ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ನಗರದ ರಾಗಿಗುಡ್ಡದಲ್ಲಿ ಆರಂಭವಾಗಿದ್ದು, ಕೇಂದ್ರ ಸರ್ಕಾರ, ಪೊಲೀಸ್ ಹಾಗೂ ರಾಷ್ಟ್ರೀಯ ಭದ್ರತೆಯ ವಿಷಯವನ್ನಿಟ್ಟುಕೊಂಡು ಹಲವು ಕೋರ್ಸ್’ಗಳನ್ನು ಪ್ರಾರಂಭಿಸಿದೆ ಎಂದು ಕ್ಯಾಂಪಸ್ ನಿರ್ದೇಶಕ ಡಾ. ರಮಾನಂದ್ ಗರ್ಗೆ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಂದು ವರ್ಷದ ಅಲ್ಪಾವಧಿಯಲ್ಲಿಯೇ ಕ್ಯಾಂಪಸ್ ಗೆ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ತೆಲಂಗಾಣದಿಂದ ಅಗಾಧವಾದ ಬೆಂಬಲ ದೊರೆತಿದ್ದು, ಇದು, ಭದ್ರತಾ ನಿರ್ವಹಣೆ ಮತ್ತು ಸ್ನಾತಕೋತ್ತರ ಪದವಿ ಕ್ಷೇತ್ರದಲ್ಲಿ ಆರ್.ಆರ್.ಯು. ಮೊದಲ ಬ್ಯಾಚ್ ಆಗಿದೆ. ಪೊಲೀಸ್ ವಿಜ್ಞಾನ ಮತ್ತು ನಿರ್ವಹಣೆಯಲ್ಲಿ ಪದವಿ ಡಿಪ್ಲೊಮಾ ಮಾಡಲು ಶಿವಮೊಗ್ಗವು ಅನುಕೂಲಕರ ವಾತಾವರಣ ಕಲ್ಪಿಸಿದೆ ಎಂದರು.
ಯುವ ಕಾರ್ಯತಂತ್ರದ ಮನಸುಗಳನ್ನು ರೂಪಿಸುವ ಭದ್ರತಾ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಗುಣಾತ್ಮಕ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದ್ದು, ಪ್ರಸ್ತುತ ಕೋರ್ಸ್’ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಶೈಕ್ಷಣಿಕ ವರ್ಷದಲ್ಲಿ ಕ್ಲಿನಿಕಲ್ ಸೈಕಾಲಜಿ ಕ್ಷೇತ್ರದಲ್ಲಿ ಸ್ನಾತಕೋತ್ತರ ಮತ್ತು ರಕ್ಷಣಾ ಕಾರ್ಯತಂತ್ರದ ಅಧ್ಯಯನಗಳಲ್ಲಿ ಸ್ನಾತಕೋತ್ತರ ಕೋರ್ಸ್’ಗಳನ್ನು ಪರಿಚಯಿಸುತ್ತಿದೆ ಎಂದರು.
Also read: ಮೂಲ ವೇದ ಪರಂಪರೆ ಉಳಿವಿಗೆ ಗುರುಕುಲ ಮಾದರಿ ಶಿಕ್ಷಣ ಅಗತ್ಯ: ಅಭಿನವ ಶಂಕರ ಭಾರತೀ ಶ್ರೀ ಅಭಿಮತ
ಕ್ರಿಮಿನಾಲಜಿಯಲ್ಲಿ ಕೂಡ ಸ್ನಾತಕೋತ್ತರ ಪದವಿ ಪ್ರಾರಂಭವಾಗಿದೆ. ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವುದು ನಮ್ಮ ಗುರಿಯಾಗಿದ್ದು, ಕೋರ್ಸ್’ಗಳು ಸೇವಾ ವೃತ್ತಿಪರರಿಗೆ ದೇಶೀಯ ಮತ್ತು ಜಾಗತಿಕ ಮಟ್ಟದಲ್ಲಿ ಸಮಗ್ರ ಭದ್ರತಾ ಗುಣಾತ್ಮಕವಾಗಿ ಕೊಡುಗೆ ನೀಡಲು ಸಕ್ರಿಯಗೊಳಿಸುತ್ತದೆ ಎಂದರು.
ಹೊಸದಾಗಿ ಜಾರಿಗೆ ತಂದ ಕ್ರಿಮಿನಲ್ ಕಾನೂನುಗಳ ಕುರಿತು ಮೂರು ದಿನಗಳ ತರಬೇತಿಯನ್ನೂ ಕೂಡ ಪ್ರಾರಂಭಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಪೊಲೀಸ್ ಅಧಿಕಾರಿಗಳಿಗೆ ಪರಿವರ್ತನಾ ಸುಧಾರಣೆಗಳು, ಹೊಸದಾಗಿ ಜಾರಿಗೊಳಿಸಲಾದ ಕ್ರಿಮಿನಲ್ ಕಾನೂನುಗಳ ಅವಲೋಕನ ಎಂಬ ತರಬೇತಿ ಕಾರ್ಯಕ್ರಮವನ್ನು ಜು. 22, 23, 24 ರಂದು ಹಮ್ಮಿಕೊಂಡಿದ್ದು, ಜಿಲ್ಲಾ ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಜ್ಞ ಅಧ್ಯಾಪಕ ಡಾ. ನಂದಕುಮಾರ್ ಪೂಜಾಮ್ ಎಸ್., ಡಾ. ಕಾವೇರಿ ಟಂಡನ್, ಡಾ. ಶಿವಲಿಂಗಪ್ಪ ಅಂಗಡಿ, ಚಂದ್ರಶೇಖರ್, ರಂಗಪ್ಪ, ಹರ್ಷಿತಾ ಮಿಶ್ರಾ, ಡಾ. ಕಾವೇರಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post