ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣದಲ್ಲಿ ಸುಮಾರು 2 ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಅಗಲೀಕರಣ ಕಾಮಗಾರಿಗೆ ಭಾನುವಾರ ಪುನಾಃ ಚಾಲನೆ ದೊರೆಕಿದ್ದು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಹಾಗೂ ಸಾಗರ ರಸ್ತೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯಿಂದ ಮುಖ್ಯರಸ್ತೆಯ ಆಂಜನೇಯ ದೇವಸ್ಥಾನದ ವರೆಗೆ ದ್ವಿಪಥ ರಸ್ತೆ ನಿರ್ಮಾಣವಾಗಿ ದಶಕಗಳೇ ಕಳೆದಿದೆ. ಆದರೆ, ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ದಂಡಾವತಿ ನದಿಯ ವರೆಗೆ ರಸ್ತೆ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದು, ಹಲವು ವರ್ಷಗಳೇ ಕಳೆದಿತ್ತು. ಮುಖ್ಯ ರಸ್ತೆಯ ಕೆಲ ನಿವಾಸಿಗಳು ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ರಸ್ತೆ ಅಗಲೀಕರಣಕ್ಕೆ ಇದ್ದ ತಾಂತ್ರಿಕ ಸಮಸ್ಯೆಗಳು ಬಗೆಹರಿದಿರುವುದರಿಂದ ಕಾಮಗಾರಿಯನ್ನು ಪುನಾಃ ಕೈಗೆತ್ತಿಕೊಳ್ಳಲಾಗಿದೆ.ಸಾರ್ವಜನಿಕ ಸಂಚಾರಕ್ಕೆ ತೊಂದರೆ: ದಿನದಿಂದ ದಿನಕ್ಕೆ ಏರುತ್ತಿರುವ ವಾಹನಗಳ ಸಂಚಾರ ಮತ್ತು ಸಾರ್ವಜನಿಕರ ಓಟಾಡದಿಂದ ನಿತ್ಯ ಟ್ರಾಫಿಕ್ ಸಮಸ್ಯೆಯನ್ನು ಎದುರಿಸುವಂತಾಗಿತ್ತು. ಪ್ರಸ್ತುತ ರಸ್ತೆ ಅಗಲೀಕರಣಕ್ಕೆ ಚಾಲನೆ ದೊರೆತಿರುವುದು ವಾಹನ ಸವಾರರು ತುಸು ನೆಮ್ಮದಿ ಪಟ್ಟುಕೊಳ್ಳುವಂತಾಗಿದೆ. ಮಾತ್ರವಲ್ಲದೇ ಮುಖ್ಯ ರಸ್ತೆಯಲ್ಲಿನ ಗುಂಡಿ-ಗೊಟರು ಹಾಗೂ ಮಳೆ ಬಂದರೆ ಕೆಸರು, ಬಿಸಿಲಿದ್ದರೆ ದೂಳು ಎನ್ನುವ ಸ್ಥಿತಿ ಇದ್ದು, ಶೀಘ್ರವೇ ರಸ್ತೆ ಅಗಲೀಕರಣವಾಗಿ ಉತ್ತಮ ರಸ್ತೆಯಾಗಲಿ ಎನ್ನುವುದು ಜನತೆಯ ಆಶಯವಾಗಿದೆ.
ಬೆಳ್ಳಬೆಳಗ್ಗೆ ಘರ್ಜಿಸಿದ ಜೆಸಿಬಿ ಸದ್ದು: ಭಾನುವಾರ ಬೆಳಗ್ಗೆ ಶ್ರೀ ರಂಗನಾಥ ದೇವಸ್ಥಾನದ ಸಮೀಪದಿಂದ ಆರಂಭವಾದ ತೆರವು ಕಾರ್ಯಾಚರಣೆಯ ವೇಳೆಯಲ್ಲಿ ಸ್ವಯಂ ಪ್ರೇರಿತವಾಗಿ ತೆರವು ಮಾಡಿಕೊಳ್ಳದ ಅಂಗಡಿ ಮತ್ತು ಮನೆಗಳನ್ನು ತಾಲೂಕು ಆಡಳಿತದ ನೇತೃತ್ವದಲ್ಲಿ ಜೆಸಿಬಿ ಸಹಾಯದಿಂದ ತೆರವು ಮಾಡಲಾಯಿತು. ಇನ್ನು ಅಂಗಡಿಗಳಲ್ಲಿನ ವಸ್ತುಗಳನ್ನು ತಾಲೂಕು ಆಡಳಿತದಿಂದ ವಶಕ್ಕೆ ಪಡೆಯಲಾಯಿತು. ಪೌರ ಕಾರ್ಮಿಕರು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಯನ್ನು ತೆರವು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.ಶಾಸಕ ಎಸ್. ಕುಮಾರ್ ಬಂಗಾರಪ್ಪ ಸ್ಥಳದಲ್ಲಿಯೇ ಇದ್ದು, ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಿದರು. ಸಾಗರ ಉಪವಿಭಾಗಾಧಿಕಾರಿ ಡಾ. ನಾಗರಾಜ್, ತಹಶೀಲ್ದಾರ್ ಶಿವಾನಂದ ರಾಣೆ, ಪಿಡಬ್ಲ್ಯುಡಿ ಇಲಾಖೆಯ ಓಂಕಾರ ನಾಯ್ಕ್, ಪುರಸಭೆ ಮುಖ್ಯಾಧಿಕಾರಿ ಬಿ. ಮಹೇಂದ್ರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post