ಳತನ, ದರೋಡೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವುದು ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಈಗ ಮತ್ತೆ ಈ ಭಾಗದ ಮುಖ್ಯ ರಸ್ತೆಯಲ್ಲಿ ಮಧ್ಯದಂಗಡಿ ಪ್ರಾರಂಭಿಸಿದರೆ ಅಕ್ರಮ, ಅನೈತಿಕ ಚಟುವಟಿಕೆಗಳು ಹೆಚ್ಚಾಗುವ ಸಂಭವವಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಇಲ್ಲಿ ತೆರೆಯಲು ಉದ್ದೇಶಿಸಿರುವ ಮದ್ಯದಂಗಡಿಗೆ ಯಾವುದೇ ಪರವಾನಿಗೆ ನೀಡಬಾರದೆಂದು ಎರಡು ಬಡಾವಣೆಗಳ ಒಕ್ಕೂಟ ಹಾಗೂ ಈ ಭಾಗದ ನಿವಾಸಿಗಳು ಆಗ್ರಹಿಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















