ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಅಶೋಕನಗರದ ಅನನ್ಯ ಶಿಕ್ಷಣ ಸಂಸ್ಥೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಸಂಯುಕ್ತಾಶ್ರಯದಲ್ಲಿ ಡಿ.23 ರಂದು ಅಶೋಕನಗರದ ತುಂಗಾ ಪೋಲಿಸ್ ಠಾಣೆಯ ಹತ್ತಿರವಿರುವ ಅನನ್ಯ ಚಿಣ್ಣರ ಮನೆ ಆವರಣದಲ್ಲಿ ಶಿವಮೊಗ್ಗ ತಾಲ್ಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕವಿ, ಕಥೆಗಾರ್ತಿ, ಆದಿಚುಂಚನಗಿರಿ ಶಾಲೆಯ ವಿದ್ಯಾರ್ಥಿನಿ ಅಚಿಂತಾ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಡಿ.ಮಂಜುನಾಥ ಸುದ್ದಿಗೋಷ್ಟಿಯಲ್ಲಿ ವಿವರಿಸಿದರು.
ಅಂದು ಬೆಳಿಗ್ಗೆ 10:30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದ ಅನನ್ಯ ಶಾಲೆಯ ವಿದ್ಯಾರ್ಥಿನಿಯರಾದ ಪಂಚಮಿ ಹಾಗೂ ಅನನ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಡಿ.ಮಂಜುನಾಥ, ಮಾಜಿ ಶಾಸಕರಾದ ಕೆ.ಬಿ ಪ್ರಸನ್ನ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ್, ಅನನ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ಆರ್.ಗಿರೀಶ್, ತಾಲ್ಲೂಕು ಕಸಾಪ ಅಧ್ಯಕ್ಷೆ ಮಹಾದೇವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದ ನಂತರ ವಿವಿಧ ಗೋಷ್ಟಿಗಳು ನಡೆಯಲಿದೆ. ಕಾವ್ಯ ಕಲರವ ಗೋಷ್ಟಿಯನ್ನು ಗಾಜನೂರು ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ತನಿ ತನುಶ್ರೀ ಅಧ್ಯಕ್ಷತೆ ವಹಿಸಲಿದ್ದು, ವಿವಿಧ ಶಾಲೆಗಳ 45 ವಿದ್ಯಾರ್ಥಿಗಳು ತಮ್ಮ ಕವನ ವಾಚನ ಮಾಡಲಿದ್ದಾರೆ. ಪ್ರಬಂಧ ಗೋಷ್ಟಿಯಲ್ಲಿ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ದಿವ್ಯಾ.ಟಿ.ಪಿ ಅಧ್ಯಕ್ಷತೆ ವಹಿಸಲಿದ್ದು, 67 ವಿದ್ಯಾರ್ಥಿಗಳು ಪ್ರಬಂಧ ಮಂಡಿಸಲಿದ್ದಾರೆ. ಕಥಾಗೋಷ್ಟಿಯಲ್ಲಿ ಪುರದಾಳು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮಂಜುಳಾ ಅಧ್ಯಕ್ಷತೆ ವಹಿಸಲಿದ್ದು, 67 ವಿದ್ಯಾರ್ಥಿಗಳು ಕಥಾ ವಾಚನ ಮಾಡಲಿದ್ದಾರೆ.
ತಾಲ್ಲೂಕು ಸಮ್ಮೇಳನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದ ಸಮ್ಮೇಳನಕ್ಕೆ ಆಯ್ಕೆ ಮಾಡಲಾಗುವುದು. ಇದೇ ಮಾದರಿಯಲ್ಲಿ ಸೊರಬ, ಹೊಸನಗರ, ತೀರ್ಥಹಳ್ಳಿ, ಸಾಗರ, ಭದ್ರಾವತಿ ಶಿಕಾರಿಪುರದಲ್ಲಿ ತಾಲ್ಲೂಕು ಸಮ್ಮೇಳನ ಏರ್ಪಡಿಸಲು ಸಿದ್ದತೆ ನಡೆಸಲಾಗುತ್ತಿದೆ. ಕಳೆದ ಎರಡು ತಿಂಗಳಿನಿಂದ ತಾಲ್ಲೂಕಿನ ನಗರ ಹಾಗೂ ಗ್ರಾಮಾಂತರದ ವಿವಿಧ ಶಾಲೆಗಳಲ್ಲಿ ಏರ್ಪಡಿಸಿದ್ದ ಕಥೆ,ಕವನ,ಪ್ರಬಂಧ ರಚನಾ ಕಮ್ಮಟಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಾಲ್ಲೂಕು ಸಮ್ಮೇಳನದಲ್ಲಿ ಅವಕಾಶ ನೀಡಲಾಗಿದೆ ಎಂದು ಡಿ.ಮಂಜುನಾಥ ವಿವರಿಸಿದರು.
ಹಾವೇರಿ ಸಮ್ಮೇಳನಕ್ಕೆ ಪ್ರತಿನಿಧಿಗಳಾಗಿ:
ಜನವರಿ 6, 7, 8ರಂದು ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ 86ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಆಸಕ್ತಿಯಿರುವವರು ಪ್ರತಿನಿಧಿ ಗಳಾಗಿ ಭಾಗವಹಿಸಲು ಪ್ರತಿ ನಿಧಿ ನೋಂದಣಿ ಕಾರ್ಯ ನಡೆಯುತ್ತಿದೆ. ಆಸಕ್ತಿಯಿರುವ ಕನ್ನಡದ ಮನಸ್ಸುಗಳು ಜಿಲ್ಲಾ ಕಸಾಪ ಕಚೇರಿಗೆ ಬಂದು 500ರೂ. ಶುಲ್ಕ ನೀಡಿ ರಶೀದಿ ಪಡೆಯಲು ಸುದ್ದಿ ಗೋಷ್ಠಿಯಲ್ಲಿ ಡಿ. ಮಂಜುನಾಥ ಮನವಿ ಮಾಡಿದರು.
Also read: ಕೊರೋನಾ 4ನೆಯ ಅಲೆ: ಈ ಎಲ್ಲ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯ? ರಾತ್ರಿ ಹೊಸ ಮಾರ್ಗಸೂಚಿ
ಕನ್ನಡ ರಥಕ್ಕೆ ಭದ್ರಾವತಿಯಲ್ಲಿ ಭವ್ಯ ಸ್ವಾಗತಕ್ಕೆ ಸಿದ್ದತೆ
ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಲುವಾಗಿ ಕನ್ನಡ ಜಾಗೃತಿ ರಥ ನಾಡಿನಾದ್ಯಂತ ಪ್ರವಾಸ ಮಾಡುತ್ತಿದೆ. ಈ ರಥ ಶಿವಮೊಗ್ಗ ಜಿಲ್ಲೆಗೆ ಡಿಸೆಂಬರ್ 24 ರಂದು ಆಗಮಿಸಲಿದೆ.
ಭದ್ರಾವತಿ ನಗರಕ್ಕೆ 24ರ ಬೆಳಿಗ್ಗೆ 10:30ರ ಹೊತ್ತಿಗೆ ಚಿಕ್ಕಮಗಳೂರು ಜಿಲ್ಲೆಯಿಂದ ಆಗಮಿಸಲಿದೆ. ಈ ರಥವನ್ನು ತರೀಕೆರೆ ವೃತ್ತದಲ್ಲಿ ಸ್ವಾಗತಿಸಿ ಕನಕಮಂಠಪದ ವರೆಗೆ ಮೆರವಣಿಗೆಯಲ್ಲಿ ಕರೆತರುವುದು. ಅಲ್ಲಿ ಸಭೆ ನಡೆಸಿ ನಂತರ ಚನ್ನಗಿರಿ ಮಾರ್ಗದಲ್ಲಿ ದಾವಣಗೆರೆ ಜಿಲ್ಲೆಗೆ ಬೀಳ್ಕೋಡುವ ಯೋಜನೆ ಹೊಂದಿದ್ದೇವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷರಾದ ಡಿ. ಮಂಜುನಾಥ ವಿವರಿಸಿದರು.
ರಥ ಆಗಮಿಸುವ ಸಂದರ್ಭದಲ್ಲಿ ಜಿಲ್ಲೆಯ ಪರವಾಗಿ ಅಗತ್ಯ ಗೌರವ ಸಲ್ಲಿಸಲು ಜಿಲ್ಲಾ ಆಡಳಿತ, ತಾಲ್ಲೂಕು ಆಡಳಿತ, ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ ಸಂಘಟನೆಗಳು ಅಗತ್ಯ ಸಿದ್ದತೆ ಮಾಡಿಕೊಳ್ಳಲು ತೀರ್ಮಾನ ಮಾಡಲಾಗಿದೆ. ಕನ್ನಡದ ಮನಸ್ಸುಗಳು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಲು ಡಿ. ಮಂಜುನಾಥ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಉಪಾಧ್ಯಕ್ಷರಾದ ಭಾರತಿ ರಾಮಕೃಷ್ಣ, ತಾ. ಕಸಾಪ ಅಧ್ಯಕ್ಷರಾದ ಮಹಾದೇವಿ, ಜಿಲ್ಲಾ ಕೋಶಾಧ್ಯಕ್ಷರಾದ ಎಂ. ನವೀನ್ ಕುಮಾರ್, ಎಸ್. ಷಣ್ಮುಖಪ್ಪ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post