ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸರ್ಕಾರದಿಂದ ಎಂಒಯು ಮಾಡಿಕೊಂಡ ಬ್ಯಾಂಕ್’ಗಳು ನೀಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ತಿಳಿಸಿದರು.
2025ರ ಅಕ್ಟೋಬರ್ 12ರಂದು ಭದ್ರಾವತಿಯ ಭದ್ರಾ ನದಿಯಲ್ಲಿ ಕಾಲು ಜಾರಿ ಬಿದ್ದು ಮುಳುಗಿ ಮರಣ ಹೊಂದಿದ್ದ ಶಿವಮೊಗ್ಗದ ಕೆಎಸ್’ಆರ್’ಪಿ 8ನೇ ಪಡೆಯ ಆರ್’ಎಚ್’ಸಿ ಎಲ್. ಚಂದ್ರಶೇಖರ್ ಅವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ನೀಡಲಾದ ರೂ.1 ಕೋಟಿ ಪರಿಹಾರ ಚೆಕ್ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶನಿವಾರ 8ನೇ ಪಡೆ, ಕೆಎಸ್’ಆರ್’ಪಿ, ಮಾಚೇನಹಳ್ಳಿ, ಶಿವಮೊಗ್ಗ ಇಲ್ಲಿ ಶನಿವಾರ ದಿವಂಗತ ಎಲ್ ಚಂದ್ರಶೇಖರ್ ಅವರ ಪತ್ನಿ ಸುಮಲತಾ ಮತ್ತು ಅವರ ಮಕ್ಕಳಿಗೆ ರೂ.1 ಕೋಟಿ ಚೆಕ್ ವಿತರಣೆ ಮಾಡಿದರು.
ಮೃತ ಎಲ್ ಚಂದ್ರಶೇಖರ್ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಶಿವಮೊಗ್ಗ ಶಾಖೆಯಲ್ಲಿ ಪೊಲೀಸ್ ಸ್ಯಾಲರಿ ಪ್ಯಾಕೇಜ್ ಖಾತೆದಾರರಾಗಿರುತ್ತಾರೆ. ಆದ್ದರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಈ ಸೌಲಭ್ಯ ದೊರೆಯುತ್ತಿದೆ ಎಂದರು.

ಶಿವಮೊಗ್ಗ ಕೆಎಸ್’ಆರ್’ಪಿ 8ನೇ ಪಡೆ ಕಮಾಂಡೆಂಟ್ ಎಸ್. ಯುವಕುಮಾರ್ ಮಾತನಾಡಿ, ನೌಕರರು ಕರ್ತವ್ಯ ನಿರ್ವಹಣೆ ವೇಳೆ ಆಕಸ್ಮಿಕವಾಗಿ ಅಪಘಾತ, ದುರ್ಘಟನೆಗಳು ಸಂಭವಿಸಿದಾಗ ಕುಟುಂಬವು ಆರ್ಥಿಕ ದುಸ್ಥಿತಿಗೆ ಒಳಗಾಗದಂತೆ ತಡೆಯುವ ಸಲುವಾಗಿ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಪಿಎಂಎಸ್ಬಿವೈ ಮತ್ತು ಪಿಎಂಜೆಜೆಬಿವೈ ವಿಮೆ ಹಾಗೂ ಪೊಲೀಸ್ ಸ್ಯಾಲರಿ ಪ್ಯಾಕೇಜ್’ಗೆ ನೋಂದಣಿ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.
ಡೆಪ್ಯೂಟಿ ಜನರಲ್ ಮ್ಯಾನೇಜರ್ ಕೃಷ್ಣ ಮೋಹನ್ ಮುರ್ಚಾಲ್ ಅವರು ಎಲ್. ಚಂದ್ರಶೇಖರ್ ಅವರ ಪತ್ನಿ ಸುಮಲತಾ ಮತ್ತು ಅವರ ಮಕ್ಕಳಿಗೆ ರೂ.1 ಕೋಟಿ ಚೆಕ್ ವಿತರಣೆ ಮಾಡಿದರು.
ಈ ವೇಳೆ ಎಸ್’ಬಿಐನ ಪ್ರಾದೇಶಿಕ ಪ್ರಬಂಧಕರು ವಿಜಯ್ ಸಾಯಿ ಮದುಗುಲ, ಎಸ್’ಬಿಐ(ಡಿ-ವಿಎಎಸ್)ಮುಖ್ಯ ಪ್ರಬಂಧಕರಾದ ಕೆ. ಪುಷ್ಪಲತಾ, ಎಸ್’ಬಿಐ ಬಿಎಚ್ ರಸ್ತೆ ಶಾಖೆಯ ಮುಖ್ಯ ಪ್ರಬಂಧಕರಾದ ಪ್ರಕಾಶ್ ಕುಮಾರ್ ಮತ್ತು 8ನೇ ಪಡೆಯ ಅಧಿಕಾರಿ/ಸಿಬ್ಬಂದಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















