ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿಕಾರಿಪುರ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಸಾವಿರಾರು ಕೋಟಿ ರೂ. ವೆಚ್ಚದ ನೀರಾವರಿ ಯೋಜನೆ ಕಾಮಗಾರಿಗಳು ವಿಳಂಬವಾಗುತ್ತಿದ್ದು, ರಾಜ್ಯ ಸರ್ಕಾರ ಕಾಮಗಾರಿಗಳನ್ನು ಚುರುಕುಗೊಳಿಸಬೇಕೆಂದು ವೀರಶೈವ ಲಿಂಗಾಯತ ಮುಖಂಡ ಹಾಗೂ ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ವೈ.ಹೆಚ್. ನಾಗರಾಜ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಿದ್ಧರಾಮಯ್ಯ ಶಿಕಾರಿಪುರ ಕೆರೆಗೆ ನೀರು ತುಂಬಿಸುವ ಯೋಜನೆಗೆ ನೂರಾರು ಕೋಟಿ ರೂ. ಅನುದಾನ ನೀಡಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲೂ ಕೂಡ ಸುಮಾರು 200 ಕೋಟಿ ರೂ.ಗೂ ಹೆಚ್ಚು ಹಣವನ್ನು 2018-19ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಶಿಕಾರಿಪುರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಂಗ್ರೆಸ್ ಕೊಡುಗೆಯಾಗಿದ್ದು, ಪ್ರಸ್ತುತ ಬಿಜೆಪಿ ಸರ್ಕಾರ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಿಕಾರಿಪುರ ತಾಲೂಕಿನ ಏತ ನೀರಾವರಿ ಯೋಜನೆಗಳ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ಸ್ವಕ್ಷೇತ್ರಕ್ಕೆ ಅನುದಾನ ಘೋಷಣೆ ಮಾಡಿದ್ದರೂ ಕೂಡ ಕೆಲಸ ಮಾತ್ರ ಆಗುತ್ತಿಲ್ಲ. ಒಂದು ವರ್ಷದೊಳಗೆ ಕೆರೆಗೆ ನೀರು ಬರುತ್ತದೆ ಎಂದು ಆಶ್ವಾಸನೆ ನೀಡಿದ್ದರೂ ಇನ್ನೂ ಈಡೇರಿಲ್ಲ ಎಂದು ವೈ.ಹೆಚ್. ನಾಗರಾಜ್ ಆರೋಪಿಸಿದ್ದಾರೆ.
ಸಂಸದ ಬಿ.ವೈ. ರಾಘವೇಂದ್ರ ಅವರು ಶಿಕಾರಿಪುರಕ್ಕೆ ರೈಲು ಹಳಿಗಳನ್ನು ನಿರ್ಮಿಸಲು ನಿರ್ಧರಿಸಿರುವುದು ಸ್ವಾಗತವೇ ಆಗಿದೆ. ಆದರೆ, ತಮ್ಮ ಜೀವನಾಧಾರವಾಗಿದ್ದ ಜಮೀನನ್ನು ಕಳೆದುಕೊಳ್ಳುತ್ತಿರುವ ರೈತರಿಗೆ ಕೇಳಿದಷ್ಟು ಹಣವನ್ನು ಪರಿಹಾರವಾಗಿ ನೀಡಬೇಕು ಮತ್ತು ಬಗರ್ ಹುಕುಂ ಸಾಗುವಳಿದಾರರಿಗೂ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post