ಕಲ್ಪ ಮೀಡಿಯಾ ಹೌಸ್ | ಸಾಗರ |
ಫುಡ್ ಪಾಯಿಸನ್’ನಿಂದಾಗಿ ಅಸ್ವಸ್ಥಗೊಂಡ ವಿನೋಬ ನಗರದ 20ಕ್ಕೂ ಹೆಚ್ಚು ಮಂದಿ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಂದು ವಿನೋಬ ನಗರದ ಸುಮಾರು 20ಕ್ಕೂ ಹೆಚ್ಚು ಮಂದಿ ಫುಡ್ ಪಾಯಿಸನ್’ನಿಂದಾಗಿ ತೀವ್ರ ಹೊಟ್ಟೆ ನೋವು, ವಾಂತಿ-ಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ. ಎಲ್ಲರನ್ನೂ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು, ವಿಷಯ ತಿಳಿದಾಕ್ಷಣ ಶಾಸಕ ಎಚ್. ಹಾಲಪ್ಪ ರಾತ್ರಿ 11.30ರ ವೇಳೆಯಲ್ಲಿ ಆಸ್ಪತ್ರೆಗೆ ದೌಡಾಯಿಸಿದರು. ಉಪವಿಭಾಗೀಯ ಆಸ್ಪತ್ರೆಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿ, ಅಸ್ವಸ್ಥಗೊಂಡವರಿಗೆ ಧೈರ್ಯ ತುಂಬಿ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಮಾತನಾಡಿದ ಹಾಲಪ್ಪನವರು, ಒಂದೆರಡು ದಿನದ ಹಿಂದೆ ಜೋಗ, ಕಾರ್ಗಲ್, ತೀರ್ಥಹಳ್ಳಿ ಹಾಗೂ ಶಿವಮೊಗ್ಗದಲ್ಲೂ ಇಂತಹ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ, ಇದು ಯಾವ ರೀತಿಯ ಆರೋಗ್ಯ ಸಮಸ್ಯೆ ಆರಂಭವಾಗಿದೆ ಎಂಬುದನ್ನು ಪರೀಕ್ಷಿಸುವಂತೆ ಆರೋಗ್ಯ ಅಧಿಕಾರಿಗಳ ಜೊತೆಯಲ್ಲಿ ಮಾತನಾಡಿದ್ದೇನೆ ಎಂದರು.
ಇನ್ನು, ತಾಲೂಕಿನ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಎಲ್ಲ ರೀತಿಯ ತುರ್ತು ಚಿಕಿತ್ಸೆಗೆ ಸಜ್ಜಾಗಿದ್ದು, ದಿನದ ೨೪ ಗಂಟೆಯೂ ಸೇವೆ ಸಲ್ಲಿಸುತ್ತಿದ್ದಾರೆ. ವಾಂತಿ, ಭೇದಿಯಂತಹ ಸಮಸ್ಯೆ ಕಾಣಿಸಿಕೊಂಡ ಕೂಡಲೇ ತತಕ್ಷಣ ಆಸ್ಪತ್ರೆಗೆ ಧಾವಿಸಿ ವೈದ್ಯರಲ್ಲಿ ಪರೀಕ್ಷಿಸಬೇಕು. ದಯಮಾಡಿ ಯಾರೂ ಸಹ ಮನೆಯಲ್ಲಿಯೇ ಚಿಕಿತ್ಸೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಮಧುರಾ ಶಿವಾನಂದ್, ವಿ. ಮಹೇಶ್, ಗಣೇಶ್ ಪ್ರಸಾದ್, ಶ್ರೀಧರ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post