ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಐತಿಹಾಸಿಕ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಗೆ ಅದ್ದೂರಿ ಚಾಲನೆ ದೊರೆತಿದ್ದು, ನಗರದಾದ್ಯಂತ ಸಂಭ್ರಮ ಮನೆ ಮಾಡಿದೆ.
ಪ್ರಥಮ ಪೂಜೆ ಇವರದ್ದು!
ಸಂಪ್ರದಾಯದಂತೆ ಬಿಬಿ ರಸ್ತೆಯ ಬ್ರಾಹ್ಮಣ ನಾಡಿಗ್ ಕುಟುಂಬದವರ ಮೊದಲಿಗೆ ದೇವಿಯ ತವರು ಮನೆ ಗಾಂಧಿಬಜಾರ್’ನಲ್ಲಿರುವ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಜಾತ್ರೆಗೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಿದರು.
ಇದಕ್ಕೂ ಮುನ್ನ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀಮಾರಿಕಾಂಬೆಯ ಪರದೆಯನ್ನು ಸರಿಸಲಾಯಿತು. ಈ ವೇಳೆ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು.
Also read: ಹರಿಯಾಣ ಸಿಎಂ ಸ್ಥಾನಕ್ಕೆ ಮನೋಹರ್ ಖಟ್ಟರ್ ರಾಜೀನಾಮೆ | ಲೋಕಸಭೆಗೆ ಸ್ಪರ್ಧೆ?
ನಸುಕಿನಿಂದಲೇ ಸರತಿ ಸಾಲು
ಇನ್ನು, ಜಾತ್ರೆಯ ಮೊದಲ ದಿನವಾದ ಇಂದು ದೇವಿಯ ದರ್ಶನ ಪಡೆಯಲು ನಸುಕಿನಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು.
9 ಗಂಟೆ ವೇಳೆಗೆ ಬಿಎಚ್ ರಸ್ತೆಯ ಡಯಟ್ ಕಚೇರಿ ದಾಟಿ ಕಿಲೋ ಮೀಟರ್ ಗಟ್ಟಲೆ ಸರತಿ ಸಾಲಿನಲ್ಲಿ ಭಕ್ತರು ನಿಂತಿದ್ದರು. ಸರತಿ ಸಾಲಿನ ಹಲವು ಕಡೆಗಳಲ್ಲಿ ಭಕ್ತರಿಗಾಗಿ ಪಾನಕ, ಮಜ್ಜಿಗೆಗಳನ್ನು ವಿತರಣೆ ಮಾಡಲಾಗುತ್ತಿದೆ.
ಗಣ್ಯರಿಂದ ದರ್ಶನ
ಇನ್ನು, ಮೊದಲ ದಿನ ಜಿಲ್ಲೆಯ ಗಣ್ಯರು ದೇವಿಯ ದರ್ಶನ ಪಡೆದಿದ್ದಾರೆ. ಸಂಸದ ಬಿ.ವೈ. ರಾಘವೇಂದ್ರ ಅವರು ಮುಂಜಾನೆಯೇ ಕುಟುಂಬ ಸಹಿತ ಆಗಮಿಸಿ, ವಿಶೇಷ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು.
ಬಿಸಿಲು ಹಾಗೂ ಸೆಖೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಲವು ಕಡೆಗಳಲ್ಲಿ ಪಾನಕ ಹಾಗೂ ಮಜ್ಜಿಗೆ ವಿತರಣೆ ವ್ಯವಸ್ಥೆ ಮಾಡಲಾಗಿದೆ.
ಗಾಂಧಿ ಬಜಾರ್’ನಲ್ಲಿ ಸ್ವತಃ ಮಜ್ಜಿಗೆ ವಿತರಣೆ ಮಾಡಿ, ಸಂಸದ ರಾಘವೇಂದ್ರ ಚಾಲನೆ ನೀಡಿದರು.
ಎಂಎಲ್’ಸಿ ಡಿ.ಎಸ್. ಅರುಣ್, ಬಿಜೆಪಿ ಪ್ರಮುಖರಾದ ಎಸ್. ದತ್ತಾತ್ರಿ ಸೇರಿದಂತೆ ಗಣ್ಯರು ಕುಟುಂಬ ಸಹಿತ ದೇವಿಯ ದರ್ಶನ ಪಡೆದರು.
ಸುಮಾರು ಬೆಳಗಿನ ಜಾವ 5 ಗಂಟೆಗೆ ಶ್ರೀಮಾರಿಕಾಂಬೆ ತವರುಮನೆಗೆ ಆಗಮಿಸಿದಳು. ನಾಡಿಗ ಕುಟುಂಬ ಮುತೈದೈಯರು ಮಂಗಳದ್ರವ್ಯಾಧಿಗಳೊಂದಿಗೆ ಮೆರವಣಿಗೆಯಲ್ಲಿ ಬಾಸಿಂಗದ ಜೊತೆಗೆ ಬಂದು ಮಾರಿಕಾಂಬೆಗೆ ಉಡಿ ತುಂಬಿ ಪೂಜೆ ಸಲ್ಲಿಸಿದರು.
ನಂತರ ವಿಶ್ವಕರ್ಮ ಸಮಾಜದವರು ಸಾರ್ವಜನಿಕವಾಗಿ ಪೂಜೆಯನ್ನು ಆರಂಭಿಸಿದರು. ದೇವಿಯೂ ಇಂದು ರಾತ್ರಿ 10 ಗಂಟೆಯವರೆಗೂ ತವರುಮನೆಯಲ್ಲಿಯೇ ಇದ್ದು, ಲಕ್ಷಾಂತರ ಮುತೈದೈಯರಿಂದ ಮಡ್ಲಕ್ಕಿ ಸ್ವೀಕರಿಸುವಳು. ನಂತರ ಅವಳ ಪಯಣ ಕೋಟೆ ಶ್ರೀಮಾರಿಕಾಂಬಾ ಗದ್ದುಗೆಯತ್ತ ಸಾಗಲಿದೆ. ಆ ಮಧ್ಯೆ ಉಪ್ಪಾರ ಸಮಾಜದವರು ಗದ್ದುಗೆಗೆ ತಂದು ಪ್ರತಿಷ್ಠಾಪಿಸುತ್ತಾರೆ. ಅಷ್ಟರೊಳಗೆ ಗಂಗಾಮತಸ್ಥ ಸಮಾಜದವರು ಗಂಗಾ ಪರಮೇಶ್ವರಿ ದೇವಸ್ಥಾನದಿಂದ ಗಂಗಾಪೂಜೆಯೊಂದಿಗೆ ಅಮ್ಮನವರನ್ನು ಮಂಗಳವಾದ್ಯದೊಂದಿಗೆ ಎದುರುಗೊಂಡು ಗದ್ದುಗೆಗೆ ಕಳಿಸಿಕೊಡುತ್ತಾರೆ.
ತವರುಮನೆಗೆ ಬಂದಿದ್ದ ಮಾರಿಕಾಂಬೆ ಅಮ್ಮನವರ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಇಂದು ಭಕ್ತರು ಸರತಿಯ ಸಾಲಿನಲ್ಲಿ ನಿಂತುಕೊಂಡಿದ್ದರು. ಬೆಳಗ್ಗೆ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ಜನ ನಿಂತಿದ್ದರು. ಗಾಂಧಿಬಜಾರಿನಿಂದ ಬಿ.ಹೆಚ್.ರಸ್ತೆಯ ಸೈನ್ಸ್ ಮೈದಾನದವರೆಗೂ ಸರತಿ ಸಾಲಿತ್ತು. ಅಮ್ಮನವರ ಪೂಜೆ ಅರ್ಧ ಗಂಟೆ ತಡವಾಗಿ ಆರಂಭವಾಗಿದ್ದರಿಂದ ಸರತಿ ಸಾಲು ಮತ್ತಷ್ಟು ಉದ್ದವಾಯಿತು. ಸುಮಾರು 4-5 ಗಂಟೆಗಳ ನಂತರ ಅಮ್ಮನವರ ದರ್ಶನ ಸಿಕ್ಕಿತ್ತು.
ತವರು ಮನೆಯಿಂದ ಬಂದಿದ್ದ ಅನೇಕ ಹೆಣ್ಣು ಮಕ್ಕಳು ದೇವಿಯ ದರ್ಶನ ಪಡೆದು ಕೃತಾರ್ಥರಾದರು. ಸೀರೆ, ಮಡ್ಲಕ್ಕಿ ನೀಡಿ ಉಡಿ ತುಂಬುವ ಮೂಲಕ ದೇವಿಯ ದರ್ಶನ ಪಡೆದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಅಲ್ಲಲ್ಲಿ ಪಾನಕ, ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಲಾಗಿತ್ತು.
ಎಂದಿನಂತೆ ಪೊಲೀಸ್ ಬಂದೋಬಸ್ತ್ ಇತ್ತು. ವಿಶೇಷ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿತ್ತು. 200 ರೂ. ಶುಲ್ಕದ ವಿಶೇಷ ದರ್ಶನ ಪಡೆಯಲು ಕೂಡ ಸರತಿ ಸಾಲಿತ್ತು. ಅಂಗವಿಕಲರಿಗೆ ಮತ್ತು ತುಂಬುಗರ್ಭಿಣಿಯರಿಗೆ ನೇರ ಅವಕಾಶ ಉಚಿತವಾಗಿಯೇ ಕಲ್ಪಿಸಲಾಗಿತ್ತು.
ನಾಳೆ ಬೆಳಿಗ್ಗೆ 4 ಗಂಟೆಯ ಸುಮಾರಿಗೆ ವಿದ್ಯಾನಗರದ ಕರ್ಲ ಹಟ್ಟಿಯ ಹರಿಜನ ಸಮಾಜದವರು ಬೇವಿನ ಉಡುಗೆಯೊಂದಿಗೆ ಆಗಮಿಸಿ ಅಮ್ಮನವರನ್ನು ಗದ್ದುಗೆಗೆ ಪ್ರತಿಷ್ಠಾಪಿಸುತ್ತಾರೆ. ನಂತರ ವಿವಿಧ ಸಮಾಜದವರು ಪೂಜೆ ಸಲ್ಲಿಸುತ್ತಾರೆ. ಮಾ.16ರ ತನಕ ಲಕ್ಷಾಂತರ ಭಕ್ತರು ಮಾರಿಕಾಂಬೆಯ ದರ್ಶನ ಪಡೆಯಲಿದ್ದಾರೆ. ಮಾ.16ರ ರಾತ್ರಿ ಮಹಾಮಂಗಳರಾತಿ ನಂತರ ಅಮ್ಮನವರನ್ನು ವನಪ್ರವೇಶಕ್ಕೆ ಕಳುಹಿಸಿಕೊಡುವ ಮೂಲಕ ಹಬ್ಬಕ್ಕೆ ತೆರೆ ಬೀಳಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post