ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಸಾಯನಿಕ ವೆಚ್ಚ ಹೆಚ್ಚುತ್ತಿರುವ ಈ ದಿನಗಳಲ್ಲಿ ಜೈವಿಕ ಕೃಷಿಗೆ ಉತ್ತೇಜನ ನೀಡುವ ಬೀಜಾಮೃತವು ಬೀಜಗಳ ಉತ್ಥಾನಶಕ್ತಿ, ರೋಗನಿರೋಧಕ ಸಾಮರ್ಥ್ಯ ಮತ್ತು ನೆಲದ ಸೂಕ್ಷ್ಮಾಣುಜೀವಿಗಳ ಚಟುವಟಿಕೆಯನ್ನು ಹೆಚ್ಚಿಸುವ ಸಾಮರ್ಥ್ಯವಿರುತ್ತದೆ ಎಂದು ಕೃಷಿ ವಿದ್ಯಾರ್ಥಿಗಳು ರೈತರಿಗೆ ತಿಳಿಸಿದರು.
ಕಲ್ಮನೆ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿಎಸ್ಸಿ (ಹಾನರ್ಸ್) ಕೃಷಿ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಬೀಜಾಮೃತ ತಯಾರಿಕೆ ಹಾಗೂ ಅದರ ಮಹತ್ವ ಎಂಬ ವಿಷಯದ ಕುರಿತು ರೈತರಿಗೆ ಗುಂಪು ಚರ್ಚೆ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬೀಜಾಮೃತ ತಯಾರಿಕೆಗೆ ಅಗತ್ಯವಾದ ಸ್ಥಳೀಯವಾಗಿ ಲಭ್ಯವಿರುವ ಸಗಣಿ, ಗೋಮೂತ್ರ, ಸುಣ್ಣದ ನೀರು ಹಾಗೂ ಮಣ್ಣು ಮೊದಲಾದ ಪದಾರ್ಥಗಳನ್ನು ಬಳಸಿ ಹೇಗೆ ಸುಲಭವಾಗಿ ತಯಾರಿಸಬಹುದು ಎಂಬುದನ್ನು ಹಂತ ಹಂತವಾಗಿ ಪ್ರದರ್ಶಿಸಿದರು.
ರಾಸಾಯನಿಕ ವೆಚ್ಚ ಹೆಚ್ಚುತ್ತಿರುವ ಈ ದಿನಗಳಲ್ಲಿ ಜೈವಿಕ ಕೃಷಿಗೆ ಉತ್ತೇಜನ ನೀಡುವ ಬೀಜಾಮೃತವು ಬೀಜಗಳ ಉತ್ಥಾನಶಕ್ತಿ, ರೋಗನಿರೋಧಕ ಸಾಮರ್ಥ್ಯ ಮತ್ತು ನೆಲದ ಸೂಕ್ಷ್ಮಾಣುಜೀವಿಗಳ ಚಟುವಟಿಕೆಯನ್ನು ಹೆಚ್ಚಿಸುವ ಕುರಿತು ವಿವರವಾಗಿ ತಿಳಿಸಲಾಯಿತು.
ರೈತರೊಂದಿಗೆ ನಡೆದ ಗುಂಪು ಚರ್ಚೆಯಲ್ಲಿ ಬೀಜಾಮೃತದ ಪರಿಣಾಮಕಾರಿತ್ವ, ಜೈವಿಕ ಉತ್ಪಾದನಾ ವೆಚ್ಚದ ಕಡಿತ, ಮಣ್ಣಿನ ಆರೋಗ್ಯ ಸುಧಾರಣೆ ಹಾಗೂ ಬೆಳೆಗಳ ಸಮಸ್ಥಿರ ಬೆಳವಣಿಗೆಯ ಕುರಿತಂತೆ ವಿದ್ಯಾರ್ಥಿಗಳು ಸಮಗ್ರ ಮಾಹಿತಿ ಹಂಚಿಕೊಂಡರು. ರೈತರು ತಮ್ಮ ಅನುಭವಗಳನ್ನು ಹಂಚಿಕೊಂಡು, ಇಂತಹ ಜೈವಿಕ ವಿಧಾನಗಳು ತಮ್ಮ ಕೃಷಿಯಲ್ಲಿ ಉಪಯುಕ್ತವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳ ಪ್ರಯತ್ನವನ್ನು ಗ್ರಾಮಸ್ಥರು ಮೆಚ್ಚಿದರು. ಜೈವಿಕ ಕೃಷಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಇಂತಹ ಉಪಯುಕ್ತ ಜ್ಞಾನ ಕಾರ್ಯಕ್ರಮಗಳನ್ನು ಹೆಚ್ಚುವಂತೆ ನಡೆಸುವ ಯೋಜನೆ ವಿದ್ಯಾರ್ಥಿಗಳಿಂದ ತಿಳಿದುಬಂದಿದೆ. ರೈತರಾದ ಕುಮಾರಸ್ವಾಮಿ, ನಾಗರಾಜ್, ಭೀಮನಗೌಡ್ರು ಮತ್ತು ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















